ತುಮಕೂರು: ಭೂಮಿ ಮೇಲಿನ ಸಕಲ ಜೀವಿಗಳಿಗಳ ಬದುಕಿಗೆ ಮಣ್ಣು ಅತ್ಯಗತ್ಯ. ಅನ್ನ ಪಡೆಯಲು ಮಣ್ಣು ಬೇಕು. ಅಷ್ಟೇ ಅಲ್ಲ, ಎಲ್ಲರೂ ಮೋಹಿಸುವ ಚಿನ್ನವೂ ಮಣ್ಣಿನಿಂದಲೇ ದೊರೆಯುತ್ತದೆ. ಅನ್ನ, ಚಿನ್ನದಂತಹ ಮಣ್ಣು ಹಾಗೂ ಪರಿಸರವನ್ನು ಆರೋಗ್ಯವಾಗಿ ಕಾಪಾಡಿದರೆ ನಾವೂ, ಎಲ್ಲಾ ಜೀವಿಗಳೂ ಆರೋಗ್ಯದಿಂದ ಬದುಕಬಹುದು ಎಂದು ಮಣ್ಣಿನ ಮಹತ್ವದ ಬಗ್ಗೆ ಹೈ ಕೋರ್ಟ್ ನ್ಯಾಯಾಧೀಶರಾದ ಹೆಚ್.ಪಿ.ಸಂದೇಶ್ ಹೇಳಿದರು.
ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಶುಕ್ರವಾರ ಸಂಜೆ ಸಿದ್ಧಗಂಗಾ ಮಠದಲ್ಲಿ ನಡೆದ ಪರಿಸರ ಮತ್ತು ಮಣ್ಣಿನ ಸಂರಕ್ಷಣೆಗಾಗಿ ಕ್ರಿಯಾಶಿಲವಾಗಿ ಶ್ರಮಿಸುತ್ತಿರುವ ರೈತರಿಗೆ ವಾರ್ಷಿಕವಾಗಿ ನೀಡಲು ಹೈ ಕೋರ್ಟ್ ನ್ಯಾಯವಾದಿಯೂ ಆದ, ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಕದರನಹಳ್ಳಿಯ ರಮೇಶ್ ನಾಯಕ್ ಎಲ್. ಅವರು ಸ್ಥಾಪಿಸಿರುವ ಇನಿಷಿಯೇಟೀವ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್ ಅಂಡ್ ಎನ್ವಿರಾನ್ಮೆಂಟ್ ಚಾಂಪಿಯನ್ ಆಫ್ ಸಾಯಿಲ್- 2025 ಪ್ರಶಸ್ತಿಯ ಪ್ರದಾನ ಸಮಾರಂಭದಲ್ಲಿ ನ್ಯಾಯಧೀಶರು ಮಾತನಾಡಿದರು.
ಜೀವರಾಶಿಗಳ ತಾಯಿಯಾಗಿರುವ ಈ ಭೂಮಿಯ ಮಣ್ಣು, ಅದರ ಫಲವತ್ತತೆ ರಕ್ಷಣೆ ಮಾಡುವುದು ಎಲ್ಲರ ಹೊಣೆ. ಭೂಮಿಗೆ ವಿಷಕಾರಿ ಗೊಬ್ಬರ ಹಾಕದಂತೆ ಮೂಲ ಸತ್ವವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಯೋಗ್ಯವಾದ ಮಣ್ಣ ಉಳಿಸಬೇಕು. ಮಣ್ಣಿನ ಮಹತ್ವದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಬೇಕು ಎಂದರು.
ಮಕ್ಕಳು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಬೇಕು ಎಂದು ಸಿದ್ಧಗಂಗಾ ಮಠದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ವಿದ್ಯೆ ಜೊತೆಗೆ ಶ್ರಮ ಇರಬೇಕು. ಸಮಯ ಪಾಲನೆ, ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು. ಈ ಅಂಶಗಳನ್ನು ಅಳವಡಿಸಿಕೊಂಡರೆ ನಿರ್ಭಯ ತಾನಾಗೇ ಬರುತ್ತದೆ. ಇಂತಹ ಗುಣಗಳು ತಮ್ಮ ಬದುಕಿನಲ್ಲಿ ಸದಾ ಅನುಸರಿಸಿಕೊಂಡು ದೇಶಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದು ಸಲಹೆ ಮಾಡಿದರು.
