ಅಕ್ಟೋಬರ್ 18 ಇದೆಯಲ್ಲಾ ಅದು ನಾನು ಬದುಕಿರುವ ತನಕ ಮರೆಯಲು ಸಾಧ್ಯವಿಲ್ಲದ ದಿನವನ್ನಾಗಿ ಮಾಡಿ ಬಿಟ್ಟವರು ನಮ್ಮ ಬುದ್ಧ ಬಕಾಲ ಮುನಿ ಕೆ.ಬಿ.ಸಿದ್ದಯ್ಯನವರು.
ಕೆ.ಬಿ.ಯವರು ಪಾದರಸದಂತೆ ಸುತ್ತುತ್ತಾ ಇದ್ದವರು ಅದೇನಾಯಿತೋ ಗೊತ್ತಿಲ್ಲ, ಈ ಸುತ್ತಾಟವೆ ಅವರಿಗೆ ಸಾವನ್ನು ತಂದಿಟ್ಟು ಬಿಟ್ಟಿತು. ಎಲ್ಲಿ ಸಿಕ್ಕರು ಬಾಚಿ ತಂಬಿಕೊಂಡು ನೋಡೋ ಹೀಗೆ ಮನುಷ್ಯನನ್ನು ಮುಟ್ಟಿದಾಗ ಮಾತ್ರ ಇನ್ನೊಬ್ಬ ಮನಷ್ಯನ ಪ್ರೀತಿ ಗಳಿಸಲು ಸಾಧ್ಯ ಈ ಮುಟ್ಟುವಿಕೆ ಇದೆಯಲ್ಲಾ ಅದರಲ್ಲಿರುವ ಖುಷಿ, ಸಂತೋಷ ಮತ್ತೊಂದಿಲ್ಲ.
ನಾನು ಮುಟ್ಟಿಸಿಕೊಳ್ಳದ ಜಾತಿಯಲ್ಲಿ ಹುಟ್ಟಿ ಅಕ್ಷರಗಳನ್ನು ಮುಟ್ಟಿದ ಮೇಲೆಯೇ ಆ ಅಕ್ಷರಗಳಿಗೆ ಮುಕ್ತಿ ಸಿಕ್ಕಿದ್ದು, ಇಲ್ಲದಿದ್ದರೆ ಅದ್ಹೇಗಯ್ಯ ಅವುಗಳಿಗೆ ಮುಕ್ತಿ ಸಿಗ್ತಾ ಇತ್ತು ಎಂದು ತಮ್ಮ ಸುತ್ತ ಕುಳಿತ ಗುಂಡು ಶಿಷ್ಯೋತ್ತಮರಿಗೆ ಪ್ರಶ್ನಿಸ ಪಕಾರನೇ ನಕ್ಕು ಬಿಡುತ್ತಿದ್ದರು.
ಇರುವುದನ್ನು ಇಲ್ಲದಂತೆಯೂ, ಇಲ್ಲದನ್ನು ಇರುವಂತೆಯೂ ರೂಪಕ ಕೊಟ್ಟು ಶಿಷ್ಯರನ್ನು ಆಕಾಶದಲ್ಲಿ ತೇಲುವಂತೆ ಮಾಡುತ್ತಿದ್ದ ಕೇ.ಬಿ. ಯಾವ ಕ್ಷಣದಲ್ಲಿ ಎಲ್ಲಿರುತ್ತಿದ್ದರೂ ಆ ಬಕಾಲ ಮುನಿಗೂ ಇವರ ಇರುವಿಕೆ, ಬರುವಿಕೆ ಕಂಡು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ.
