ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಸೊಗಡು ಶಿವಣ್ಣನವರು ನಾಮ ಪತ್ರ ಸಲ್ಲಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ವಿಶೇಷವೆಂದರೆ ಸೊಗಡು ಶಿವಣ್ಣನವರ ಎರಡು ಜೋಳಿಗೆಗಳನ್ನು ಎರಡೂ ಬಗಲಿಗೆ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದಲ್ಲದೆ, ನಾಮ ಪತ್ರ ಸಲ್ಲಿಸುವಾಗಲು ಜೋಳಿಗೆ ಬಗಲಲ್ಲಿ ಇದ್ದದ್ದು ವಿಶೇಷ. ಜೋಳಿಗೆ ಹಿಡಿದು ಮತ ಮತ್ತು ಚುನಾವಣಾ ಖರ್ಚನ್ನು ಜೋಳಿಗೆಗೆ ಹಾಕುವಂತೆ ಕೇಳುತ್ತೇನೆ ಎಂದು ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ವರಿಷ್ಠರುಗಳು, ನಾಯಕರುಗಳು ಬಂದು ಸೊಗಡು ಶಿವಣ್ಣನವರ ಮುನಿಸನ್ನು ತಣ್ಣಗೆ ಮಾಡುತ್ತಾರೆ ಎಂಬುದೆಲ್ಲಾ ಗಾಳಿ ಮಾತಾಗಿದ್ದು, ಇಂದು ಬಿ.ಹೆಚ್.ರಸ್ತೆಯ ಅರ್ಧನಾರೀಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಟೌನ್ ಹಾಲ್ ಸರ್ಕಲ್‍ಗೆ ಬಂದು ದರ್ಗಾಕ್ಕೆ ಪೂಜೆ ಸಲ್ಲಿಸಿ ಮಹಾನಗರ ಪಾಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು, ಡಿಜೆಗಳೊಂದಿಗೆ ಮೆರವಣಿಗೆಯಲ್ಲಿ ಬಿಜಿಎಸ್ ಸರ್ಕಲ್‍ವರೆಗೆ ಸಾಗಿದರು.
ನಾನು ವಿದ್ಯಾಭ್ಯಾಸದ ಕಾಲದಿಂದ ಇಲ್ಲಿಯವರೆಗೆ ಜನರೊಂದಿಗೆ ಇರುವವನು, ಇಂದು ಪ್ರಜಾಪ್ರಭ್ರುತ್ವ ವಿರೋಧಿಗಳು ಮಾಡಬಾರದನ್ನು ಮಾಡುತ್ತಿದ್ದಾರೆ ಅದರಿಂದ ಜನ ಬೇಸತ್ತು ನನಗೆ ಚುನಾವಣೆಗೆ ನಿಲ್ಲುವಂತೆ ಪ್ರೀತಿ ತೋರಿಸುತ್ತಿದ್ದಾರೆ, ನಾನು ಜೋಳಿಗೆ ಹಿಡಿದು ಹೊರಟಾಗ, ಕ್ರಿಶ್ಚಿಯನ್ನರು, ಮುಸ್ಲಿಂರು, ಎಲ್ಲರೂ ಬಂದು ನನಗೆ ಅರಸಿದ್ದಾರೆ, 4 ಬಾರಿ ಶಾಸಕನಾಗಿದ್ದಾಗ ತುಮಕೂರಿಗೆ ನೀರು, ಶಿಕ್ಷಣ, ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ್ದಲ್ಲದೆ ನನ್ನ ಕಾಲದಲ್ಲಿ ಜನ ನೆಮ್ಮದಿಯಿಂದ ಇದ್ದರು ಎಂದರು.
ಪಾಪದ ಕೆಲಸಕ್ಕೆ ಕೈ ಹಾಕುವುದಿಲ್ಲ, ಜಿಲ್ಲೆಯ ಎಲ್ಲಾ ಊರುಗಳು ಗೊತ್ತಿವೆ, ಈಗ ಆ ಜನ ನನ್ನನ್ನು ಸ್ಪರ್ಧೆ ಮಾಡುವಂತೆ ಮನವಿ ಮಾಡುದ್ದಾರೆ, ಕೊರೊನಾ ಕಾಲದಲ್ಲಿ ಜೀವ ಉಳಿಸಿದ್ದೇನೆ, ಔಷಧಿ ವಿತರಣೆ, ಅಂತಿಮ ಸಂಸ್ಕಾರ, ಶ್ರಾದ್ಧ ಮಾಡಿದ್ದೇನೆ.
ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ, ಬೇರೆಯವರಂತೆ ಬಾಗಿಲು ಮುಚ್ಚಿರುವುದಿಲ್ಲ ಎಂದ ಅವರು, ಚುನಾವಣೆಗೆ ನಿಂತಿದ್ದೇನೆ ಆಕಾಶ ನೋಡಲು ನೂಕು ನುಗ್ಗಲು ಏಕೆ, ಯಾರು ಬೇಕಾದರೂ ನಿಲ್ಲಲಿ ನಾನು ಚುನಾವಣೆಯಲ್ಲಿ ಇದ್ದೇನೆ ಎಂದರು.
ಜೋಳಿಗೆ ಕೊಟ್ಟವರ ಪ್ರೀತಿಗಾಗಿ ನಿಲ್ಲುತ್ತಿದ್ದೇನೆ, ದೇವಸ್ಥಾನಕ್ಕೆ ಹೋಗಿ ಜೋಳಿಗೆ ಹಿಡಿದಿದ್ದೇನೆ, ಪತ್ರಕರ್ತರು, ಬುದ್ದಿಜೀವಿಗಳು, ಜೋಳಿಗೆ ತುಂಬಿದ್ದಾರೆ, ತಾಕತ್ತಿದ್ದವರು ನನ್ನೊಂದಿಗೆ ಜೋಳಿಗೆ ಹಿಡಿದು ಬರಲಿ ನೋಡೋಣ, ಜನ ಯಾರಿಗೆ ಹಣ ಹಾಕುತ್ತಾರೆ ನೋಡೋಣ, ಜನ ಕೊಟ್ಟಿರುವ ‘ಬಿ’ ಫಾರಂ ಜೋಳಿಗೆಯಲ್ಲಿದೆ ಗೆಲುವು ನನ್ನದೆ ಎಂದರು.