ಜಿದ್ದಿಗೆ ಬಿದ್ದವರಂತೆ ಹಾಲಿ-ಮಾಜಿ ಶಾಸಕರಿಂದ ಬಿಎಸ್‍ವೈ ಜನ್ಮದಿನಾಚರಣೆ

ತುಮಕೂರು : ತುಮಕೂರು ನಗರದಲ್ಲಿಂದು ಹಾಲಿ ಮತ್ತು ಮಾಜಿ ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನವನ್ನು ಜಿದ್ದಿಗೆ ಬಿದ್ದವರಂತೆ ಆಚರಿಸಿದ್ದು, ಬಿಜೆಪಿ ಕಾರ್ಯಕರ್ತರು ಇಕ್ಕಳದಲ್ಲಿ ಸಿಕ್ಕಿದಂತಾಗಿ ಎಲ್ಲಿ ಹೋಗೋದು ಎಲ್ಲಿ ಬಿಡೋದು ಎಂಬಂತಾಯಿತು ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬಂದವು.

ಬಿ.ಎಸ್.ಯಡಿಯೂರಪ್ಪನವರ 80ನೇ ಜನ್ಮದಿನವಾದ ಇಂದು ಶಾಸಕರಾದ ಜ್ಯೋತಿಗಣೇಶ್‍ರವರು ಆರ್‍ಟಿಓ ಕಛೇರಿಯ ಅಭಯ ಆಂಜನೇಯಸ್ವಾಮೀಜಿ ದೇವಾಲಯ ಬಳಿ ಆಚರಿಸಿ,ಪಕ್ಷದ ವಿಜಯಯಾತ್ರೆ ರಥಕ್ಕೆ ಚಾಲನೆ ನೀಡಿ ಉಪಹಾರದ ವ್ಯವಸ್ಥೆ ಮಾಡಿದ್ದರು, ಮಾಜಿ ಸಚಿವ ಸೊಗಡು ಶಿವಣ್ಣನವರು ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನ ಆಚರಿಸಿ, ಉಪಹಾರ ವ್ಯವಸ್ಥೆ ಮಾಡಿದ್ದರು.

ಕಳೆದ ಮೂರು ದಿನಗಳಿಂದ ತುಮಕೂರು ನಗರದ ಪ್ರಮುಖ ಸ್ಥಳ, ವೃತ್ತಗಳಲ್ಲಿ ಹಾಲಿ ಶಾಸಕರಾದ ಜ್ಯೋತಿಗಣೇಶ್ ಮತ್ತು ಮಾಜಿ ಸಚಿವರಾದ ಸೊಗಡು ಶಿವಣ್ಣನವರು ಪೈಪೋಟಿಗೆ ಇಳಿದವರಂತೆ ಯಡಿಯೂರಪ್ಪನವರ ಜನ್ಮದಿನಕ್ಕೆ ಶುಭಾಶಯ ಕೋರುವ ಪ್ಲೆಕ್ಸ್‍ಗಳು ಹಾಕಿರುವುದು ಕಂಡು ಬಂದಿತು

ಇನ್ನು ಒಂದು ತಿಂಗಳಲ್ಲಿ ವಿಧಾನಸಭಾಗೆ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಲಿದ್ದು, ಹಾಲಿ ಮತ್ತು ಮಾಜಿ ಶಾಸಕರುಗಳ ನಡುವೆ ಟಿಕೆಟ್ ಪೈಪೋಟಿ ಪ್ರಾರಂಭವಾಗಿದ್ದು, ಈಗಾಗಲೇ ಈ ಇಬ್ಬರೂ ಈ ಬಾರಿ ಬಿಜೆಪಿ ಪಕ್ಷದಿಂದ ನನಗೆ ಟಿಕೆಟ್ ಎಂದು ಮಾಧ್ಯಗೋಷ್ಠಿಗಳಲ್ಲಿ ಅವರದೇ ಆದ ಕೆಲ ವಿಷಯಾಧಾರಗಳನ್ನು ಇಟ್ಟುಕೊಂಡು ಟಿಕೆಟ್ ನಮ್ಮದೇ ಎಂದು ವಾದ ಮಂಡಿಸಿದ್ದಾರೆ.

ಹಾಲಿ ಶಾಸಕರು ನನ್ನ ಅಭಿವೃದ್ಧಿ ಕೆಲಗಳೇ ನನಗೆ ಟಿಕೆಟ್ ನೀಡಲು ಸಹಕಾರಿ ಎಂದರೆ, ಮಾಜಿ ಶಾಸಕರು ನನ್ನ 4 ಅವಧಿಯ ಅಭಿವೃದ್ಧಿ ಮತ್ತು ತುಮಕೂರು ಶಾಂತಿ ಹಾಗೂ ಜನರ ನಡುವಿನ ಪ್ರೀತಿಯನ್ನು ಪರಿಗಣಿಸಿ ಪಕ್ಷದ ನಾಯಕರು ನನಗೆ ಟಿಕೆಟ್ ನೀಡಲಿದೆ ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನವನ್ನು ಈ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಜನರ ಮಧ್ಯೆ ಆಚರಿಸಿದ್ದಾರೆ.

ಈ ಆಚರಣೆಯು ಒಂದೇ ಸಮಯದಲ್ಲಿ ನಡೆದಿದ್ದರಿಂದ ಕೆಲ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅತ್ತ ಧರಿ-ಇತ್ತ ಹುಲಿ ಎಂಬಂತಾಗಿ ಎಲ್ಲಿಗೆ ಹೋಗಬೇಕೆಂಬ ಇಕ್ಕಟ್ಟಿನಲ್ಲಿ ಸಿಲುಕ್ಕಿದ್ದಾಗಿ ಹೇಳಿಕೊಂಡು ಎಲ್ಲಿಯೂ ಹೋಗದೆ ಕೈ ಕೈ ಹಿಚುಕಿಕೊಂಡರೆನ್ನಲಾಗಿದೆ.

ಒಟ್ಟಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳು ಪೈಪೋಟಿ ಮತ್ತು ಜಿದ್ದಿಗೆ ಬಿದ್ದವರಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನವನ್ನು ಆಚರಿಸಿದ್ದನ್ನು ನೋಡಿದರೆ ಮುಂದೆ ಟಿಕೆಟ್ ಕಾವು ಮತ್ತುಷ್ಟು ಬಿಸಿಯಾಗಲಿದೆ ಎನ್ನಲಾಗುತ್ತಿದ್ದು, ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನುವಂತಾದರೂ ಆಶ್ಚರ್ಯವಿಲ್ಲವೆನ್ನಲಾಗುತ್ತಿದೆ.

-ಹೆಚ್‍ವಿವಿ

Leave a Reply

Your email address will not be published. Required fields are marked *