ತುಮಕೂರು : ತುಮಕೂರು ಜಿಲ್ಲೆಯ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ಐದು ನೂರು ಕೋಟಿ ರೂಗಳ ಅನುದಾನವೇ ಕಾರಣ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದ ಟೌನ್‍ಹಾಲ್ ಮುಂಭಾಗದಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 80ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ, ಶಾಲಾ ಮಕ್ಕಳಿಗೆ ವಸ್ತ್ರ ವಿತರಿಸಿ, ರೈತರಿಗೆ ಮತ್ತು ಹೈನುಗಾರರಿಗೆ ಹಾಲು ಕರೆಯ ಕ್ಯಾನ್ ವಿತರಿಸಿ ಮಾತನಾಡುತಿದ್ದ ಅವರು, ಹೇಮಾವತಿ ನಾಲೆಯ 72 ಕಿ.ಮಿಯಿಂದ 226ನೇ ಕಿ.ಮಿ. ವರಗೆ ನಾಲಾ ದುರಸ್ತಿಗೆ ಅನುದಾನ ನೀಡಿದ್ದರಿಂದ ಇಂದು ಜಿಲ್ಲೆಯ ಎಲ್ಲಾ ಕೆರೆಗಳು ತುಂಬಿವೆ. ಇದಕ್ಕಾಗಿ ನಾವು ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಅವರನ್ನು ಅಭಿನಂದಿಸಬೇಕಾಗುತ್ತದೆ ಎಂದರು.
ಇಂದು ವೇದಿಕೆಯ ಮೇಲಿರುವ ಕಾರ್ಪೋರೆಟರ್ಸ್ ಮತ್ತು ವಿವಿಧ ಹಂತದ ಜನಪ್ರತಿನಿಧಿಗಳು ಒಂದು ಕಾಲದಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದವರು. ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಅವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪರಿಣಾಮ ಇಂದು ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಇದಕ್ಕೆಲ್ಲಾ ಕಾರಣ ಬಿ.ಎಸ್.ಯಡಿಯೂರಪ್ಪ, ಒಂದು ಕಾಲದಲ್ಲಿ ಬಾವುಟ ಕಟ್ಟಲು ಜನರಿಲ್ಲದ ಬಿಜೆಪಿ ಪಕ್ಷವನ್ನು ತಮ್ಮ ಸಂಘಟನಾತ್ಮಕ ಶಕ್ತಿಯ ಮೂಲಕ ಹಂತ ಹಂತವಾಗಿ ಮೇಲಕ್ಕೆ ತಂದು ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದ್ದರ ಹಿಂದೆ ಬಿ.ಎಸ್.ಯಡಿಯೂರಪ್ಪನವರ ಸಾಂಘಿಕ ಶಕ್ತಿ ಅಡಗಿದೆ. ಅದು ನಮ್ಮಂತಹ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಸ್ಪೂರ್ತಿ ಡೆವಲಪ್ಪರ್ಸ್‍ನ ಎಸ್.ಪಿ.ಚಿದಾನಂದ ಮಾತನಾಡಿ, ಈ ದೇಶದಲ್ಲಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ರೈತರಿಗಾಗಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಎಂದರೆ ಅದು ನಮ್ಮ ಬಿ.ಎಸ್.ಯಡಿಯೂರಪ್ಪ, 2008ರಲ್ಲಿ ಮತ್ತು 2018ರಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯ ನೆರೆ, ಬರ ದಂತಹ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದಾಗ ತಕ್ಷಣದ ಅವರ ನೆರವಿಗೆ ಧಾವಿಸಿದ್ದಾರೆ. ಕೋವಿಡ್ ನಂತಹ ಸಾಂಕ್ರಾಮಿಕ ರೋಗದ ಸ್ಥಿತಿಯಲ್ಲಿಯೂ ರಾಜ್ಯದಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಂಡು, ರೋಗವನ್ನು ತಡೆಗಟ್ಟಿದ ಕೀರ್ತಿ ಬಿ.ಎಸ್.ವೈ ಅವರಿಗೆ ಸಲ್ಲುತ್ತದೆ.ಇವರ ಮಾರ್ಗದರ್ಶನ ಪಕ್ಷಕ್ಕೆ ಬೇಕಾಗಿದೆ ಎಂದರು.