ದಾರಿಯಲ್ಲಿ ಮುನಿಯಂತೆ ಸಂಚರಿಸುತ್ತಿದ ಕೆ.ಬಿ.ಯವರು ಎದುರಿಗೆ ತಮ್ಮ ಪರಿಚಯಸ್ಥರು, ಗೆಳೆಯರು, ಶಿಷ್ಯರು, ಸಿಕ್ಕ ಕೂಡಲೇ ಕಾರನ್ನು ನಿಲ್ಲಿಸಿ ಅಯೋಗ್ಯ ನೀನು ಇನ್ನ ಬದುಕಿದ್ದೀಯ, ಅವನ್ಯಾವನೋ ನೀನು ದೇವರ ಪಾದ ಸೇರಿಕಂಡು ಬಿಟ್ಟೆ ಎಂದು ಪಕಾರನೇ ನಕ್ಕ ಬಿಡುತ್ತಿದ್ದರು, ಆ ನಗುವಿಗೆ ಎದರಿನ ಮನುಷ್ಯ ಪ್ರೀತಿಯಿಂದ ನಾಚಿಕೆಯಿಂದ ಇವರ ಪರವಶಕ್ಕೆ ಒಳಗಾಗಿ ಬಿಡುತ್ತಿದ್ದ, ಅಲ್ಲಿಂದಲೇ ಕೆ.ಬಿ. ಇವರನ್ನು ಬಿಟ್ಟರು ಅವರು ಬಿಡುತ್ತಿರಲಿಲ್ಲ, ಇವರು ಬಿಟ್ಟರು ಕೇ.ಬಿ. ಇವರನ್ನು ಬಿಡುತ್ತಿರಲ್ಲಿಲ್ಲ, ಬೆನ್ನಿತ್ತಿದ ಬೇತಾಳದಂತೆ ಒಬ್ಬರ ಬೆನ್ನನ್ನು ಒಬ್ಬರು ಹತ್ತಿಕೊಂಡೇ ಸವಾರಿ ಮಾಡುತ್ತಿದ್ದರು.
ಈ ಸವಾರಿ ಯಾವ ಮೂಲೆಗೆ ಹೋಗುತ್ತದೆ, ಯಾವ ಮೂಲೆ ಮುಟ್ಟುತ್ತದೆ ಎಂಬುದು ಯಾರಿಗೂ ಗೊತ್ತಿರುತ್ತಿರಲಿಲ್ಲ, ಎಲ್ಲೋ ಹೋಗಿ ನಿಂತಾಗ ಏಯ್ ಆಯೋಗ್ಯ ಎಲ್ಲಿದ್ದೀವಿ ಎಂದಾಗ ಎಲ್ಲರೂ ಕೊಡವಿಕೊಂಡು ಎದ್ದಾಗ ನಿಮ್ಮಂತಹವರನ್ನೆಲ್ಲಾ ನನ್ನ ಜೊತೆ ಇಟ್ಟುಕೊಂಡು ಮೂರ್ಖನಾಗಿ ಬಿಟ್ಟಿ, ತಿಂತೀರೋ-ಕುಡಿತೀರೋ ಎಂದಾಗ ಈ ಕಡೆಯಿಂದ ಎರಡೂ ಸಾರ್ ಎನ್ನುತ್ತಿದ್ದರು, ಹಾಗಾದರೆ ಬಿಲ್ ಎತ್ತುವವರು ಯಾರೋ ಎಂದಾಗ ಸಮಾರಾಧನೆಯ ಕೊನೆಯಲ್ಲಿ ಯಾವುದಾದರೂ ಬಕರ ಸಿಕ್ಕೆ ಸಿಗುತ್ತಿತ್ತು.
ಆ ಬಕಾರಗೇ ಕೊನೆಯ ಹಂತದಲ್ಲಿ ಕೇ.ಬಿ.ಯವರು ಪೋನ್ ಮಾಡಿ ಎಲ್ಲೀದ್ದೀಯೋ ಅನ್ನುತ್ತಿದ್ದರು, ಇಂತಹ ಕಡೆ ಇದ್ದೇನೆ ಬಾ ಇಲ್ಲಿ ಅನ್ನುತ್ತಿದ್ದರು. ಒಂದ್ಹತ್ತು ನಿಮಿಷದಲ್ಲಿ ಗುರುಗಳ ಆಜ್ಞೆಯನ್ನು ಮೀರಲು ಆಗದೆ, ತಪ್ಪಿಸಿಕೊಳ್ಳಲು ಆಗ್ದೆ ಅವರ ಮುಂದೆ ಬಂದು ನಿಂತಾಗ ಮತ್ತೊಮ್ಮೆ ಪಕಾರನೇ ನಕ್ಕು ಬಿಡುತ್ತಿದ್ದರು.
