ಬಳ್ಳಾರಿ : ದೇಶ, ಜಾತಿ, ಧರ್ಮ, ವರ್ಗದ ಆಧಾರದ ಮೇಲೆ, ಭಾಷೆ ಆದಾರದ ಮೇಲೆ ಜನರನ್ನು ಒಡಯುವ ಕೆಲಸ ಮಾಡುತ್ತಿದ್ದಾರೆ, ಜನರ ಮನಸ್ಸಿನಲ್ಲಿ ವಿಷ ಹಿಂಡುತ್ತಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ಮಾನವ ವಿರೋಧಿ ಕೆಲಸ ಹೆಚ್ಚು ಆಗುತ್ತಾ ಇದೆ ಎಂದ ಅವರು, ಶ್ರೀರಾಮುಲು ಅವರೆ ಬಳ್ಳಾರಿಗೆ ನಿಮ್ಮ ಕೊಡುಗೆ ಏನು? ನಿಮಗೆ ಇತಿಹಾಸ ಗೊತ್ತಿಲ್ಲ ನೀನೊಬ್ಬ ಪೆದ್ದ ಎಂದು ಲೇವಡಿ ಮಾಡಿದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅವರಿಂದು ಬಳ್ಳಾರಿಯಲ್ಲಿ ಭಾರತ ಜೋಡೋ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಎಲ್ಲಾ ಕಡೆ ದ್ವೇಷದ, ಹಿಂಸೆಯ ರಾಜಕಾರಣ, ಜನರು ಇವತ್ತು ಭಯದ ವಾತವರಣದಲ್ಲಿ ಬದಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರು, ರೈತರು, ನೆಮ್ಮದಿ, ಶಾಂತಿಯಿಂದ ಬಾಳಲು ಆಗದಂತಹ ವಾತವರಣ ಸೃಷ್ಠಿಯಾಗಿದೆ ಎಂದರು.
ಕುವೆಂಪು ಭಾರತ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಹೇಳಿದರು. ಇಲ್ಲಿ ವಾಸ ಮಾಡುವ ಎಲ್ಲಾ ಜನರು ಶಾಂತಿ, ಪ್ರೀತಿ, ವಿಶ್ವಾಸದಿಂದ ಬದುಕುವಂತಹ ಸನ್ನಿವೇಶ ನಿರ್ಮಾಣವಾಗ ಬೇಕು. ಇದಕ್ಕೆ ತದ್ವಿರುದ್ಧವಾಗಿ ಆರ್.ಎಸ್.ಎಸ್ ಮತ್ತು ಸಂಘ ಪರಿವಾರದವರು ದೇಶದಲ್ಲಿ ಧರ್ಮದ ರಾಜಕಾರಣವನ್ನು ಮಾಡಲಿಕ್ಕೆ ಪ್ರಾರಂಭ ಮಾಡಿದ್ದಾರೆ, ಕರ್ನಾಟಕದಲ್ಲಷ್ಟೇ ಅಲ್ಲ ಇಡೀ ದೇಶದಲ್ಲಿ ಈ ನೀಚ ಕೆಲಸವನ್ನು ಆರ್.ಎಸ್.ಎಸ್., ಭಜರಂಗಿ ದಳ, ಹಿಂದು ಮಹಾಸಭಾ, ಹಿಂದೂ ಜಾಗರಣ ವೇದಿಕೆ ಈ ಕೆಲಸ ಮಾಡಲಿಕ್ಕೆ ಹೊರಟಿವೆ ಎಂದು ಹರಿಹಾಯ್ದರು.
