ಮಾರ್ಚ್ 5 ಕೊರಟಗೆರೆಗೆ ಖರ್ಗೆ-ಐತಿಹಾಸಿಕ ಕಾರ್ಯಕ್ರಮವಾಗಿಸಲು ಡಾ.ಜಿ.ಪರಮೇಶ್ವರ್ ಕರೆ

ತುಮಕೂರು: ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ಕೊರಟಗೆರೆಗೆ ತಾಲ್ಲೂಕು ಕಾಂಗ್ರೆಸ್ ಕಛೇರಿ ಉದ್ಘಾಟನೆಗೆ ಬರುತ್ತಿದ್ದು, ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಐತಿಹಾಸಿಕ ಕಾರ್ಯಕ್ರಮವಾಗುವಂತೆ ಶ್ರಮಿಸಲು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.

ಮಾರ್ಚ್ 05 ರಂದು ಕೊರಟಗೆರೆ ತಾಲೂಕು ಕಾಂಗ್ರೆಸ್ ಭವನದ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು ಆಗಮಿಸುತ್ತಿರುವ ಹಿನ್ನೇಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಎಐಸಿಸಿ ಅಧ್ಯಕ್ಷರೊಬ್ಬರು ಜಿಲ್ಲೆಗೆ ಆಗಮಿಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ, ಹಾಗೂ ರಾಜ್ಯದ ಜನತೆಯ ಮನಸ್ಸಿನಲ್ಲಿ ಉಳಿಯುವಂತಹ ಕಾರ್ಯಕ್ರಮವನ್ನಾಗಿಸಬೇಕು ಎಂದರು.

ರಾಜ್ಯ ಮತ್ತು ದೇಶದಲ್ಲಿ ಜಾತಿ, ಜಾತಿ, ಧರ್ಮ, ಧರ್ಮಗಳ ನಡುವಿನ ವೈಮನಸ್ಸಿಂದ ಕದಡಿರುವ ಶಾಂತಿಯನ್ನು ಪುನರ್ ಸ್ಥಾಪಿಸಲು ಈ ಯುದ್ದದಲ್ಲಿ ಕಾಂಗ್ರೆಸ್ ಪಕ್ಷ ಜಯಿಸಲೇಬೇಕಿದೆ.ಆ ಮೂಲಕ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ತಡೆದು, ಅವರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತಹ ವಾತಾವರಣವನ್ನು ಕಾಂಗ್ರೆಸ್ ಪಕ್ಷದ ಖಾತರಿ ಪಡಿಸಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ಕೊರಟಗೆರೆ ರೀತಿಯಲ್ಲಿಯೇ ತುಮಕೂರು ಜಿಲ್ಲಾ ಕೇಂದ್ರದಲ್ಲಿಯೂ ಒಂದು ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಿಸುವ ಗುರಿ ಇದೆ. ಮಾರ್ಚ್ 5ರಂದು ಬಿಜೆಪಿ ಸೋಲಿಸುವ ಜೋಶ್‍ನಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತಷ್ಟು ಬಲ ತುಂಬಲಿದೆ.ಆ ಮೂಲಕ ಇಡೀ ದೇಶಕ್ಕೆ ಹೊಸ ಸಂದೇಶವೊಂದನ್ನು ರವಾನೆಯಾಗಲಿದೆ ಎಂದರು.

ಮಾಜಿ ಶಾಸಕ ಹಾಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ,ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆಯವರನ್ನು ಅದ್ದೂರಿಯಾಗಿ ಸ್ವಾಗತಿಸಿ,ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅಭಯ ನೀಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರುವುದು ಹುಡುಗಾಟದ ಮಾತಲ್ಲ.ಇಡೀ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣವನ್ನು ನಾವೆಲ್ಲರೂ ನಿರ್ಮಾಣ ಮಾಡಬೇಕಾಗಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಇಡೀ ದೇಶಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ ಎಂಬ ಸಂದೇಶವನ್ನು ನಾವೆಲ್ಲರೂ ಕಳುಹಿಸಬೇಕಾಗಿದೆ ಎಂದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ,ಕರ್ನಾಟಕದ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ ಹೋರಾಟವಾಗಿದೆ. ಹಾಗಾಗಿ ಪಕ್ಷ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.ಎಲ್ಲಾ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಪಕ್ಷದ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷವನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸೋಣ ಎಂದು ಸಲಹೆ ನೀಡಿದರು.

ಮಾಜಿ ಶಾಸಕಕರುಗಳಾದ ಕೆ.ಷಡಕ್ಷರಿ ಡಾ.ರಫೀಕ್ ಅಹಮದ್ ಮಾತನಾಡಿದರು. ಶಾಸಕರಾದ ಆರ್.ನಾರಾಯಣ್,ಹೆಚ್.ನಿಂಗಪ್ಪ, ಕೆ.ಎಸ್.ಕಿರಣಕುಮಾರ್,ಮಾಜಿ ಎಂ.ಎಲ್.ಸಿ ಬೆಮೆಲ್ ಕಾಂತರಾಜು, ರೆಡ್ಡಿ ಚಿನ್ನಯಲ್ಲಪ್ಪ, ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರರವಿಕುಮಾರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *