ಗುಬ್ಬಿ :ಬಚ್ಚಲು ಬಾಯಿಯ ಶಾಸಕರ ಜೊತೆಯಲ್ಲಿ ಎಂ ಎಲ್ ಸಿ ರಾಜೇಂದ್ರ ಅವರು ಸಭೆಗಳಲ್ಲಿ ಭಾಗವಹಿಸಿರುವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸುಮುರಿಸು ಆಗುತ್ತಿದೆ ಎಂದು ವಕೀಲ ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಜಿ.ಎಸ್ ಪ್ರಸನ್ನ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಂ.ಎಲ್.ಸಿ ರಾಜೇಂದ್ರ ಅವರು ಕಾಂಗ್ರೆಸ್ ಪಕ್ಷದಿಂದ ಗ್ರಾಮ ಪಂಚಾಯತಿ ಸದಸ್ಯರ ಮತದಿಂದ ಗೆದ್ದಿರುವ ಇವರು ಅಹಿಂದ ಸಂಘಟನೆಯನ್ನು ಮುನ್ನಡೆಸುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಮನಸಿನಲ್ಲಿತ್ತು. ಆದರೆ ಇವರ ನಡೆ ನುಡಿ ಹಾಗೂ ಗುಬ್ಬಿ ಶಾಸಕರನ್ನು ಗೆಲ್ಲಿಸುವುದಾಗಿ ಹೇಳಿಕೆ ನೀಡಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಋಣ ತೀರಿಸುವ ಭರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದು ಇದರಿಂದ ಪಕ್ಷದ ಸಂಘಟನೆಗೆ ತೊಂದರೆಯಾಗುತ್ತದೆ. ಹೊಂದಾಣಿಕೆಯ ರಾಜಕೀಯ ಮಾಡುವ ಭರದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆತಿರುವುದು ಎಷ್ಟು ಸರಿ. ಗುಬ್ಬಿ ಶಾಸಕರು ಕಾಂಗ್ರೆಸ್ ಗೆ ಬರುವುದಾದರೆ ಬರಲಿ ಸುಮಾರು ಇಪ್ಪತ್ತು ವರ್ಷಗಳಿಂದ ತಾಲೂಕಿನಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ ಕೆಲವು ನಾಯಕರಿದ್ದಾರೆ ಅವರನ್ನು ಮೊದಲು ಗೆಲ್ಲಿಸಿಕೊಂಡು ಬರಲಿ.
ಮುಂದಿನ ದಿನಗಳಲ್ಲಿ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸುತ್ತಾರೆ ಎಂದು ತಿಳಿಸಿದ ಅವರು ಪಕ್ಷದ ಒಳಗೆ ಬರಲು ದೈರ್ಯವಿಲ್ಲದ ಶಾಸಕ ಪಕ್ಷದ ಸಂಘಟನೆಯನ್ನು ಮುನ್ನಡೆಸುತ್ತಾರೆಯೇ ಎಂದು ಪ್ರಶ್ನಿಸಿದರು.
ಟಿಕೆಟ್ ಆಕಾಂಕ್ಷಿ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಋಣವನ್ನು ತೀರಿಸುವ ಭರದಲ್ಲಿ ಎಂ.ಎಲ್.ಸಿ ರಾಜೇಂದ್ರ ಅವರು ಕಾರ್ಯಕರ್ತರನ್ನು ಕಡೆಗಣಿಸಿರುವುದು ಸರಿಯಲ್ಲ, ಉಚ್ಛಾಟನೆಗೊಂಡ ಜೆಡಿಎಸ್ ಪಕ್ಷದ ಮುಖಂಡನನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂಬ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಇಪ್ಪತ್ತು ವರ್ಷಗಳಿಂದ ತಾಲೂಕಿನ ಕಾರ್ಯಕರ್ತರ ನೋವು ನಲಿವು ಅಸಮಾಧಾನದ ಸಂದರ್ಭದಲ್ಲಿ ಈ ರೀತಿ ವೇದಿಕೆಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದ ಅವರು ಕೇವಲ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ತಕ್ಷಣ ಟಿಕೆಟ್ ನೀಡುತ್ತಾರೆ ಎಂಬ ಕಲ್ಪನೆಯಲ್ಲಿರುವುದು ಸರಿಯಲ್ಲ ಎಂದ ಅವರು ಸ್ಥಳೀಯ ಶಾಸಕ ಇಲ್ಲಿಯವರೇವಿಗೂ ಯಾವುದೇ ಗುರುತರವಾದ ಕೆಲಸವನ್ನು ಮತದಾರರಿಗೆ ನೀಡದೆ ಇರುವುದು ಒಂದೆಡೆಯಾದರೆ ಈ ಶಾಸಕನ ಕೊಡುಗೆ ಪಟ್ಟಣದಲ್ಲಿ ಗುಂಡಿ ಬಿದ್ದ ರಸ್ತೆ, ಒಳ ಚರಂಡಿ ಕಾಮಗಾರಿಗಳು ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಹಳ್ಳದಲ್ಲೆ ಓಡಾಡುವ ಸ್ಥಿತಿಯನ್ನು ಇವರ ಅವಧಿಯಲ್ಲಿ ನಿರ್ಮಾಣವಾಗಿದೆ. ರಸ್ತೆ ಹಾಗೂ ಜಲ್ ಜೀವನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವುದು ಬಿಟ್ಟರೆ ಜನರಿಗೆ ಭೂಮಿ ಪೂಜೆ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿರುವುದು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ತಿಳಿಸಿದರು.
2023ರಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೇ ಸ್ಪರ್ಧೆಗೆ ಇಳಿಯುತ್ತಾರೆ ಹೊರತು ಆಮದು ವ್ಯಕ್ತಿಯ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಅಧ್ಯಕ್ಷ ಎಸ್.ಎಲ್ ನರಸಿಂಹಯ್ಯ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಗುಬ್ಬಿ ತಾಲೂಕಿನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಯಸಂದ್ರ ದಿಂದ ಶಿರಾ ತಾಲೂಕಿನವರೆಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು ಎಂದ ಅವರು ಮುಂಬರುವ ಚುನಾವಣೆಗೆ ನಮ್ಮ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ ಹಲವು ವ್ಯಕ್ತಿಗಳು ನಮ್ಮ ಪಕ್ಷದಲ್ಲಿಯೇ ಇದ್ದು, ಮತ್ತೊಬ್ಬರು ಹೊರಗಿನಿಂದ ಬರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಪ.ಪಂ ಸದಸ್ಯ ಮಹಮದ್ ಸಾಧಿಕ್, ಪ್ರಚಾರ ಸಮಿತಿ ಅಧ್ಯಕ್ಷ ಸಲೀಂ ಪಾಷಾ, ನಗರ ಅಧ್ಯಕ್ಷ ಶಿವಕುಮಾರ್, ಮಹಿಳಾ ಅಧ್ಯಕ್ಷೆ ರೂಪ, ನಿಟ್ಟೂರು ಬ್ಲಾಕ್ ಅಧ್ಯಕ್ಷ ಜಯಣ್ಣ, ಎಂ.ವಿ. ಶ್ರೀನಿವಾಸ್, ರಂಗನಾಥ್, ಮಂಜುನಾಥ್ ಉಪಸ್ಥಿತರಿದ್ದರು.