ಜಿಲ್ಲಾಮಟ್ಟದ ನಿವೃತ್ತ ಸರ್ಕಾರಿ ನೌಕರರ ಸಾಹಿತ್ಯ ಸಮಾವೇಶ

ತುಮಕೂರು: ನಿವೃತ್ತ ಸರ್ಕಾರಿ ನೌಕರರ ಸಾಹಿತ್ಯ ಜಿಲ್ಲಾಮಟ್ಟದ ಸಮಾವೇಶವನ್ನು ಅಕ್ಟೋಬರ್ 31ರಂದು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಿವೃತ್ತ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ಬಾ.ಹ,ರಮಾಕುಮಾರಿ ತಿಳಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ರಾಜ್ಯದಲ್ಲಿಯೇ ಪ್ರಪ್ರಥಮವಾಗಿದೆ. ವಿವಿಧ ಇಲಾಖೆ, ವಿವಿಧ ಹದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುವ ಅನೇಕ ನೌಕರರು ತಮ್ಮಲ್ಲಿರುವ ವೈವಿಧ್ಯ ರೀತಿಯ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ಸಿಗದೇ ಮೂಲೆಗುಂಪಾಗಿ ಬಿಡುವುದು ಹೆಚ್ಚು ಹಾಗೂ ಅವರಷ್ಟಕ್ಕೆ ಅವರೇ ನಿವೃತ್ತಿ ನಂತರ ಅಪ್ರಯೋಜಕರೆಂಬ ಭಾವದಿಂದ ಮಾನಸಿಕವಾಗಿ ನಿರಾಸಕ್ತಿ ಹೊಂದಿ ದೈಹಿಕವಾಗಿ, ಬೌದ್ಧಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುವುದು, ಆ ಮೂಲಕ ಅನಾರೋಗ್ಯಪೀಡಿತರಾಗುವುದನ್ನು ಕಾಣುತ್ತಿದ್ದೇವೆ. ಮನುಷ್ಯ ಸದಾ ಚಟುವಟಿಕೆಯಿಂದ ಕ್ರಿಯಾಶೀಲವಾಗಿದ್ದರೆ ಸಾಹಿತ್ಯಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಅಂತಹವುಗಳ ಬಾಧೆಯಿಂದ ಪಾರು ಮಾಡುತ್ತವೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಶಾಖೆಯಿಂದ ಇಂತಹುದೊಂದು ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.

ಅಕ್ಟೋಬರ್ 31 ರಂದು ಬೆಳಗ್ಗೆ 10-30 ಕ್ಕೆ ನಿವೃತ್ತ ಐಎಎಸ್ ಅಧಿಕಾರಿಯಾದ, ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಉತ್ತಮ ವಾಗ್ಮಿಗಳೂ ಸಾಹಿತಿಗಳೂ ಆಗಿರುವ ಡಾ. ಸಿ. ಸೋಮಶೇಖರ್ ಅವರು ಸಮಾವೇಶವನ್ನು ಉದ್ಘಾಟಿಸುವರು ಎಂದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎಲ್. ಭೈರಪ್ಪ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ಧಲಿಂಗಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಿವೃತ್ತ ಜಂಟಿ ಕೃಷಿ ನಿರ್ದೇಶಕರಾದ ಎ. ರಾಮದಾಸ್, ನಿವೃತ್ತ ಉಪನ್ಯಾಸಕರಾದ ಹೆಚ್. ಹನುಮಂತಯ್ಯ, ಶಿವಲಿಂಗಯ್ಯ ಮತ್ತು ಬಿಎಂಆರ್‍ಡಿ ಪ್ರಾಧಿಕಾರದ ನಿವೃತ್ತ ಅಪರ ನಿರ್ದೇಶಕರಾದ ಬಿ.ಆರ್. ನಟರಾಜಶೆಟ್ಟಿ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ನಿವೃತ್ತ ಸರ್ಕಾರಿ ನೌಕರ ಸಾಹಿತಿಗಳು” ಎಂಬ ವಿಷಯ ಕುರಿತು ಬಾ.ಹ. ರಮಾಕುಮಾರಿ ಅವರು ಉಪನ್ಯಾಸ ನೀಡಲಿದ್ದಾರೆ. ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಒಬ್ಬೊಬ್ಬರು ನಿವೃತ್ತ ನೌಕರ ಸಾಹಿತಿಗಳನ್ನು ಸನ್ಮಾನಿಸಲಾಗುವುದು. ನಿವೃತ್ತ ಪ್ರಾಂಶುಪಾಲರೂ ಸಾಹಿತಿಯೂ ಆದ ಎನ್. ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಸುಮಾರು 35 ಜನ ಕವನವಾಚನ ಮಾಡಲಿರುವರು, ಖ್ಯಾತ ಲೇಖಕಿ ಹಾಗೂ ಚಿಂತಕಿಯಾದ ಡಾ. ಬಿ.ಸಿ. ಶೈಲಾನಾಗರಾಜ್ ಆಶಯ ನುಡಿಗಳನ್ನಾಡುವರು. ನಿವೃತ್ತ ಡಿಡಿಪಿಐ ಪಿ. ಹುಚ್ಚಯ್ಯ, ಹೇಮಾವತಿ ನೀರಾವರಿ ಇಲಾಖೆಯ ನಿವೃತ್ತ ಕ್ಯಾಶಿಯರ್ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಪುಟ್ಟಸ್ವಾಮಿ, ನಿವೃತ್ತ ಶಿಕ್ಷಕರಾದ ಗುರುಮಲ್ಲಪ್ಪ ಮತ್ತು ಮಲ್ಲಿಕಾರ್ಜುನ ಇವರುಗಳ ಗೌರವ ಉಪಸ್ಥಿತಿ ಇರುತ್ತದೆ. ಖ್ಯಾತ ಕಲಾವಿದರಾದ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ಡಾ. ಕಲಾಶ್ರೀ ಲಕ್ಷ್ಮಣದಾಸ್ ಅವರು ನಿವೃತ್ತ ನೌಕರರು ನಡೆಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೌಲನೆ ನೀಡುವರು, ನಿವೃತ್ತ ಕೃಷಿ ಅಧಿಕಾರಿಗಳಾದ ಶಿವಲಿಂಗಯ್ಯ ಹಾಗೂ ನಿವೃತ್ತ ಸಂಗೀತ ಶಿಕ್ಷಕರಾದ ಬಸಪ್ಪ ಇವರ ಗೌರವ ಉಪಸ್ತಿತಿ ಇರುತ್ತದೆ, ಸುಮಾರು 27 ಜನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೇಖಕಿ ಬಿ.ಸಿ.ಶೈಲಾನಾಗರಾಜು, ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ಸರ್ಕಾರಿ ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅನಂತರಾಮಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *