ತುಮಕೂರು: ಹೆಣ್ಣು ಮಕ್ಕಳಿಗೆ ಭಾಷಣ ಮಾಡಿದರೆ ಸಾಲದು. ಅವರ ಹಕ್ಕುಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು ರಾಜಕೀಯ ಅವಕಾಶ ಅಗತ್ಯವಾಗಿ ಬೇಕಾಗಿದೆ, ಪ್ರಸ್ತುತ ಇರುವ ದೃಷ್ಟಿಕೋನಗಳು ಬದಲಾಗಿ ಘನತೆಯ ಬದುಕಿನ ಕಡೆಗೆ ಮಹಿಳೆಯರನ್ನು ಕೊಂಡೊಯ್ಯಬೇಕು. ಸಮಾನತೆ ಮತ್ತು ಘನತೆಯ ಬದುಕು ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು. ಆಗ ಮಾತ್ರ ಮಹಿಳಾ ಸಮಾನತೆ ಮತ್ತು ಸಬಲೀಕರಣಕ್ಕೆ ಅರ್ಥ ಸಿಗುತ್ತದೆ ಎಂದು ಬೆಂಗಳೂರಿನ ಲೇಖಕಿ, ಪತ್ರಕರ್ತೆ ಹೇಮಾ ವೆಂಕಟ್ ಹೇಳಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆ, ಈಶ್ವರಿ ಮಹಿಳಾ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಎಷ್ಟೆಲ್ಲಾ ಕಾಯ್ದೆ, ಕಾನೂನುಗಳು ರೂಪುಗೊಂಡಿದ್ದರೂ ಕೆಲವರಿಗೆ ಅವುಗಳ ಭಯವೇ ಇಲ್ಲ. ಪೋಕ್ಸೋ ಕಾಯ್ದೆ ಗಂಭೀರವಾಗಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ನಿಂತಿಲ್ಲ. ಇವೆಲ್ಲವನ್ನೂ ಗಮನಿಸಿದಾಗ ಇಂತಹ ದೌರ್ಜನ್ಯಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎನ್ನಿಸುತ್ತದೆ, ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸಮಾಜದಲ್ಲಿ ಸಂಘಟನಾತ್ಮಕ ಶಕ್ತಿ ರೂಪುಗೊಳ್ಳಬೇಕಿದೆ
ಎಂದರು.
ಹೆಣ್ಣು ಮಕ್ಕಳಿಗೆ ಭಾಷಣ ಮಾಡಿದರೆ ಸಾಲದು. ಅವರ ಹಕ್ಕುಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಸಮಾನ ಹಕ್ಕುಗಳಿಗಾಗಿ ಹೋರಾಡುತ್ತಲೇ ರಾಜಕೀಯ ಅವಕಾಶಗಳಿಗೂ ಬೇಡಿಕೆ ಇಡಬೇಕು. ಪ್ರಸ್ತುತ ಇರುವ ದೃಷ್ಟಿಕೋನಗಳು ಬದಲಾಗಿ ಘನತೆಯ ಬದುಕಿನ ಕಡೆಗೆ ಮಹಿಳೆಯರನ್ನು ಕೊಂಡೊಯ್ಯಬೇಕು. ಸಮಾನತೆ ಮತ್ತು ಘನತೆಯ ಬದುಕು ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು. ಆಗ ಮಾತ್ರ ಮಹಿಳಾ ಸಮಾನತೆ ಮತ್ತು ಸಬಲೀಕರಣಕ್ಕೆ ಅರ್ಥ ಸಿಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಮಲಾ ಗಂಗಹನುಮಯ್ಯ ಮಾತನಾಡಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಜವಾಬ್ದಾರಿ ಹೆಚ್ಚಿದೆ. ಮನೆಯ ಒಳಗೆ ಮತ್ತು ಹೊರಗೂ ಆಕೆ ದುಡಿಯಬೇಕು. ಇಂತಹ ಸಂದರ್ಭದಲ್ಲಿ ಆಕೆಯ ಹಕ್ಕುಗಳನ್ನು ಗೌರವಿಸಬೇಕು. ಸಾಧಕ ಮಹಿಳೆಯರನ್ನು ಎಲ್ಲರಿಗೂ ಪರಿಚಯಿಸಬೇಕು. ಅವರ ನಡೆ ನುಡಿಗಳು ಇತರರಿಗೆ ಪ್ರೇರಣೆಯಾಗಬೇಕು. ಪ್ರಶಸ್ತಿಗಳು ಅರ್ಥ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆಯು 25 ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಸಾಧನೆ ಮಾಡುತ್ತಿರುವ ಗ್ರಾಮೀಣ ಅರ್ಹರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಹರ್ಷದಾಯಕ. ಅರ್ಜಿ ಹಾಕದೇ ಇರುವವರನ್ನು ಹುಡುಕಿ ಅವರಿಗೆ ಪ್ರಶಸ್ತಿ ನೀಡುವುದರಿಂದ ಈ ಗೌರವ ಮತ್ತಷ್ಟು ಹೆಚ್ಚಳವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ ಕುಮಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಸಮಾನತೆ ಮತ್ತು ಸಬಲೀಕರಣ ಜೊತೆ ಜೊತೆಯಲ್ಲೇ ಸಾಗಬೇಕು. 1910 ರಿಂದ ಆರಂಭವಾಗಿರುವ ಕಾರ್ಮಿಕ ಮಹಿಳೆಯರ ಹೋರಾಟವನ್ನು ಗಮನಿಸಿದರೆ ಮಹಿಳಾ ದಿನಾಚರಣೆಯ ಅರ್ಥ ಏನೆಂಬುದು ತಿಳಿಯುತ್ತದೆ. ಈ ಹೋರಾಟಗಳ ಫಲವಾಗಿ ಇಂದು ಹಕ್ಕುಗಳು ಲಭ್ಯವಾಗಿವೆ. ಶಕ್ತಿ ಯೋಜನೆಯಂತಹ ವಿಶೇಷ ಯೋಜನೆಯನ್ನು ಸರ್ಕಾರ ಮಹಿಳೆಯರಿಗಾಗಿಯೇ ರೂಪಿಸಿದೆ. ಇದೆಲ್ಲದರ ಉದ್ದೇಶ ಮಹಿಳಾ ಸಬಲೀಕರಣ ಎಂದು ವಿವರಿಸಿದರು.