ರಾಹುಲ್ ಗಾಂಧಿಯವರ ಪಾದ ಯಾತ್ರೆಯ ಬಗ್ಗೆ ಬಹಳ ಲಘುವಾಗಿ ಮಾತನಾಡುತ್ತಿದ್ದಾರೆ, ಬಿಜೆಪಿಗೆ ನಾನು ಕೇಳುತ್ತೇನೆ ರಾಹುಲ್ ಗಾಂಧಿಯವರು ಐತಿಹಾಸಿಕ ಪಾದಯಾತ್ರೆ ಮಾಡುತ್ತಿದ್ದಾರೆ, ಅವರ ಕುಟುಂಬದವರು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ, ನರೇಂದ್ರ ಮೋದಿಯವರೇ, ಅಮಿತ್ ಶಾರವರೇ ನಿಮ್ಮ ತ್ಯಾಗ ಏನು ಈ ದೇಶಕ್ಕೆ ಎಂದು ಕೇಳಬೇಕಾಗುತ್ತದೆ, ಕಾಂಗ್ರೆಸ್ ಪಕ್ಷ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದೆ, ಗಾಂಧಿ, ನೆಹರು ಹಾದಿಯಾಗಿ ಅನೇಕ ನಮ್ಮ ನಾಯಕರು ಜೈಲು ಅನುಭವಿಸಿದ್ದಾರೆ, ತ್ಯಾಗ, ಬಲಿದಾನಗೈದಿದ್ದಾರೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ, ಹುತಾತ್ಮರಾಗಿದ್ದಾರೆ, ನಾನು ಬಿಜೆಪಿಗೆ ಕೇಳುತ್ತೇನೆ ನಿಮ್ಮಲ್ಲಿ ಯಾರಾದರೂ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರಿದ್ದರೆ ಹೇಳಬೇಕು ಎಂದು ಸವಾಲೆಸದರು.
ಒಬ್ಬರೂ ಸಾಯಲಿಲ್ಲ, ಈ ಬಳ್ಳಾರಿಯಲ್ಲಿ ಒಬ್ಬ ರಾಮುಲು ಅಂತ ಜಿಲ್ಲಾ ಮಂತ್ರಿ ಇದ್ದಾರೆ ಅವರು ಇವತ್ತು ಕಾಂಗ್ರೆಸ್, ನೆಹರು ಕುಟುಂಬ ಈ ದೇಶಕ್ಕೆ ಏನೂ ಮಾಡಿಲ್ಲ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನೂ ಮಾಡಿಲ್ಲ ಎನ್ನುವ ಶ್ರೀರಾಮುಲಿಗೆ ಜ್ಞಾಪಿಸುತ್ತೇನೆ, ರಾಮುಲು ನಿನಗೆ ಇತಿಹಾಸ ಗೊತ್ತಿಲ್ಲ, ನೆಹರು, ಕಾಂಗ್ರೆಸ್‍ನವರ ಬಗ್ಗೆ ಮಾತನಾಡಲಿಕ್ಕೆ ನಿನಗೆ ಯಾವುದೇ ನೈತಿಕ ಹಕ್ಕಿಲ್ಲ, 1982ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಿದವರು ಯಾರಪ್ಪ ರಾಮುಲೂ, ಸಾವಿರಾರು ಜನರಿಗೆ ಉದ್ಯೋಗ, ಊಟ ಕೊಟ್ಟಿದ್ದರೆ ಅದಕ್ಕೆ ಶ್ರೀಮತಿ ಇಂದಿರಾ ಗಾಂಧಿಯವರು ಕಾರಣ ಎಂದು ಜ್ಞಾಪಕ ಮಾಡಿಕೊಳ್ಳಿ ಎಂದು ಶ್ರೀರಾಮುಲು ಅವರನ್ನು ಲೇವಡಿ ಮಾಡಿದರು.
ಸೋನಿಯಾ ಗಾಂಧಿಯವರು 1999ರಲ್ಲಿ ಬಳ್ಳಾರಿಯ ಲೋಕಸಭಾ ಚುನಾವಣೆಗೆ ನಿಂತು ಗೆದ್ದರು, ಅವರು ಲೋಕಸಭಾ ಸದಸ್ಯರಾದ ಮೇಲೆ ಕುಡತಿ ವಿದ್ಯುತ್‍ಚ್ಛಕ್ತಿ ಪ್ರಾಜೆಕ್ಟ್ ತಂದರು, 3300ಕೋಟಿ ರೂಪಾಯಿಗಳನ್ನು ತಂದು ಬಳ್ಳಾರಿಯನ್ನು ಅಭಿವೃದ್ಧಿ ಮಾಡಿದವರು ಶ್ರೀಮತಿ ಸೋನಿಯಾ ಗಾಂಧಿ, ನಿಮ್ಮದೇನಪ್ಪ ಕೊಡುಗೆ, ಬಿಜೆಪಿಯವರ ಕೊಡಿಗೆಯೇನು ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರು ಪ್ರಧಾನಿಯಾಗಿ 8ವರ್ಷವಾಯಿತು ಬಳ್ಳಾರಿ ಜಿಲ್ಲೆಗೆ 1ರೂಪಾಯಿ ಕೆಲಸವಾಗಿದೆ ಎಂದು ತೋರಿಸಿದರೆ, ರಾಮಲು ಚರ್ಚೆ ಮಾಡಲು ತಯಾರಾಗಿದ್ದೀಯ ನಿನ್ನಂತಹ ಪೆದ್ದನ ಜೊತೆ ಚರ್ಚೆ ಮಾಡಲು ತಯಾರಿಲ್ಲ, ಏನೂ ಮಾಡದೆ ನಿಮ್ಮ ಸಾಧನೆ ಏನು ಗೊತ್ತಾ ಲೂಟಿ ಹೊಡೆದ್ದೆ ನಿಮ್ಮ ಸಾಧನೆ. ಬಳ್ಳಾರಿ ಅಕ್ರಮ ಗಣಿಗಾರಿಕೆಯಲ್ಲಿ ಸೇರಿದ್ದವರು ಯಾರು? ಅದಕ್ಕೆ ಕುಮ್ಮಕ್ಕು ಕೊಟ್ಟವರು ಯಾರು? ಕಾಂಗ್ರೆಸ್‍ನವರು ಬಳ್ಳಾರಿಗೆ ಪಾದಯಾತ್ರೆ ಮಾಡಿದ ಮೇಲೆ ಇವರೆಲ್ಲರ ಮೇಲೆ ಕೇಸು ದಾಖಲಾಗಿ ಜನಾರ್ಧನರೆಡ್ಡಿ ಜೈಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಜನಾರ್ಧನರೆಡ್ಡಿ ಇವತ್ತು ಕೂಡ ಅನೇಕ ಕ್ರಿಮಿನಲ್ ಮೊಕದ್ದಮ್ಮೆಗಳನ್ನು ಎದುರಿಸುತ್ತಿದ್ದಾರೆ ರಾಮುಲೂ ನಿನಗೆ ಯಾವುದೇ ನೈತಿಕತೆ ಇಲ್ಲ, ಕಾಂಗ್ರೆಸ್‍ನವರ ಜೊತೆ ಚರ್ಚೆ ಮಾಡಲಿಕ್ಕೆ ಯಾವುದೇ ಆಧಾರವಿಲ್ಲ, ನಾನ್ಹೇಳಿತಿನಿ ರಾಮುಲು ನೀನು ಬಳ್ಳಾರಿಗೆ ಮಾಡಿರುವ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆ ಮಾಡಲು ಮಾಜಿ ಸಂಸದ ಉಗ್ರಪ್ಪನವರನ್ನು ಕಳಿಸಿ ಕೊಡುತ್ತೇವೆ ಎಂದು ಸವಾಲು ಹಾಕಿದರು.
ಇಂದು 40% ಕಮಿಷನ್ ಸರ್ಕಾರ ಎಂದು ಕರೆಯುವುದು ಯಾರಿಗೆ ಬಿಜೆಪಿ ಸರ್ಕಾರಕ್ಕೆ, ಅದು ನಾನು ಹೇಳಿದ್ದಲ್ಲ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದು, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಪ್ರತಿಯೊಂದು ಯೋಜನೆಗೆ 40% ಪರ್ಸೆಂಟ್ ಕಮಿಷನ್ ಕೇಳ್ತಾ ಇದ್ದಾರೆ ಎಂದು ಪತ್ರ ಬರೆದು 1ವರ್ಷವಾಯಿತು ನರೇಂದ್ರ ಮೋದಿಯವರು ಏನು ಕ್ರಮ ತೆಗೆದುಕೊಳ್ಳಲಿಲ್ಲ, ರಾಹುಲ್‍ಗಾಂಧಿಯವರು ಪಾದಯಾತ್ರೆ ಮಾಡಿದ ಮೇಲೆ ಈಗ ಜನಸಂಕಲ್ಪಯಾತ್ರೆ ಮಾಡುತ್ತಿದ್ದಾರೆ ಎಂದು ಕಿಚಾಯಿಸಿದರು.
