ತುಮಕೂರು: ಶುದ್ಧಗಾಳಿ, ಶುದ್ಧ ನೀರು, ಶುದ್ಧ ಆಹಾರ ಸಿಕ್ಕಾಗ ಮಾತ್ರ ಆರೋಗ್ಯ ಭಾರತವನ್ನು ಕಾಣಲು ಸಾಧ್ಯ. ನಮ್ಮ ಜೀವನ ಶೈಲಿ ಬದಲಾವಣೆ ಪ್ರಕೃತಿಯ ಮೇಲೆ ಆಕ್ರಮಣದಿಂದಾಗಿ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದು ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ವಯಸ್ಕರಲ್ಲೆ ಹೃದಯ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮಧುಮೇಹ, ಕ್ಯಾನ್ಸರ್, ಪಾಶ್ರ್ವವಾಯು ಜೊತೆಗೆ ಮೊಬೈಲ್ ಸ್ಕ್ರೀನ್ ಅಡಿಕ್ಷನ್ ರೋಗವು ನಮ್ಮ ಸುತ್ತಮುತ್ತಲಿನ ಪರಿವೆಯೇ ಇಲ್ಲದಂತೆ ಮನುಷ್ಯನನ್ನು ಏಕಾಂಗಿಯಾಗಿಸಿದೆ ಎಂದರು.
ವೈದ್ಯಕೀಯ ವೃತ್ತಿಗೆ ಬರುವವರಲ್ಲಿ ಬದ್ದತೆ, ತಾಳ್ಮೆ ಅನುವುದು ಬಹಳ ಮುಖ್ಯ. ನೀವು ಅಲೋಪತಿ, ಹೋಮಿಯೋಪತಿ, ನ್ಯಾಚರೋಪತಿ ಹೀಗೆ ಯಾವುದೇ ವೈದ್ಯಕೀಯ ಪದ್ದತಿ ಪ್ರಾಕ್ಟೀಸ್ ಮಾಡಿ. ಸೇವೆಯಲ್ಲಿ ಮಾನವೀಯತೆ ಬಹಳ ಮುಖ್ಯ. ಗ್ರಾಮೀಣ ಭಾಗದಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುವ ವಾತಾವರಣ ನಿರ್ಮಾಣವಾಗಬೇಕಿದೆ. ತಮ್ಮದಲ್ಲದ ತಪ್ಪಿಗೂ ವೈದ್ಯರನ್ನು ಹೊಣೆ ಮಾಡಲಾಗುತ್ತಿದೆ. ಅವರು ನಮ್ಮಂತೆಯೇ ಮನುಷ್ಯರು. ದೇವರಾಗಲೀ, ಜಾದುಗಾರರಾಗಲೀ ಎಂಬುದನ್ನು ಸಮಾಜ ಮನಗಾಣಬೇಕು ಎಂದರು.
ರಾಜೀವ್‍ಗಾಂಧಿ ಆರೋಗ್ಯ ವಿ.ವಿ ಉಪಕುಲಪತಿ ಡಾ.ಎಂ.ಕೆ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾತ್ಯಾತೀತ ಶಿಕ್ಷಣ, ದಾಸೋಹ, ಆರೋಗ್ಯ ಸೇವೆಗೆ ಸಿದ್ಧಗಂಗೆ, ಆದಿಚುಂಚನಗಿರಿ, ಸಿರಿಗೆರೆ ಸೇರಿ ರಾಜ್ಯದ ಮಠಗಳು ಉತ್ತಮ ಉದಾಹರಣೆಯಾಗಿದ್ದು, ನಡೆದಾಡುವ ದೇವರೆನಿಸಿದ್ಧ ಡಾ.ಶ್ರೀ. ಶಿವಕುಮಾರ ಶ್ರೀಗಳು 45 ಸಾವಿರ ಮಕ್ಕಳಿಗೆ ಪ್ರತೀವರ್ಷ ತಮ್ಮ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಒದಗಿಸುವ ವ್ಯವಸ್ಥೆ ರೂಪಿಸಿದರು. ಮೆಡಿಕಲ್ ಕಾಲೇಜು ನಡೆಸುವುದು ಸುಲಭವಿಲ್ಲ. 400, 500ಕೋಟಿ ವೆಚ್ಚ ಮಾಡಬೇಕಾಗುತ್ತದೆ. ವಾಣಿಜ್ಯದ ಆಯಾಮಗಳು ಪ್ರವೇಶಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಿದ್ಧಗಂಗಾ ಮಠದವರು ಮಠದ ವ್ಯವಸ್ಥೆಗೂ ಧಕ್ಕೆಯಾಗದಂತೆ ಕಾಲೇಜನ್ನು ಮುನ್ನೆಡೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ವೈದಕೀಯ ಕ್ಷೇತ್ರ ಬೆಳವಣಿಗೆಯಾಗದ ಕಾರಣ ಮನುಷ್ಯನ ಸರಾಸರಿ ಆಯುಷ್ಯ 35 ವರ್ಷವಿತ್ತು. ಇದೀಗ ಆರೋಗ್ಯ ಕ್ಷೇತ್ರದಲ್ಲಿನ ಅಪಾರ ಸುಧಾರಣೆಯಲ್ಲಿ 78ಕ್ಕೆ ಏರಿಕೆಯಾಗಿದೆ. 