ಸಕಲಕಲಾವಲ್ಲಭ ಪ್ರೀತೀಶ್ ನಂದಿ ಇನ್ನಿಲ್ಲ

ಪಿ.ಲಂಕೇಶ್ ಅವರನ್ನು ‘’ಕನ್ನಡದ ಪ್ರೀತೀಶ್ ನಂದಿ’’ ಎಂದು ಹೇಳಬಹುದು, ಪ್ರೀತೀಶ್ ನಂದಿ ಅವರನ್ನು ‘’ಇಂಗ್ಲೀಷಿನ ಲಂಕೇಶ್’’ ಎನ್ನಲೂ ಬಹುದು. ಅಂತಹದ್ದೊಂದು ಸಾಮ್ಯತೆ ಇವರಿಬ್ಬರ ವ್ಯಕ್ತಿತ್ವ,ವೃತ್ತಿ,ಪ್ರವೃತ್ತಿಗಳಲ್ಲಿದೆ. ಇಲಸ್ಟ್ರೇಟೆಡೆ್ ವೀಕ್ಲಿಯನ್ನು ಮೆಚ್ಚಿಕೊಂಡವರು ಲಂಕೇ‍ಶ್ ಪತ್ರಿಕೆಯನ್ನು ಇಷ್ಟಪಡದೆ ಇರಲು ಸಾಧ್ಯವೇ ಇಲ್ಲ. ಬರವಣಿಗೆಯ ಶೈಲಿ, ವಿಷಯದ ಆಯ್ಕೆ, ಪ್ರಸ್ತುತಿ ಎಲ್ಲದರಲ್ಲಿಯೂ ಸಾಮ್ಯತೆಗಳನ್ನು ಕಾಣಬಹುದಿತ್ತು. ಬಡಕನ್ನಡದ ಲಂಕೇಶ್ ಪತ್ರಿಕೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಸಮೂಹದ ಇಲಸ್ಟ್ರೇಟೆಡ್ ವೀಕ್ಲಿಯ ಸಂಪನ್ಮೂಲಗಳಿಲ್ಲದೆ ಇದ್ದ ಕಾರಣ ಪ್ರಿಂಟಿಂಗ್, ಡಿಸೈನ್ ಗಳಲ್ಲಿ ಮತ್ತೊಬ್ಬರು ಸರಿದೂಗುವ ಸ್ಥಿತಿಯಲ್ಲಿ ಆ ಕಾಲದ ಯಾವ ಪತ್ರಿಕೆಯೂ ಇರಲಿಲ್ಲ.

ಪ್ರೀತೀಶ್ ನಂದಿ ಅವರಿಗಿಂತ ಹದಿನಾರು ವರ್ಷ ದೊಡ್ಡವರಾದ ಮತ್ತು ಅವರಿಗಿಂತ ಎರಡು ವರ್ಷ ಮೊದಲೇ ಸಂಪಾದಕರಾಗಿದ್ದ ಲಂಕೇಶ್ ಅವರು ಪ್ರೀತೀಶ್ ನಂದಿ ಅವರನ್ನು ಕಾಪಿ ಮಾಡಿದ್ದಾರೆ ಎಂದು ಹೇಳಲು ಆಧಾರಗಳೇ ಇಲ್ಲ. ಕನ್ನಡ ಬಾರದ ಪ್ರೀತೀಶ್ ನಂದಿ ಸಂಪಾದಕರಾಗುವ ಮೊದಲು ಲಂಕೇಶ್ ಪತ್ರಿಕೆಯನ್ನು ಓದಿರಲು ಕೂಡಾ ಸಾಧ‍್ಯ ಇಲ್ಲ. ಸೃಜನಶೀಲ ಮನಸ್ಸುಗಳು ಒಂದೇ ರೀತಿಯಲ್ಲಿ ಯೋಚಿಸುತ್ತವೆ ಎನ್ನುವುದು ಸಂಪೂರ್ಣ ಸುಳ‍್ಳಿರಲಾರದು.
ಪ್ರೀತೀಶ್ ನಂದಿ ಲಂಕೇಶ್ ಅವರಂತೆ ಕೇವಲ ಒಬ್ಬ ಪತ್ರಕರ್ತನಾಗಿರಲಿಲ್ಲ. ಕವಿ, ಚಿತ್ರಕಲಾವಿದ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ರಾಜಕಾರಣಿ ಹೀಗೆ ಅವರೊಬ್ಬ ಸಕಲಕಲಾ ವಲ್ಲಭ. ಲಂಕೇಶ್ ವ್ಯಕ್ತಿತ್ವದಲ್ಲಿಯೂ ಇವುಗಳಲ್ಲಿ ಕೆಲವು ಗುಣಗಳನ್ನಾದರೂ ಕಾಣಬಹುದಲ್ಲವೇ?

ಪ್ರೀತೀಶ್ ನಂದಿ ಅವರದ್ದು ವರ್ಣರಂಜಿತ ಮತ್ತು ಅಷ್ಟೇ ವೈವಿಧ್ಯಮಯ ಆಸಕ್ತಿಯ ವ್ಯಕ್ತಿತ್ವ. ಹದಿನೇಳನೆ ವರ್ಷಕ್ಕೆ ಮದುವೆಯಾದ, 24ನೇ ವರ್ಷಕ್ಕೆ ವಿಚ್ಚೇದನ ನೀಡಿ ಇನ್ನೊಂದು ಮದುವೆಯಾಗಿದ್ದ ಪ್ರೀತೀಶ್ ನಂದಿ ಅವರ ಹೆಸರು ರಾಖಿ ಗುಲ್ಜಾರ್ ಸೇರಿದಂತೆ ಹಲವಾರು ನಟಿಯರು ಮತ್ತು ಲೇಖಕಿಯರ ಹೆಸರಿನ ಜೊತೆ ತಳುಕುಹಾಕಿಕೊಂಡಿತ್ತು. 26ನೇ ವರ್ಷಕ್ಕೆ ಕವಿಯಾಗಿ ‘’ಪದ್ಮಶ್ರೀ’’ ಪ್ರಶಸ್ತಿ ಗಳಿಸಿದ ಪ್ರೀತೀಶ್ 27ನೇ ವರ್ಷಕ್ಕೆ ಟೈಮ್ಸ್ ಆಫ್ ಇಂಡಿಯಾದ ಪ್ರಕಾಶಕ ನಿರ್ದೇಶಕರಾದವರು. ಭಾಗಲ್ಪುರದಲ್ಲಿ ಹುಟ್ಟಿ ಬಂಗಾಳದಲ್ಲಿ ಬೆಳೆದು ಚಹಾ ಮಾರಾಟದಿಂದ ಹಿಡಿದು ಹಲವು ವೃತ್ತಿಗಳನ್ನು ಮಾಡಿ ಕೊನೆಗೆ ಮುಂಬೈ ಸೇರಿದವರು. ಖ್ಯಾತ ಚಿಂತಕ ಆಶೀಶ್ ನಂದಿ ಇವರ ಅಣ್ಣ. ದೇವರನ್ನು ನಂಬದ ಆದರೆ ಧರ್ಮ, ಪುರಾಣಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ ಮತ್ತು ಬರೆಯುತ್ತಿದ್ದ ಪ್ರೀತೀಶ್ ನಂದಿ ಕೊನೆಗೆ ಶಿವಸೇನೆ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿದ್ದವರು.

ಮೂಲತ: ಒಬ್ಬ ಕವಿ, ಇಂಗ್ಲೀಷ್ ಮತ್ತು ಬಂಗಾಲಿಗಳಲ್ಲಿ ಅವರ 30ಕ್ಕೂ ಹೆಚ್ಚು ಕವನಸಂಕಲನಗಳು ಪ್ರಕಟವಾಗಿವೆ.ಕತೆಗಳನ್ನೂ ಬರೆದಿದ್ದಾರೆ ಇದರ ಜೊತೆಗೆ ಒಳ್ಳೆಯ ಚಿತ್ರ ಕಲಾವಿದ, ಹತ್ತಾರು ಚಿತ್ರ ಪ್ರದರ್ಶನಗಳನ್ನು ನಡೆಸಿದ್ದಾರೆ. ಹಲವಾರು ಹಿಂದಿ ಚಿತ್ರಗಳನ್ನು ನಿರ್ಮಿಸಿದ ನೂರಾರು ಟಿವಿ ಸೀರಿಯಲ್ ಗಳನ್ನು ನಿರ್ಮಿಸಿ ನಿರ್ದೇಶಿಸಿದ ಪ್ರೀತೀಶ್ ನಂದಿ ಹೆಸರು ಗಳಿಸಿದ್ದು ಇಲಸ್ಟ್ರೇಟೆಡ್ ವೀಕ್ಲಿಯ ಸಂಪಾದಕರಾಗಿ (1982-1991). ಖುಷ್ ವಂತ್ ಸಿಂಗ್ ನಂತರ ಪ್ರಸಾರವೇ ಕುಸಿದುಬಿದ್ದು ಮುಚ್ಚುವ ಸ್ಥಿತಿಯಲ್ಲಿದ್ದ ಇಲಸ್ಟ್ರೇಟೆಡ್ ವೀಕ್ಲಿಯನ್ನು ಟೈಮ್ಸ್ ಗುಂಪಿನ ಅಶೋಕ್ ಜೈನ್ ಅವರು ಪ್ರೀತೀಶ್ ಗೆ ಒಪ್ಪಿಸಿದ್ದರು.

ಬರವಣಿಗೆಯನ್ನೂ ಬಲ್ಲ ಸಂಪಾದಕರಾಗಿದ್ದ ಪ್ರೀತೀಶ್ ನಂದಿ ಪತ್ರಿಕೆಯ ಕವರ್ ಸ್ಟೋರಿಗಳನ್ನು ಅವರೇ ಬರೆಯುತ್ತಿದ್ದರು. ರಾಮಕೃಷ್ಣ ಹೆಗಡೆ (ಬಾಟ್ಲಿಂಗ್ ) ವಿ.ಪಿ.ಸಿಂಗ್ (ಮಂಡಲ್ ವರದಿ) ಚಂದ್ರಶೇಖರ್ (ಟೆಲಿಪೋನ್ ಟ್ಯಾಪಿಂಗ್) ಅಡ್ವಾಣಿ (ರಥಯಾತ್ರೆ) ಮೊದಲಾದವರಿಗೆ ಸಂಬಂಧಿಸಿದ ವಿಶೇ಼ಷ ವರದಿಗಳು ಮತ್ತು ಸಂದರ್ಶನ ಗಳು ಆ ಕಾಲದ ಸಂಚಲನ ಸೃಷ್ಟಿಸಿದ್ದವು. ಇಂಗ್ಲೀಷ್ ಕತೆ-ಕವನಗಳು ಮಾತ್ರವಲ್ಲ ಬೇರೆ ಭಾಷೆಗಳ ಇಂಗ್ಲೀಷ್ ಕವನಗಳೂ ಅವರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಲಂಕೇಶ್ ಅವರ ಕವನಗಳೂ ಪ್ರಕಟವಾಗಿವೆ.

ರಾಷ್ಟ್ರಮಟ್ಟದ ಪತ್ರಿಕೆಗಳ ಸಂಪಾದಕರು ರಾಮಕೃಷ್ಣ ಹೆಗಡೆಯವರ ಅಖಂಡ ಅಭಿಮಾನಿಗಳಾಗಿದ್ದ ಕಾಲದಲ್ಲಿ ಹೆಗಡೆ ಅವರನ್ನು ರಾಷ್ಟ್ರಮಟ್ಟದಲ್ಲಿ ಅನಾವರಣ ಗೊಳಿಸಿದ್ದು ಇಲಸ್ಟ್ರೇಟೆಡ್ ವೀಕ್ಲಿ. ಹೆಗಡೆ ಕಾಲದ ಭ್ರಷ್ಟಾಚಾರದ (ಬಾಟ್ಲಿಂಗ್, ರೇವಜೀತು) ಬಗ್ಗೆ ಲಂಕೇಶ್ ಅವರೇ ಆ ಪತ್ರಿಕೆಗೆ ಲೇಖನ ಬರೆದಿದ್ದರು. ವರ್ಷದ ವ್ಯಕ್ತಿಗಳ ಗುಂಪಿನಲ್ಲಿ ನಮ್ಮವರಾದ ಮಲ್ಲಿಕಾರ್ಜುನ್ ಮನ್ಸೂರ್, ಶಿವರಾಮ ಕಾರಂತ, ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮೊದಲಾದವರು ಕಾಣಿಸಿಕೊಳ್ಳುತ್ತಿದ್ದರು.
ಯಾವುದೇ ಒಂದು ವಿದ್ಯಮಾನದ ಬಗ್ಗೆ ಇಲಸ್ಟ್ರೇಟೆಡ್ ವೀಕ್ಲಿಯ ಒಂದು ಕವರ್ ಸ್ಟೋರಿ ಓದಿದರೆ ಮತ್ತೆ ಬೇರೆ ಏನನ್ನೂ ಓದುವ ಅಗತ್ಯವೇ ಇರುತ್ತಿರಲಿಲ್ಲ, ಅಷ್ಟೊಂದು ಸಮಗ್ರವಾಗಿರುತ್ತಿತ್ತು. ಅದು ಲಾಂಗ್ ಸ್ಟೋರಿಗಳ ಪತ್ರಿಕೋದ್ಯಮ,.

ಈಗಿನಂತೆ ಎರಡು ನಿಮಿಷಗಳ ಓದಿನ 250 ಶಬ್ದಗಳ ಪತ್ರಿಕೋದ್ಯಮ ಅಲ್ಲ.
ಎಲ್ಲ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರದ ಇತಿಹಾಸದ ಕ್ಷೇತ್ರದ ಬಂಡಿ ಕೂಡಾ ಮುಂದಕ್ಕೆ ಚಲಿಸದೆ ಹಿಂದಕ್ಕೆ ಹೋಗುತ್ತಿರುವಾಗಲೇ ಅದನ್ನು ಮುಂದೆ ಮುಂದೆ ಎಳೆದು ತಂದಿದ್ದ ಸಾರಥಿಗಳು ಕಣ್ಮರೆಯಾಗುತ್ತಿರುವುದು ಇನ್ನಷ್ಟು ವಿಷಾದ ಮೂಡಿಸುತ್ತದೆ.

-ದಿನೇಶ್ ಅಮಿನ್ ಮಟ್ಟು.

Leave a Reply

Your email address will not be published. Required fields are marked *