ರಾಜ್ಯದ ಜನ ಸಂಕಲ್ಪ ಮಾಡಿದ್ದಾರೆ 2023ಕ್ಕೆ ನಿಮ್ಮ ಸರ್ಕಾರವನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್ ಸರ್ಕಾರ ತರಲಿದ್ದಾರೆ, ರಾಹುಲ್ ಗಾಂಧಿಯವರ ಪಾದಯಾತ್ರೆಗೆ ಸಿಗುತ್ತಿರುವ ಅಭೂತಪೂರ್ವವಾದ ಸ್ಪಂದನೆಗೆ ಬಿಜೆಪಿಯವರಿಗೆ ನಡುಕ ಹುಟ್ಟಿದೆ, ಭಯ ಹುಟ್ಟಿದೆ, ನಮ್ಮ ಸರ್ಕಾರ ಹೋಗುತ್ತೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ, ನಾವು ನುಡಿದಂತೆ ನಡೆದಿದ್ದೆವು, ನನಗೆ ರಾಹುಲ್ ಗಾಂಧಿಯವರು 5ವರ್ಷ ಮುಖ್ಯಮಂತ್ರಿಯಾಗುವ ಅವಕಾಶ ಮಾಡಿಕೊಟ್ಟಿದ್ದರು, 5 ವರ್ಷದಲ್ಲಿ ನುಡಿದಂತೆ ನಡೆದಿದ್ದೇವೆ, ಅದರ ಜೊತೆಗೆ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
2018ರಲ್ಲಿ ಕೊಟ್ಟ ಪ್ರಣಾಳಿಕೆ ಜಾರಿಗೆ ತರದೆ ಲೂಟಿ ಹೊಡೆದುಕೊಂಡು ಜನರ ಜೀವನ ಹಾಳು ಮಾಡುತ್ತಿದ್ದೀರಿ, ದೇಶ ಹಾಳು ಮಾಡುತ್ತಿದ್ದೀರಿ ಎಂದೇ ರಾಹುಲ್ ಗಾಂಧಿಯವರು ಭಾರತ ಜೋಡೋ ಯಾತ್ರೆ ಮೂಲಕ ಜನರನ್ನು ಒಟ್ಟುಗೂಡಿಸುವ, ಒಡೆದ ಮನಸ್ಸುಗಳ ಒಟ್ಟು ಮಾಡುತ್ತಿದ್ದಾರೆ ಎಂದರು.
ಇಂದು ಬೆಲೆ ಏರಿಕೆ ಏನಾಗಿದೆ ಕಚ್ಚಾ ತೈಲದ ಬೆಲೆ 125 ಡಾಲರ್ ಇದ್ದಾಗ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಡಿಸೇಲ್ ಬೆಲೆ 46ರೂ.ಗಳು, ಪೆಟ್ರೋಲ್ ಬೆಲೆ 71ರೂಪಾಯಿಗಳಿತ್ತು, ಇಂದು ಡಿಸೇಲ್ ಬೆಲೆ 95ರೂಪಾಯಿ, ಪ್ರಟ್ರೋಲ್ ಬೆಲೆ 102ರೂಪಾಯಿ, ಗ್ಯಾಸ್ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ 400ರೂಪಾಯಿ ಇತ್ತು, ಇಂದು 1050ರೂಪಾಯಿ ಆಗಿದೆ, 2015ರಲ್ಲಿ ಕ್ರೂಡ್ ಆಯಿಲ್ ಬೆಲೆ 40ರಿಂದ 45 ಇದ್ದರೂ ಬೆಲೆ ಇಳಿಸಲಿಲ್ಲ, ಇದನ್ನು ಜನರಿಗೆ ತಿಳಿಸಲೇ ಈ ಪಾದ ಯಾತ್ರೆ. 2014ರಲ್ಲಿ ಪ್ರತಿ ವರ್ಷ 2ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದರು, 8ವರ್ಷಕ್ಕೆ 16ಕೋಟಿ ಉದ್ಯೋಗ ಸೃಷ್ಠಿಸಬೇಕಾಗಿತ್ತು ಆದರೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿ ಹೋಗಿ ನಿರುದ್ಯೋಗ ತಂಡವಾಡುತ್ತಾ ಇದೆ ಎಂದು ಹೇಳಿದರು.
