ತುಮಕೂರು : ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಲು ನಿರ್ಲಕ್ಷ್ಯ ತೋರಿರುವುದರಲ್ಲಿ ವೈದ್ಯಕೀಯ ಸಿಬ್ಬಂದಿಯ ಲೋಪವೆಸಗಿರುವುದಾಗಿ ಒಪ್ಪಿಕೊಳ್ಳಲಾಗಿದೆ, ಗರ್ಭಿಣಿಗೆ ಚಿಕಿತ್ಸೆ ನೀಡದೆ ಸಾವಿಗೆ ಕಾರಣವಾಗಿರುವುದು ಘೋರಕೃತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡರು ಹೇಳಿದರು.
ಗರ್ಭಿಣಿ ಸಾವಿಗೆ ಕಾರಣವಾದ ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕ ಮತ್ತು ಶವಗಾರಕ್ಕೆ ಭೇಟಿ ನೀಡಿ, ಮೃತ ಪಟ್ಟಿರುವ ಗರ್ಭಿಣಿ ಕಸ್ತೂರಿಯವರ ಶವ ಪರಿಶೀಲನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಜಿಲ್ಲಾ ಆಸ್ಪತ್ರೆಗೆ ಬಂದವರಿಗೆ ದಾಖಲಾತಿ, ಜಾತಿ ಇತರೆ ಕೇಳುವುದಕ್ಕಿಂತ ಮೊದಲು ತುರ್ತು ಚಿಕಿತ್ಸೆಯನ್ನು ನೀಡಬೇಕಿತ್ತು, ಜಿಲ್ಲಾಸ್ಪತ್ರೆಯಿಂದ ವೈಪಲ್ಯವಾಗಿರುವುದು ಕಂಡು ಬಂದಿದೆ, ಜಿಲ್ಲಾ-ತಾಲ್ಲೂಕು ಆಸ್ಪತ್ರೆಗಳಲ್ಲಿ ಜೀವ ಉಳಿಸುವ ಕೆಲಸವಾಗಬೇಕು, ಆಧಾರ್ ಕಾರ್ಡ್, ತಾಯಿ ಕಾರ್ಡ್ ಬೇಕಾಗಿರುವುದಿಲ್ಲ, ಮೊದಲು ಜೀವ ಉಳಿಸುವ ಕೆಲಸವಾಗಬೇಕು ಎಂದ ಅವರು, ಇಂತಹ ಘಟನೆಗಳು ಆಗಬಾರದು ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆ ನಡೆಯುತ್ತಿರುವುದರಿಂದ ನಾಗರೀಕ ಸಮಾಜ ಎತ್ತ ಸಾಗುತ್ತಿದೆ, ಇಂತಹವುಗಳಿಂದ ರಾಜ್ಯದ ಘನತೆಗೆ ಧಕ್ಕೆಯಾಗಲಿದೆ ಎಂದರು.
ತುಮಕೂರಿನಲ್ಲಿ ಮಾನವೀಯ ನೆಲೆಯಲ್ಲಾದರೂ ಗರ್ಭಿಣಿಗೆ ಚಿಕಿತ್ಸೆ ನೀಡದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಘೋರ ಕೃತ್ಯ ಎಂದ ಅವರು, ಕೇಂದ್ರದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಲಿದೆ ಎಂದು ತಿಳಿಸಿದರು.
ಮೃತ ಕಸ್ತೂರಿಯವರ ಮಗಳಾದ ಶಂಕರಿಗೆ ಸರ್ಕಾದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೊಡಿಸಿ, ಆಕೆಯ ವಿದ್ಯಾಭ್ಯಾಸ, ಜೀವನೋಪಾಯ ಎಲ್ಲವನ್ನು ಸರ್ಕಾರವೆ ನೋಡಿಕೊಳ್ಳುವಂತೆ ಮಾಡಲಾಗುವುದು ಎಂದರು.
ಮಕ್ಕಳ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆಯನ್ನು ಮಾಡುವ ಅವಿವೇಕಿಗಳ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಕಾನೂನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.