ತುಮಕೂರು: ಒರಟ ಐ ಲವ್ ಯು ಚಿತ್ರ ಖ್ಯಾತಿಯ ನಿರ್ದೇಶಕ ಒರಟ ಶ್ರೀ ನಿರ್ದೇಶಿಸಿರುವ ‘ಶಬರಿ’ ಚಲನಚಿತ್ರ ತಂಡದವರು ಸೋಮವಾರ ಬೆಳಿಗ್ಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲದೆ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ವೇಳೆ ಶಬರಿ ಚಿತ್ರದ ಭಿತ್ತಿಪತ್ರ ಬಿಡುಗಡೆ ಮಾಡಿದ ಸ್ವಾಮೀಜಿ, ಇಂದು ಮನುಷ್ಯ ಸಂಬಂಧಗಳ ನಡುವೆ ಕಂದಕಗಳು ನಿರ್ಮಾಣವಾಗಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ತಂದೆ-ಮಗಳ ಬಾಂಧವ್ಯದ ಮಹತ್ವ ಹೊಂದಿರುವ ಕಥೆ ಒಳಗೊಂಡ ಶಬರಿ ಚಿತ್ರವು ಕೌಟುಂಬಿಕ ಸಾಮರಸ್ಯ ಸಾರುವ ಚಿತ್ರವಾಗಿದೆ. ಇವತ್ತಿನ ದಿನಮಾ£ದಲ್ಲಿ ಜನರಲ್ಲಿ, ಸಮಾಜದಲ್ಲಿ ಬಾಂಧವ್ಯ ಬೆಸೆಯುವ, ಭಾವೈಕ್ಯತೆಯ ಭಾವನೆ ಬಿತ್ತುವ ಕೆಲಸ ಆಗಬೇಕು. ತಂದೆ-ಮಗಳು, ಗಂಡ-ಹೆಂಡತಿ, ಬಂಧುಬಳಗದ ನಡುವೆ ಬಿರುಕು ಹೆಚ್ಚಾಗುತ್ತಿದೆ. ಸಂಬಂಧಗಳ ನಡುವಿನ ಬಿರುಕು ಹೋಗಲಾಡಿಸಿ ಸೇತುವೆ ಕಟ್ಟುವ ಮೂಲಕ ಸಮಾಜದ ಪರಿವರ್ತನೆಗೆ ಈ ಚಿತ್ರ ಕಾರಣವಾಗಲಿ ಎಂದು ಸಿದ್ಧಲಿಂಗ ಸ್ವಾಮೀಜಿ ಹಾರೈಸಿದರು.

ಶಬರಿ ಚಿತ್ರ ನಿರ್ದೇಶಕ ಒರಟ ಶ್ರೀ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ. ಧನಿಯಾಕುಮಾರ್, ಶಬರಿ ಪಾತ್ರದಲ್ಲಿ ಅಭಿನಯಿಸಿರುವ ಕಲರ್ಸ್ ಕನ್ನಡ ವಾಹಿನಿಯ ‘ರಾಣಿ’ ಧಾರಾವಾಹಿಯ ರಾಣಿ ಪಾತ್ರಧಾರಿ ಧನ್ವಿ, ಚಿತ್ರದ ನಾಯಕ ಸಮರ್ಥ್, ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವ ಯೋಗೀಶ್ ವೀರ್ ಮೊದಲಾದವರು ಈ ವೇಳೆ ಹಾಜರಿದ್ದರು.
ಬರವಿ ಫಿಲಂ ಬ್ಯಾನರ್ ಅಡಿಯಲ್ಲಿ ಶಬರಿ ಚಿತ್ರ ನಿರ್ಮಾಣವಾಗಿದ್ದು, ರಮೇಶ್, ಸುಧಾಕರ ರೆಡ್ಡಿ, ವಿಷ್ಣುಕಾಂತ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ತಿಂಗಳ 23ರಂದು ಶಬರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ದೇಶಕರ ಒರಟ ಶ್ರೀ ಹೇಳಿದರು.