ಗರ್ಭಿಣಿ ಕಸ್ತೂರಿ ಸಾವಿಗೆ ಕಾರಣವಾದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಎನ್.ಗೋವಿಂದರಾಜು ಆಗ್ರಹ

ತುಮಕೂರು : ತುಮಕೂರು ನಗರದ ಭಾರತಿ ಬಡಾವಣೆಯ ಕಸ್ತೂರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಸಾವಿಗೆ ಕಾರಣವಾದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಆಸ್ಪತ್ರೆಯಲ್ಲಿನ ಅವವ್ಯಸ್ಥೆಗಳನ್ನು ಸರಿಪಡಿಸುವಂತೆ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಎನ್.ಗೋವಿಂದರಾಜು ಆಗ್ರಹಿಸಿದರು.

ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಬಡವರು ಮತ್ತು ಕಡು ಬಡವರಿಗೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಿರುವುದು ಮನುಷ್ಯ ವಿರೋಧಿಯಾಗಿದೆ, ತುಮಕೂರು ಜಿಲ್ಲಾ ಆಸ್ಪತ್ರೆಗೆ ಧಿಕ್ಕಿಲ್ಲದ ಹೆಣ್ಣು ಮಗಳೊಬ್ಬಳನ್ನು ನೆರೆಹೊರೆ ಮನೆಯವರು ಕರೆ ತಂದರೆ ಹೆರಿಗೆ ಮಾಡಿಸದೆ ಆಧಾರ್ ಕಾರ್ಡ್, ತಾಯಿ ಕಾರ್ಡ್ ಕೇಳಿ ಹೆರಿಗೆ ಮಾಡಿಸದೆ ಸಾವಿಗೆ ಕಾರಣವಾದ ವೈದ್ಯಕೀಯ ಸಿಬ್ಬಂದಿಗೆ ಮಾನವೀಯತೆಯೆ ಇಲ್ಲ ಎಂದ ಅವರು ಇಷ್ಟೆಲ್ಲಾ ಆಗುತ್ತಿದ್ದರೂ ಸ್ಥಳಿಯ ಶಾಸಕರಾದ ಜ್ಯೋತಿ ಗಣೇಶ್ ಅವರು ಮೌನವಾಗಿರುವುದನ್ನು ಖಂಡಿಸುವುದಾಗಿ ತಿಳಿಸಿದರು.

ಇದೊಂದು ಮನುಷ್ಯತ್ವ ಮರೆತ ಘೋರ ಘಟನೆ, ಹೆರಿಗೆಗೆ ಬಂದ ಕಸ್ತೂರಿಗೆ ಹೆರಿಗೆ ಮಾಡಿಸಲು ನರ್ಸಗಳ ಕಾಲಿಗೆ ಬಿದ್ದರೂ ಮನಸ್ಸು ಕರಗಲಿಲ್ಲವೆಂದರೆ ಇದೊಂದು ಘನಘೋರ ಘಟನೆ, ಜಿಲ್ಲಾ ಆಸ್ಪತ್ರೆಯ ವೈದ್ಯರು, ನರ್ಸ್‍ಗಳನ್ನು ಮಾತನಾಡಿಸಲು ಸಹ ಆಗುವುದಿಲ್ಲ ಅಷ್ಟೊಂದು ಪವರ್‍ಪುಲ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಬಗ್ಗೆ ಚರ್ಚಿಸಲು ಬಹಿರಂಗ ಸಭೆ ಕರೆಯಲು ಶಾಸಕರಿಗೆ ಸವಾಲು : ತುಮಕೂರು ನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಕಳಪೆ ಕಾಮಗಾರಿ ನಡೆದಿರುವುದನ್ನು ಚರ್ಚಿಸಲು ಬಹಿರಂಗ ಸಭೆಯನ್ನು ಕರೆಯುವಂತೆ ಶಾಸಕ ಜ್ಯೋತಿಗಣೇಶ್ ಅವರಿಗೆ ಎನ್.ಗೋವಿಂದರಾಜು ಸವಾಲು ಹಾಕಿದರು.

ಮೃತ ಕಸ್ತೂರಿಯ ಮಗಳು ಶಂಕರಿ ಅನಾಥವಾಗಿದ್ದು, ಅವಳ ವಿದ್ಯಾಭ್ಯಾಸ ಮತ್ತು ಪೋಷಣೆಯನ್ನು ಸರ್ಕಾರವೆ ವಹಿಸಿಕೊಳ್ಳ ಬೇಕೆಂದು ಆಗ್ರಹಿಸಿದರು.

ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯನ್ನು ಯಾವುದೇ ದಾಖಲೆಗಳಿಲ್ಲದೆ ನೀಡಿ ಪ್ರಾಣ ಉಳಿಸಲು ಮುಂದಾಗಬೇಕು ಎಂದರು.

ಜೆಡಿಎಸ್ ಸರ್ಕಾರ ಬಂದರೆ ತುಮಕೂರು ನಗರಕ್ಕೆ ಒದಗಿಸುವ ಯೋಜನೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದನ್ನು ಸಹಿಸಲು ಸಾಧ್ಯವಾಗದ ಶಾಸಕ ಜ್ಯೋತಿಗಣೇಶ್ ಅವರು ತುಮಕೂರನ್ನು ಶ್ರೀಲಂಕಾ ಮಾಡಲು ಹೊರಟಿದ್ದಾರೆ ಮತ್ತು ಗೋವಿಂದರಾಜು ಅವರು ಅಮಾಸ್ಯೆ-ಹುಣ್ಣಿಮೆಗೆ ಕಾಣಿಸಿಕೊಳ್ಳುತ್ತಾರೆ ಎಂಬ ಹೇಳಿಕೆ ಅವರ ಭಾಲಿಶತನ ತೋರಿಸುತ್ತದೆ ಎಂದರು.

ನಾನೇನೋ ಅಮವಾಸ್ಯೆ-ಹುಣ್ಣಿಮೆಗೆ ಕಾಣಿಸಿಕೊಳ್ಳುತ್ತೇನೆ ಹಾಗಾದರೆ ಕೋವಿಡ್-ಸಮಯದಲ್ಲಿ ಸಂಸದರು ಮತ್ತು ಶಾಸಕರು ಎಲ್ಲಿ ಕಾಣಿಯಾಗಿದ್ರಿ ಕೊರೊನಾ ಕಾಲದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸದೆ ಎಲ್ಲಿ ಅವಿತುಕೊಂಡಿದ್ರಿ ಎಂದು ಕುಟುಕಿದರು.
ತುಮಕೂರು ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ 12ರಿಂದ 13 ಸಾವಿರ ಮನೆಗಳಿಗೆ ಹಾನಿಯಾಗಿ 270 ಕೋಟಿ ನಷ್ಟವಾಗಿದ್ದು ಎಷ್ಟು ಜನರಿಗೆ ಪರಿಹಾರ ಕೊಡಿಸಿದ್ದೀರಿ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ಳಿಲೋಕೇಶ್, ಮಾಧ್ಯಮ ಪ್ರತಿನಿಧಿ ಮಧುಸೂದನ್, ಜಿಲ್ಲಾ ಕೈಗಾರಿಕಾ ನಿಗಮದ ಕೆ.ಟಿ.ವಿಜಯಕುಮಾರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *