ತುಮಕೂರ- ನಗರದ ಶೆಟ್ಟಿಹಳ್ಳಿ ಹಳೆಯ ರೈಲ್ವೆ ಗೇಟ್ ಬಳಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಹಾಗೂ ಭೀಮಸಂದ್ರದ ರೈಲ್ವೆ ಕೆಳ ಸೇತುವೆ ಕಾಮಗಾರಿಗಳಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಇಂದು ಶಿಲಾನ್ಯಾಸ ನೆರವೇರಿಸಿದರು.
ನಗರದ ಶೆಟ್ಟಿಹಳ್ಳಿ ರೈಲ್ವೆಗೇಟ್‍ನಲ್ಲಿ ಈಗಾಗಲೇ ರಸ್ತೆ ಕೆಳ ಸೇತುವೆಯನ್ನು ನಿರ್ಮಿಸಲಾಗಿದ್ದು, ಈ ಕೆಳ ಸೇತುವೆ ಮೂಲಕ ವಾಹನಗಳ ಸಂಚರಿಸುತ್ತಿವೆ. ಆದರೆ ವಾಹನ ದಟ್ಟಣೆ ಇರುವ ಕಾರಣ ಅಂಡರ್‍ಪಾಸ್‍ನಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟಕರವಾಗಿರುವುದನ್ನು ಮನಗಂಡ ಸಚಿವ ಸೋಮಣ್ಣ ಅವರು 2.49 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವ ಸೋಮಣ್ಣ ಅವರು, ರಾಜ್ಯದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಈ ಹಿಂದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಹಣ ನೀಡುತ್ತಿದ್ದವು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರಗಳು ಹಣ ಬಿಡುಗಡೆ ಮಾಡದಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಲೆವೆಲ್ ಕ್ರಾಸಿಂಗ್ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳಿಗೆ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುತ್ತಿದೆ ಎಂದರು.
ದೇಶಾದ್ಯಂತ ಎಲ್ಲ ಕಡೆಗಳಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ ಎಂದು ಅವರು ಹೇಳಿದರು.
ಏಪ್ರಿಲ್ 30 ರೊಳಗೆ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಹಾಗೂ ಹಾಸನ ಜಿಲ್ಲೆಯ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ಕಾಮಗಾರಿಗಳನ್ನು ಮುಂಬರುವ 2027 ರೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.
ನಾನು ಕೇಂದ್ರ ಸಚಿವನಾದ 9 ತಿಂಗಳಲ್ಲಿ ಜಿಲ್ಲೆಯ ಬಹುತೇಕ ರೈಲ್ವೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ಕೇವಲ ಕರ್ನಾಟಕವಲ್ಲದೆ ದೇಶದ ಇತರೆ ರಾಜ್ಯಗಳ ರೈಲ್ವೆ ಕಾಮಗಾರಿಗಳಿಗೂ ಪ್ರಧಾನಿ ನರೇಂದ್ರ ಮೋದಿಯವರು ಅನುದಾನ ನೀಡಿದ್ದಾರೆ ಎಂದರು.
ರೈಲ್ವೆ ಇಲಾಖೆ ರಕ್ಷಣಾ ಇಲಾಖೆಯ ಮತ್ತೊಂದು ಮುಖವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಇಂದು ಶಿಲಾನ್ಯಾಸ ನೆರವೇರಿಸಿರುವ ಪಾದಚಾರಿ ಸುರಂಗ ಮಾರ್ಗ ಹಾಗೂ ಭೀಮಸಂದ್ರದ ಬಳಿ ರೈಲ್ವೆ ಕೆಳ ಸೇತುವೆ ಕಾಮಗಾರಿಗಳನ್ನು ಮುಂದಿನ 7 ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಸುರೇಶ್‍ಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜು, ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ, ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಮಿತೇಶ್‍ಕುಮಾರ್ ಸಿನ್ಹಾ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ಪೂರಿಯಾ, ಕೃಷ್ಣಚೈತನ್ಯ, ಮಂಜುನಾಥ ಕನಮಡಿ, ರಾಜೀವ್ ಶರ್ಮಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ವೈ.ಹೆಚ್. ಹುಚ್ಚಯ್ಯ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನಯ್ಯ, ವೇದಮೂರ್ತಿ, ರುದ್ರೇಶ್, ಹನುಮಂತರಾಜು ಮತ್ತಿತರರು ಉಪಸ್ಥಿತರಿದ್ದರು.