ಮತ್ತೊಬ್ಬರು ಹೈ ಕೋರ್ಟ್ ನ್ಯಾಯಾಧೀಶರಾದ ಆರ್.ನಟರಾಜ್ ಮಾತನಾಡಿ, ಮಣ್ಣು ನಂಬಿ ಕಾಯಕ ಮಾಡುತ್ತಿರುವ ರೈತ ಸಮುದಾಯ ದೇಶಕ್ಕೆ ಅನ್ನ ನೀಡುವ ಅನ್ನದಾತ. ಗಾಳಿ, ನೀರಿನಂತೆ ಮಣ್ಣನ್ನೂ ಕಾಪಾಡಬೇಕು. ಮಣ್ಣಿನ ತಾಯಿಗುಣ ಗುರುತಿಸಿ ಗೌರವಿಸಬೇಕು. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶ್ರೀಮಠದ ವಿದ್ಯಾರ್ಥಿಗಳನ್ನುದ್ದೇಶಿಸಿ, ನಿಮ್ಮಲ್ಲಿ ಎಷ್ಟು ಜನ ರೈತರಾಗಲು ಬಯಸುವಿರಿ ಎಂದು ನ್ಯಾಯಾಧೀಶರು ಕೇಳಿದಾಗ ಸಾವಿರಕ್ಕೂ ಹೆಚ್ಚು ಮಕ್ಕಳು ಕೈ ಎತ್ತಿ ರೈತರಾಗಲು ಒಲುವು ತೋರಿದಾಗ ನ್ಯಾಯಾಧೀಶರು ಖುಷಿಪಟ್ಟರು.
ಸಮಾರಂಭದ ದಿವ್ಯಸಾನಿಧ್ಯವಹಿಸಿದ್ದ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಯವರು ಮಾತನಾಡಿ, ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳು ಜೀವಿಗಳ ಬದುಕಿಗೆ ಶಕ್ತಿಯಾಗಿವೆ. ಅವು ಇಲ್ಲದೇ ಜೀವಸಂಕುಲವಿಲ್ಲ. ಪಂಚಭೂತಗಳ ಆರೋಗ್ಯ ಕಾಪಾಡಿದರೆ ನಾವೂ ಆರೋಗ್ಯವಾಗಿರಲು ಸಾಧ್ಯ. ಯಾವುದನ್ನೂ ಕಲುಶಿತಗೊಳಿಸಿ, ಸತ್ವಹೀನಗೊಳ್ಳದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು, ನ್ಯಾಯವಾದಿ ರಮೇಶ್ ನಾಯಕರ್ ಅವರ ಪರಿಸರ ಕಾಳಜಿ ಕಾರ್ಯಗಳನ್ನು ಶ್ಲಾಘಿಸಿದರು.
ಹೈ ಕೋರ್ಟ್ ನ್ಯಾಯವಾದಿಯೂ ಆದ, ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಕದರನಹಳ್ಳಿಯ ರಮೇಶ್ ನಾಯಕ್ ಎಲ್. ಅವರು ಜೀವಸಂಕುಲ, ಪರಿಸರ, ಮಣ್ಣು ಸಂರಕ್ಷಣೆಯ ಆಂದೋಲನದ ಭಾಗವಾಗಿ ಮಣ್ಣು ಸಂರಕ್ಷಣೆ ಮಾಡುವರನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಥಾಪಿಸಿರುವ ‘ಇನಿಷಿಯೇಟೀವ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್ ಅಂಡ್ ಎನ್ವಿರಾನ್ಮೆಂಟ್ ಚಾಂಪಿಯನ್ ಆಫ್ ಸಾಯಿಲ್- 2025’ ಪ್ರಶಸ್ತಿಯನ್ನು ಇಬ್ಬರು ರೈತರಿಗೆ ಸ್ವಾಮೀಜಿ ಹಾಗೂ ಹೈ ಕೋರ್ಟ್ ನ್ಯಾಯಾಧೀಶರು ಈ ವೇಳೆ ಪ್ರದಾನ ಮಾಡಿದರು.
ಪರಿಸರ ಮತ್ತು ಮಣ್ಣಿನ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ತುಮಕೂರು ತಾಲ್ಲೂಕಿನ ರೈತರಾದ ಬಂಡಿಹಳ್ಳಿಯ ರವೀಂದ್ರ ಬಿ.ಆರ್. ಹಾಗೂ ಜನಪನಹಳ್ಳಿಯ ಹೆಚ್. ನರಸಿಂಹರಾಜು ಅವರಿಗೆ ಈ ಪ್ರಶಸ್ತಿಯೊಂದಿಗೆ ತಲಾ ಹತ್ತು ಸಾವಿರ ರೂ. ನಗದು ಹಾಗೂ ಆಕರ್ಷಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.