ಆಗ ನೋಡೋ ಈ ಅಯೋಗ್ಯರು ನನ್ನ ಕರಕಂಡು ಬಂದು ಇಲ್ಲಿ ಕೆಡಿವಿದ್ದಾರೆ, ಇವರ ಹತ್ರ ದುಡ್ಡಿಲ್ಲ ನೀನು ಅದೇನು ಕುಡಿತೀಯ, ತಿನ್ನುತ್ತೀಯ ತಿಂದು ಬಿಲ್ ಕೊಡು ನಾನು ಸಂಬಳ ಆದ ಮೇಲೆ ಕೊಡುತ್ತೀನಿ ಅನ್ನುತ್ತಿದ್ದರು.ಅಲ್ಲಿ ಅಷ್ಟೊತ್ತಿಗೆ ತೇಲಾಡುತ್ತಿದ್ದ ಶೀಷೋತ್ತಮರು ಕೇ.ಬಿ.ಯವರಿಗೆ ಕೃತಜ್ಞರಾಗಿ ಕಾಲು ಕೀಳುತ್ತಿತ್ತು.
ಇಂತಹ ಕೇ.ಬಿ.ಯವರು ಅದೇ ವೇಗದಲ್ಲಿ ಪ್ರೀತಿ, ಕರುಣೆ, ಮೈತ್ರಿಯನ್ನು ಹಂಚಿ ಬಿಟ್ಟಿದ್ದರು, ಅದನ್ನು ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದರು ಎಂಬುದು ಅವರಿಲ್ಲದ ಈ ದಿನದಲ್ಲಿ ತಿಳಿಯುತಾ ಇದೆ.
ಕೇ.ಬಿ.ಯವರಿಲ್ಲದಾಗ ಅವರ ಬಗ್ಗೆ ಏನು ಹೇಳಿದರೂ ಅದು ಶೂನ್ಯವೇ ಸರಿ. ಈಗಲಾದರೂ ಕೇ.ಬಿ.ಗೆ ಎಲ್ಲಾ ಸೇರಿ ಒಂದು ಆತ್ಮೀಯ ಮಾತಿನ, ನಗುವಿನ ನಮನ ಸಲ್ಲಿಸುವ ದರ್ದು ಇದೆ ಎಂಬುದು ನನ್ನ ಆಶಯ, ಸಭೆ-ಸಮಾರಂಭಗಳಲ್ಲಿ ಅಲ್ಲ,
ನವೆಂಬರ್ 1ರಂದು ಕೆ.ಬಿರವರ “ದಕ್ಲಕಥಾ ದೇವಿ ಕಾವ್ಯ” “ಗಲ್ಲೆಬಾನಿ”, ನಾಟಕ: ರವಿಕುಮಾರ್ ನೀಹ
“ವಿ ದ ಪೀಪಲ್ ಆಫ್ ಇಂಡಿಯಾ” ನಾಟಕದ ಖ್ಯಾತ ನಿರ್ದೇಶಕಮಿತ್ರ ಕೆ ಪಿ ಲಕ್ಷ್ಮಣ್ ಅವರ ಕರೆಯ ಮೇರೆಗೆ ಬೆಂಗಳೂರಿಗೆ ಹೋಗಿದ್ದೆ. ಲಕ್ಷ್ಮಣ್ ತಾನು ಎಷ್ಟು ಗಟ್ಟಿಗ, ಸೂಕ್ಷ್ಮಸಂವೇದಶೀಲ ಎಂಬುದನ್ನು “ವಿ ದ ಪೀಪಲ್ ಆಫ್ ಇಂಡಿಯಾ” ನಾಟಕದಲ್ಲೇ ರುಜುವಾತು ಮಾಡಿದ್ದರು. ಅವರೊಂದಿಗಿನ ಅನೇಕ ಸಂದರ್ಭದ ಮಾತುಕತೆಗಳು ಅವರ ಬಗೆಗೆ ಗೌರವವನ್ನು ಇಮ್ಮಡಿಗೊಳಿಸಿದ್ದವು.
