ಪಾವಗಡಕ್ಕೆ ಹೊಸಬರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಮುಖಂಡರ ಆಗ್ರಹ

ತುಮಕೂರು : ಪಾವಗಡ ವಿಧಾನಸಭಾ ಕ್ಷೇತ್ರದ ಟಿಕೆಟನ್ನು ಅಭಿವೃದ್ದಿ ಮಾಡದ ಹಾಲಿ ಶಾಸಕ ವೆಂಕಟರಮಣಪ್ಪನವರ ಕುಟುಂಬವರ್ಗಕ್ಕೆ ನೀಡಬಾರದೆಂದು, ಹೊಸಬರಿಗೆ ಕಾಂಗ್ರೆಸ್ ಟಿಕೆಟ್‍ನ್ನು ನೀಡಬೇಕೆಂದು ಪಾವಗಡ ತಾಲ್ಲೂಕು ಕಾಂಗ್ರೆಸ್ ಮುಖಂಡರುಗಳು ಒತ್ತಾಯಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ವೆಂಕಟರಮಣಪ್ಪ ಒಂದೇ ಕುಟುಂಬವೊಂದೇ ಕಾಂಗ್ರೆಸ್ ಪಕ್ಷ ಎಂಬಂತಾಗಿದೆ, ಶಾಸಕರು, ಜಿಲ್ಲಾಪಂಚಾಯಿತಿ ಮತ್ತು ಪಕ್ಷದ ಎಲ್ಲಾ ಅಧಿಕಾರವು ಒಂದೇ ಕುಟುಂಬದಲ್ಲೇ ಇರಬೇಕು ಎಂಬ ಮನೋಭಾವವನ್ನು ಇಟ್ಟುಕೊಂಡು ಬೇರೆಯವರಿಗೆ ಅವಕಾಶವನ್ನು ಮಾಡುತ್ತಿಲ್ಲ, ಅಲ್ಲದೆ ಪಾವಗಡ ತಾಲ್ಲೂಕು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ ಎಂದು ದೂರಿದರು.

ಪಾವಗಡ ತಾಲ್ಲೂಕು ಅಭಿವೃದ್ಧಿ ಹೊಂದದೆ ಹಿಂದುಳಿದಿರುವುದಕ್ಕೆ ಒಂದೇ ಕುಟುಂಬಕ್ಕೆ ರಾಜಕೀಯ ಮೀಸಲಿಟ್ಟಿರುವುದೇ ಕಾರಣವಾಗಿದೆ, ತಾಲ್ಲೂಕಿನಲ್ಲಿ ಜಲ್ವಂತ ಸಮಸ್ಯೆಗಳಿದ್ದರೂ ಬಗೆ ಹರಿಸಲು ಸಾಧ್ಯವಾಗಿಲ್ಲ, ಕಾಂಗ್ರೆಸ್ ಪಕ್ಷದಿಂದ ಗೆದ್ದಂತಹ ಶಾಸಕರು ಕಾರ್ಯಕರ್ತರು, ,ಮುಖಂಡರನ್ನು ಕಡೆಗಣಿಸುವುದಲ್ಲದೆ, ಯಾವ ರಾಜಕೀಯ ಅಧಿಕಾರವನ್ನು ಇತರರಿಗೆ ನೀಡದೆ ಎಲ್ಲಾ ರಾಜಕೀಯ ಅಧಿಕಾರವನ್ನು ಅವರ ಕುಟುಂಸ್ಥರು, ಬಂಧುಗಳೇ ಅನುಭಿವಿಸಬೇಕು, ಚಲಾಯಿಸಬೇಕು, ಇತರರಿಗೆ ಯಾವುದೇ ಅವಕಾಶವಿರುವುದಿಲ್ಲ ಎಂದರು.

ಈ ಬಾರಿಯಾದರೂ ಪಾವಗಡದ ಅಭಿವೃದ್ಧಿಯ ದೃಷ್ಠಿಯಿಂದ ವೆಂಕಟರಮಣಪ್ಪನವರ ಕುಟುಂಬ ಬಿಟ್ಟು ಬೇರೆಯವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಒತ್ತಾಯಿಸಿರುವುದಾಗಿ ತಿಳಿಸಿದರು.
ಪಾವಗಡ ತಾಲ್ಲೂಕನ್ನು ಕೈಗಾರೀಕಾ ಪ್ರದೇಶವೆಂದು ಘೋಷಿಸಲು ಅವಕಾಶವಿದ್ದರೂ ಇದುವರೆವಿಗೂ ಯಾವ ಉದ್ಯೋಗ ಸೃಷ್ಠಿಯನ್ನು ಮಾಡಿಲ್ಲ ಎಂದರು.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್‍ಗಾಗಿ ಕೋರ್ಟ್ ನರಸಪ್ಪ, ಮಾಜಿ ಶಾಸಕರುಗಳಾದ ಉಗ್ರನರಸಿಂಹಪ್ಪ, ಸೋಮಲನಾಯ್ಕ, ಗಾಯತ್ರಿಬಾಯಿ, ಡಾ||ಅರುಂಧತಿ, ಹೆಚ್.ಕೆಂಚಮಾರಯ್ಯ ಅವರುಗಳು ಕಾಂಗ್ರೆಸ್ ಪಕ್ಷದ ಟಿಕೆಟ್ ಅಕಾಂಕ್ಷಿಗಳಾಗಿದ್ದು, ಇವರಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ನಾಗೇಂದ್ರಪ್ಪ, ತಾ.ಪಂ.ಮಾಜಿ ಸದಸ್ಯರಾದ ಗೋಪಾಲರೆಡ್ಡಿ. ನಾಗರಾಜು, ಬೈರರೆಡ್ಡಿ, ಜಗನಾಥ್, ರಾಮಚಂದ್ರಪ್ಪ, ನರಸೀಯಪ್ಪ, ಹೆಚ್.ಕೆಂಚಮಾರಯ್ಯ ಇತರರಿದ್ದರು.

Leave a Reply

Your email address will not be published. Required fields are marked *