ರಾಜಕೀಯ ಕಬ್ಬಡ್ಡಿಯಲ್ಲೂ ತೊಡೆ ತಟ್ಟುತ್ತೇನೆ-ಸೊಗಡು ಶಿವಣ್ಣ

ತುಮಕೂರು : 70ರ ದಶಕದಿಂದಲೂ ಜನತಾ ಪರಿವಾರದಿಂದ ಇಂದಿನ ಭಾರತೀಯ ಜನತಾ ಪಾರ್ಟಿಯವರೆಗೂ ಪಕ್ಷವನ್ನು ಕಟ್ಟಿಕೊಂಡು ಬಂದ ಸೊಗಡು ಶಿವಣ್ಣನವರು ಪಕ್ಷದ ಇಂದಿನ ವರಿಷ್ಠರ ತೀರ್ಮಾನವನ್ನು ಪ್ರತಿಭಟಿಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿ ಚುನಾವಣೆಗೆ ಧುಮುಕುವುದಾಗಿ ಘೋಷಿಸಿದ್ದಾರೆ.

ಪಕ್ಷವನ್ನು ರಾತ್ರಿ ಹಗಲೆನ್ನದೆ ಕಟ್ಟಿ ಬೆಳಸಿದ್ದು, ಎಲ್ಲಿಯೋ ಇದ್ದವರನ್ನು ಕರೆ ತಂದು ನಮ್ಮನ್ನು ಮೂಲೆಗುಂಪು ಮಾಡಲು ಹೊರಟಿರುವುದನ್ನು ಎಷ್ಟು ದಿನ ಸಹಿಸಲು ಸಾಧ್ಯ ಎಂದು ನಗರದ ವಿವೇಕಾನಂದ ರಸ್ತೆಯ ಮಾಕಂ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಗುಡುಗಿದರು, ನನ್ನ ಪಕ್ಷ ಕೈ ಹಿಡಿಯುತ್ತೆ ಎಂದು ಭಾವಿಸಿದ್ದೆ, ಕೈ ಬಿಟ್ಟಿದೆ, ನನ್ನ ಗೃಹಕಛೇರಿಯಲ್ಲಿರುವ ಪಕ್ಷದ ಎಲ್ಲಾ ಬಾವುಟ, ಕರಪತ್ರ ಎಲ್ಲವನ್ನು ಹೊರ ಹಾಕುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಕಟ್ಟಿದವರು ಇಂದು ಬಿಜೆಪಿ ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸುತ್ತಿದ್ದಾರೆ, ನಮ್ಮ ಕಾರ್ಯಕರ್ತರನ್ನು ಜೈಲಿಗೆ ಕಳಿಸಿದವರನ್ನು ತಲೆ ಮೇಲೆ ಕೂರಿಸಿಕೊಂಡಿದ್ದೇವೆ, ಇಷ್ಟು ದಿನ ಪಕ್ಷಕ್ಕೆ ಗೌರವ ಕೊಟ್ಟು ಎಲ್ಲವನ್ನು ಸಹಿಸಿಕೊಂಡಿದ್ದೆ, ಮುಂದಿನದನ್ನು ನನ್ನ ಜನರಿಗೆ ಬಿಡುತ್ತೇನೆ ಎಂದರು.

ನಾನು ರೈತನ ಮಗ, ಅವರೆಕಾಯಿ ಮಾರಿ ಪಕ್ಷ ಕಟ್ಟಿದವನು, ನನ್ನ ಜನ ಬಿಟ್ಟರೆ ಬೇರ್ಯಾರು ಇಲ್ಲ, ನನ್ನ ಕಾರ್ಯಕರ್ತರು, ಬೆಂಬಲಿಗರು ಹೇಳಿದಂತೆ ಚುನಾವಣೆಗೆ ನಿಲ್ಲುವುದು ಸತ್ಯ, ನಾನು ಒಬ್ಬ ರಾಷ್ಟ್ರಮಟ್ಟದ ಕಬ್ಬಡ್ಡಿ ಆಟಗಾರ ಎಲ್ಲವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಲುತ್ತೇನೆ, ಹಾಗೇಯೇ ರಾಜಕೀಯದಲ್ಲೂ ತೊಡೆ ತಟ್ಟಿ ಆಟ ಆಡುವುದು ಗೊತ್ತಿದೆ ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಸಿದರು.

Leave a Reply

Your email address will not be published. Required fields are marked *