ಕೆ.ಬಿ ಸಿದ್ದಯ್ಯ ಅವರ ಕಾವ್ಯಗಳು ಸಾಹಿತ್ಯ, ಸಾಂಸ್ಕøತಿಕ ರಂಗಗಳಲ್ಲೆಲ್ಲಾ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ನಮಗೆಲ್ಲ ತಿಳಿದ ವಿಚಾರ. ಅಂಥ ಕೆ.ಬಿ ಸಿದ್ದಯ್ಯನವರ “ದಕ್ಲಕಥಾ ದೇವಿ ಕಾವ್ಯ” “ಗಲ್ಲೆಬಾನಿ”, ‘ಕತ್ತಲೊಡನೆ ಮಾತುಕತೆ’ ಕೇಬಿಯವರ ಅನುಭವ ಕಥನದ ಕೆಲವು ಭಾಗಗಳನ್ನು ಬಳಸಿಕೊಂಡು ಲಕ್ಷ್ಮಣ್ ವಿಭಿನ್ನವಾಗಿ ಈ ನಾಟಕದಲ್ಲಿ ನಿರೂಪಿಸಿದ್ದಾರೆ. ಇಡೀ ದಕ್ಲ ಜಗತ್ತು , ಆಚರಣಾಲೋಕ, ತಳಸಮುದಾಯದ ತಳಮಳಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಕೇಬಿ ಕಾವ್ಯ ಅರ್ಥವಾಗುವುದಿಲ್ಲ ಎಂಬುದಕ್ಕೆ ನಿರ್ದೇಶಕರು ಸ್ಪಷ್ಟ ಉತ್ತರವನ್ನೇ ಈ ನಾಟಕದ ಮೂಲಕ ನೀಡಿದ್ದಾರೆ.
ನಮ್ಮ ಪರಂಪರೆಯನ್ನು ಮತ್ತೆ ಮುಟ್ಟುವ, ಜೀವಸ್ಪುರಣ ಪಡೆಯುವಂತೆ ಇಡೀ ನಾಟಕ ಹಿಡಿದಿಡುತ್ತದೆ. ಇಡೀ ತಂಡ ಪಾತ್ರಧಾರಿಗಳಾಗಿಲ್ಲ, ಸಾಂಸ್ಕೃತಿಕ ವಾರಸುದಾರರಾಗಿದ್ದಾರೆ. ನಟರ ಜುಗಲ್ ಬಂದಿ, ವಾದನಗಳ ಜುಗಲ್ ಬಂದಿ.. ಇಡೀ ನಾಟಕದ ಶಕ್ತಿ…ಇದು ಕೇವಲ ರಿಹರ್ಸಲ್ ನಲ್ಲಿ ಆದ ಅನುಭವ.
ಕೇಬಿಯವರ ಬರಹಗಳು ಅರ್ಥಮಾಡಿಕೊಳ್ಳಲು, ರಂಗಕ್ಕೆ ಅಳವಡಿಸಲು ಸದಾ ಸವಾಲೇ. ಅಂಥ ಸವಾಲನ್ನು ಲಕ್ಷ್ಮಣ್ ಸಮರ್ಥವಾಗಿ ಇಲ್ಲಿ ನಿಭಾಯಿಸಿದ್ದಾರೆ..
ಈ ಹಿಂದೆ ಹದಿನಾರು ಹದಿನೇಳು ವರ್ಷಗಳ ಹಿಂದೆ ಪೆÇ್ರ.ರಾಜಪ್ಪ ದಳವಾಯಿ ಅವರು ತಮ್ಮ ವಿದ್ಯಾರ್ಥಿಗಳಿಂದ ಈ ಪ್ರಯೋಗ ಮಾಡಿ ಮುಂಬೈನಲ್ಲಿ ಪ್ರದರ್ಶನ ಮಾಡಿದ್ದರು.
ಈಗ ಲಕ್ಷ್ಮಣ್ ಮತ್ತೆ ಕೇಬಿಯನ್ನೇ ನಮ್ಮ ಮುಂದೆ ತಂದು ನಿಲ್ಲಿಸಿದ್ದಾರೆ..
ಈ ನಾಟಕ ನವೆಂಬರ್ 01 ರಂದು ಬೆಂಗಳೂರಿನ ರಂಗಶಂಕರ ದಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ಪೂರ್ಣ ರೂಪವನ್ನು ಕಣ್ತುಂಬಿಕೊಳ್ಳಲು ಕಾತುರನಾಗಿದ್ದೇನೆ..
ಇಂತಹ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಗೆಳೆಯ ಕೆ.ಪಿ.ಲಕ್ಷ್ಮಣ್ ಮತ್ತು ತಂಡಕ್ಕೆ ಅನಂತ ಶರಣು..