ಗುಬ್ಬಿ : ಒಬ್ಬ ಜನಪ್ರತಿನಿಧಿಯನ್ನು ಸೋಲಿಸದೇ ಪದೇ ಪದೇ ಗೆಲ್ಲಿಸಿದರೆ ಅವರು ಎಷ್ಟು ಕೀಳು ಮಟ್ಟಕ್ಕೆ ಇಳಿದು ಮಾತನಾಡ ಬಲ್ಲರು ಎಂಬುದಕ್ಕೆ ಗುಬ್ಬಿ ಶಾಸಕರಾದ ಎಸ್.ಆರ್. ಶ್ರೀನಿವಾಸ್ ಅವರು ಗುಬ್ಬಿ ತಾಲ್ಲೂಕಿನ ಸಮಾರಂಭದಲ್ಲಿ ಮಾತನಾಡಿರುವ ಮಾತುಗಳೇ ಸಾಕ್ಷಿ.
ಚುನಾವಣೆ ಬಂದ ಕೂಡಲೇ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಟಾರ್ ರಸ್ತೆಯನ್ನು ಮಾಡಿ ಕೊಟ್ಟಿದ್ದೇನೆ, ಈ ಊರಿಗೆ ಮಾಡಿಕೊಟ್ಟಿಲ್ಲ ಎಂದರೆ ಹ್ಯಂಗೆ, ನಮ್ಮಪ್ಪನಾಣೆ ಮಾಡಿ ಕೊಟ್ಟಿದ್ದೇನೆ. ನೀವು ಕಳೆದ ಮೂರು ಚುನಾವಣೆಯಲ್ಲೂ ನೀವೆಲ್ಲಾ ನನ್ನ ಪರವಾಗಿ ತಿರುಗಾಡಿದ್ದೀರಿ, ಈಗ ತಿರುಗಾಡಲು ಹೋಗಬೇಡಿ, ಹರಿಹರ ಬ್ರಹ್ಮ ಬಂದರೂ ಗೆಲ್ಲುವುದು ನಾನೇ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು ನನ್ನ ಹಣೆಯಲ್ಲಿ ನಾನೇ ಗೆಲ್ಲುವುದು ಎಂದು ಬರೆದಿದೆ, ಎಂತೆಂತh ಪ್ರಯತ್ನಗಳಾಗುತ್ತವೆ, ಅವನ್ಯಾವಾನೋ ಸಿ.ಎಸ್.ಪುರದಿಂದ ಬಂದವನೆ, ಏನು ಅಭಿವೃದ್ಧಿ ಮಾಡಿಲ್ಲ, ಅಭಿವೃದ್ಧಿ ಮಾಡಿಲ್ಲ ಎನ್ನುತ್ತಾನೆ, ಅಭಿವೃದ್ಧಿ ಎಂದರೆ ಏನು ಗೊತ್ತಿದೆಯಾ! ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಶಾಸಕನಾಗಿ ನಾಲ್ಕು ಭಾರಿ ಆಯ್ಕೆಯಾಗಿದ್ದೇನೆ, ನನ್ನ ಸೋಲಿಸಲು ಎಂತೆಂತಹ ದೊಂಬರಾಟ ಆಡುವ ದೊಂಬರು ಬಂದಿದ್ದಾರೆ ಎಂದು ಈ ಹಿಂದಿನ ಚುನಾವಣೆಯಲ್ಲಿ ಸೋತವರನ್ನು ಗೇಲಿ ಮಾಡುವ ಅವರು, ಎಲೆಕ್ಷನ್ ಮುಗಿದ ಮೇಲೆ ಯಾರೂ ಇರಲ್ಲ, ಎಲೆಕ್ಷನ್ ಬಂತು ಎಂದರೆ ವೇಶ ಹಾಕಿಕೊಂಡು, ಬಣ್ಣ ಹಾಕಿಕೊಂಡು ಬಿಡುತ್ತಾರೆ, ತಮಟೆ ಬಡಿಯಂಗಿಲ್ಲ, ಬಣ್ಣ ಹಾಕಿಕೊಂಡು ಯಾವ್ಯಾವ ಆಕ್ಟಿಂಗ್ ಆಡುತ್ತಾರೆ, ಯಾವ್ಯಾವ ವೇಷ ಭೂಷಣ ಹಾಕುತ್ತಾರೆ ಇವನ್ನೆಲ್ಲಾ ನೋಡುತ್ತಾನೆ ಇದ್ದೇನೆ, ಗೆಲ್ತಾನೆ ಇದ್ದೇನೆ, ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ನನ್ನ ಕುಂಡಲಿ ನೋಡಿ ಬಿಟ್ಟರೆ ಉಚ್ಚೆ ಹೊಯ್ದುಕೊಂಡು ಓಡುತ್ತಾರೆ ಎಂದು ಕೀಳು ಭಾಷೆಯಲ್ಲಿ ತಮ್ಮ ಎದುರಾಳಿಗಳನ್ನು ಲೇವಡಿ ಮಾಡಿದ್ದಾರೆ.
ಗೇರಾವ್ : ಗುಬ್ಬಿ ತಾಲ್ಲೂಕಿನ ಯಕ್ಕಲಕಟ್ಟೆ ಗ್ರಾಮಸ್ಥರು ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಕಾರನ್ನು ಅಡ್ಡಗಟ್ಟಿ ಗೇರಾವ್ ಹಾಕಿದಾಗ ಕಾರನ್ನು ಬಿಟ್ಟು ಬೈಕಿನ್ನೇರಿ ಪೇರಿ ಕಿತ್ತರು.