600 ವೈದ್ಯಕೀಯ ಕಾಲೇಜುಗಳು ದೇಶದಲ್ಲಿ ತಲೆಎತ್ತಿದೆ. ಸಿದ್ಧಗಂಗಾ ಮೆಡಿಕಲ್ ಕಾಲೇಜು ಅತ್ಯುತ್ತಮ ಕಾಲೇಜಾಗಿ ಹೊರಹೊಮ್ಮುವ ಎಲ್ಲಾ ಗುಣಲಕ್ಷಣ ಹೊಂದಿದ್ದು, ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗೆಳೆಸಿಕೊಳ್ಳುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಉಪ ಕುಲಪತಿ ಡಾ.ಎಸ್.ಸಚ್ಚಿದಾನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿದ್ಧಗಂಗಾ ವೈದ್ಯಕೀಯ ಕಾಲೇಜು ಅತೀ ಕಡಿಮೆ ಅವಧಿಯಲ್ಲಿ ಅತ್ಯುದ್ಬುತ ಸೌಕರ್ಯಗಳನ್ನು ಹೊಂದಿ ವೈದ್ಯರನ್ನು ಲೋಕಕ್ಕೆ ಸಮರ್ಪಿಸಲು ಮುಂದಾಗಿದೆ. ವಿಶ್ವದಲ್ಲೆ ನಂ.1 ಆರೋಗ್ಯ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನಲ್ಲಿ ನೀವೆಲ್ಲ ವೈದ್ಯ ಪದವಿಗೆ ಸೇರಿರುವುದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಆಶೀರ್ವಚನ ನೀಡಿ ಪೂಜ್ಯ ಡಾ.ಶಿವಕುಮಾರಸ್ವಾಮೀಜಿ ಅವರು ಬದುಕಿದ್ದಾಗಲೇ ಮೂರು ಬಾರಿ ಮೆಡಿಕಲ್ ಕಾಲೇಜಿಗೆ ಪ್ರಯತ್ನ ಪಟ್ಟು ಅನುಮತಿ ದೊರೆಯದಿದ್ದಾಗ ಬೇಡವೇ ಬೇಡ ಎಂದು ಸುಮ್ಮನಾದರು. 2001ರಲ್ಲಿ ಸಂಸದ ಜಿ.ಎಸ್.ಬಸವರಾಜ್ ಅವರು ಸಿದ್ಧಗಂಗಾ ಆಸ್ಪತ್ರೆ ಸ್ಥಾಪಿಸಲು ಮುಂದಾಗಿ 2015ರವರೆಗೆ ಅರೆಬರೆಕಟ್ಟಡವಾಗಿಯೇ ಉಳಿದಿತ್ತು. ಕಡೆಗೆ 9 ಮಂದಿ ವೈದ್ಯರೇ ಮುಂದೆ ಬಂದು ಆಸ್ಪತ್ರೆ ಮುನ್ನೆಡೆಸುತೇವೆಂದಾಗ ಅವರಿಗೆ ಪೂರ್ಣ ಜವಾಬ್ದಾರಿ ವಹಿಸಲಾಯಿತು. ನಮ್ಮ ಪಾತ್ರವಿರದಿದ್ದರೂ ನೋವಿನ ಮಾತುಗಳನ್ನು ಕೇಳಬೇಕಾಯಿತು. ಕಡೆಗೆ ಮಠದ ಸುಪರ್ದಿಗೆ ತೆಗೆದುಕೊಂಡು ಅನಿವಾರ್ಯ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರಿಂದ ವೈದ್ಯಕೀಯ ಕಾಲೇಜು ಸ್ಥಾಪನೆಯ ನಿಯಮ ಸಡಿಲೀಕರಣ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಹಾಗೂ ಸ್ಥಳೀಯ ಆಡಳಿತದ ಸರ್ಕಾರದಿಂದ ವರ್ಷದೊಳಗೆ ಅನುಮತಿ ದೊರೆತು ಕಾಲೇಜು ತರಗತಿಗಳು ಆರಂಭಗೊಂಡಿವೆ. ಹಿಂದಿನ ಗುರುಗಳು ಹೇಳಿದಂತೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತುಕೊಡುತ್ತೆವೆ. ಮಠದ ವ್ಯವಸ್ಥೆಗೂ ಧಕ್ಕೆಯಾಗದಂತೆ ಕಾಲೇಜು ಆಸ್ಪತ್ರೆ ಮುನ್ನೆಡಯಲಿದೆ ಎಂದು ಸ್ಪಷ್ಟೀಕರಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಎಸ್. ಪರಮೇಶ್, ಪ್ರಾಂಶುಪಾಲೆ ಡಾ.ಶಾಲಿನಿ.ಎಂ., ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ,, ಆಡಳಿತ ಮಂಡಳಿಯ ಟಿಎಂ.ಸ್ವಾಮಿ,, ಎಸ್‍ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ,, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್,, ಎನ್.ಆರ್.ಜಗದೀಶ್,, ಕೋರಿ ಮಂಜಣ್ಣ, ಮೇಯರ್ ಪ್ರಭಾವತಿ ಸುಧೀಶ್ವರ್ ಉಪಸ್ಥಿತರಿದ್ದರು.