ಆಶಯ ನುಡಿಗಳನ್ನಾಡಿದ ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಉಪಾಧ್ಯಕ್ಷೆ ಬಾ.ಹ.ರಮಾಕುಮಾರಿ ಅವರು ಮಾತನಾಡಿ ಹಲವು ಸವಾಲುಗಳ ನಡುವೆ ಮಹಿಳೆ ಸಾಧನೆ ಮಾಡುವುದು ಸುಲಭದ ಮಾತಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಮತ್ತು ಬೆಳೆಸುವ ವಾತಾವರಣವನ್ನು ನಾವು ಪ್ರೋತ್ಸಾಹಿಸಬೇಕು. ಸಂಘಟನಾತ್ಮಕ ಚಟುವಟಿಕೆಗಳಿಗೂ ಅವಕಾಶ ನೀಡಬೇಕು. 1992 ರಲ್ಲಿ ಕಾನೂನು ವಿದ್ಯಾರ್ಥಿಗಳಿಂದ ಆರಂಭವಾದ ವರದಕ್ಷಿಣೆ ವಿರೋಧಿ ವೇದಿಕೆ ಮಹಿಳೆಯರ ಮೇಲಿನ ಎಲ್ಲ ರೀತಿಯ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುತ್ತಾ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುತ್ತ ಬಂದಿರುವುದರಿಂದ ಇದಕ್ಕೆ ರಾಜ್ಯ ಮಟ್ಟದಲ್ಲಿ ಒಂದು ವಿಶೇಷ ಮನ್ನಣೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷರಾದ ಎಂ.ಸಿ.ಲಲಿತ ಮಾತನಾಡಿ ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುತ್ತಾ ಬರಲಾಗಿದೆ. ಇದೇ ಪ್ರಥಮ ಬಾರಿಗೆ ದಿವಂಗತ ಕೆ.ಸಾಂಬಶಿವಪ್ಪ ಸ್ಮರಣಾರ್ಥ ಅನನ್ಯ ಪ್ರಕಾಶನದ ಸಾಹಿತ್ಯ ಪ್ರಶಸ್ತಿಯನ್ನು ಈ ಮಹಿಳಾ ದಿನಾಚರಣೆಯ ಮೂಲಕವೇ ಕೊಡ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಗುಬ್ಬಿ ತಾಲ್ಲೂಕು ಹಕ್ಕಿಪಕ್ಕ ಬಳಗದ ಗೀತಾ ಅವರಿಗೆ ಮಹಿಳಾ ಚೇತನ, ಚಿ.ನಾ.ಹಳ್ಳಿ ತಾಲ್ಲೂಕು ಹೊಯ್ಸಳಕಟ್ಟೆಯ ಬಿ.ಎಂ.ಶ್ರೀದೇವಿಯವರಿಗೆ ಮಹಿಳಾ ಸಾಧಕಿ, ತುಮಕೂರಿನ ಟಿ.ಸಿ.ಜಯಂತಿ ಅವರಿಗೆ ಶ್ರಮಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನನ್ಯ ಪ್ರಕಾಶನದ ದಿ.ಕೆ.ಸಾಂಬಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಯನ್ನು ಹೊನ್ನಾಳಿಯ ಶಿವಾನಂದ ಸೊರಟೂರು ಅವರಿಗೆ ಪ್ರದಾನ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಶಿವಣ್ಣ ಬೆಳವಾಡಿ ಅವರುಗಳು ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಿನೇಶ್, ಈಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಆರ್.ರಂಗಮ್ಮ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು. ಪಾರ್ವತಮ್ಮ, ಗಂಗಲಕ್ಷ್ಮಿ ತಂಡದವರು ಮಹಿಳಾ ಜಾಗೃತಿ ಗೀತೆಗಳನ್ನು ಹಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಸ್ವಾಗತಿಸಿದರು. ಸಿ.ಎಲ್.ಸುನಂದಮ್ಮ ಕಾರ್ಯಕ್ರಮ ನಿರೂಪಿಸಿ, ಪುಟ್ಟನರಸಯ್ಯ ವಂದಿಸಿದರು.