ರೈತರ ಸಂಕಷ್ಟ, ನಿರುದ್ಯೋಗ, ಇವನ್ನೆಲ್ಲಾ ಜನರಿಗೆ ಹೇಳ ಬೇಕಾಗಿದೆ 2020ಕ್ಕೆ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು, ಆದಾಯ ದುಪ್ಪಟ್ಟು ಆಗಲಿಲ್ಲ, ವ್ಯವಸಾಯಕ್ಕೆ ಖರ್ಚಾಗುವ ಹಣ ದುಪ್ಪಟ್ಟ್ಪಾಯಿತು, ರೈತರಿಗೆ ಸಬ್ಸಿಡಿ ಕೊಡಲಿಲ್ಲ, ಶ್ರೀಮತಿ ಇಂದಿರಾಗಾಂಧಿ ತಂದಿದ್ದ ಉಳುವವನೇ ಒಡೆಯ ಎಂಬ ಭೂಮಿಯ ಹಕ್ಕನ್ನು ರದ್ದು ಪಡಿಸಿ ಯಾರು ಬೇಕಾದರು ಎಷ್ಟು ಬೇಕಾದರೂ ಕೃಷಿ ಭೂಮಿಯನ್ನು ಕೊಳ್ಳಬಹುದು ಎಂಬ ಕಾನೂನು ತಂದಿದ್ದರಿಂದ ಸಣ್ಣ ಹಿಡುವಳಿದಾರರು, ದಲಿತರು, ಬಡವರು ಬೀದಿ ಪಾಲು ಮಾಡಿದ್ದಾರೆ ಇದನ್ನು ಜನರಿಗೆ ಹೇಳದಿದ್ದರೆ ದೇಶ ಉಳಿಯುತ್ತದೆಯೇ? ಎಂದು ಪ್ರಶ್ನಿಸಿದರು.
ಇವತ್ತು ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದಾಗ ಈ ದೇಶದ ಮೇಲಿದ್ದ ಸಾಲ 53ಲಕ್ಷದ 11ಸಾವಿರ ಕೋಟಿ ಆದರೆ ಇವತ್ತು 155ಲಕ್ಷ ಕೋಟಿ ಸಾಲವನ್ನು ದೇಶದ ಮೇಲೆ ಹೇರಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಮನಮೋಹನ್ ಸಿಂಗ್ ಸರ್ಕಾರದವರೆಗೆ ಆಗಿದ್ದ ಸಾಲ 53ಲಕ್ಷದ 11ಸಾವಿರ ಕೋಟಿ, ನರೇಂದ್ರ ಮೋದಿಯವರು ಕೇವಲ 8ವರ್ಷದಲ್ಲಿ 105 ಲಕ್ಷದ ಕೋಟಿ ರೂ.ಗಳ ಸಾಲವನ್ನು ಮಾಡಿದ್ದಾರೆ, ಅಚ್ಚೆ ದಿನ್ ಆಯಾಂಗೆ ಬಂತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದೇಶದ ರಾಷ್ಟ್ರದ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ, ಸಂವಿಧಾನ ಎಲ್ಲವಕ್ಕೂ ಆರ್.ಎಸ್.ಎಸ್ ಮತ್ತು ಸಂಘಪರಿವಾರದವರ ವಿರೋಧವಿದೆ. ಬಹಿರಂಗವಾಗಿ, ಆಂತರಿಕವಾಗಿ ನಮ್ಮ ಸಂವಿಧಾನವನ್ನೇ ವಿರೋಧ ಮಾಡುತ್ತಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಕಷ್ಟದಲ್ಲಿದೆ, ಅಪಾಯದಲ್ಲಿದ್ದಾವೆ ಇದನ್ನು ಉಳಿಸುವುದು ನಮ್ಮ ಜವಾಬ್ದಾರಿ, ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿರುವುದು ಬಾಬಾ ಸಾಹೇಬ ಅಂಬೇಡ್ಕರ್ ಕೊಟ್ಟಿರುವಂತಹ ಸಂವಿಧಾನದಿಂದ, ನಾನೂ ಮುಖ್ಯಮಂತ್ರಿಯಾಗಿದಿದ್ದು ಸಂವಿಧಾನದಿಂದ, ಜನಪ್ರತಿನಿಧಿಗಾಳಗಿರುವುದೇ ಸಂವಿಧಾನದಿಂದ ಅದನ್ನು ನಾಶ ಮಾಡಲಿಕ್ಕೆ ಹೊರಟಿದ್ದೀರಲ್ಲ ಅದಕ್ಕೋಸ್ಕರ ಈ ಪಾದಯಾತ್ರೆ ಎಂದು ಹೇಳಿ, ಈ ಪಾದ ಯಾತ್ರೆಯನ್ನು ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸುವುದಾಗಿ ಹೇಳಿದರು.