ಇಳಿಜಾರಲ್ಲದ ಕಾಲದಲ್ಲಿ ತಿಟ್ಟನ್ನು ಹತ್ತಲು ಹೊರಟ ಮುದ್ದಹನುಮೇಗೌಡರು

ರಾಜಕೀಯ ವಿಶ್ಲೇಷಣೆ

ತುಮಕೂರು : ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ.

ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಪಕ್ಷದ ಬಾವುಟವನ್ನು ನೀಡುವುದರ ಮೂಲಕ ಮುದ್ದಹನುಮೇಗೌಡರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

ಎಸ್.ಪಿ.ಮುದ್ದಹನುಮೇಗೌಡರು ನ್ಯಾಯಾಧೀಶರಾಗಿದ್ದವರು, ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯವನ್ನು ಪ್ರವೇಶಿಸಿದವರು, ಇವರು ಕುಣಿಗಲ್ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದವರು, ರಾಜಕೀಯ ಮುತ್ಸದಿ ಎಂದು ತುಮಕೂರು ಜಿಲ್ಲೆಯಲ್ಲಿ ಕರೆಸಿಕೊಳ್ಳುತ್ತಿದ್ದ ವೈ.ಕೆ.ರಾಮಯ್ಯನವರನ್ನು ಸೋಲಿಸಿದ ಮುದ್ದಹನುಮೇಗೌಡರು ಜಿಲ್ಲೆಯಲ್ಲಿ ಉತ್ತಮ ರಾಜಕಾರಣಿ, ಸಜ್ಜನ, ಸಾಮಾನ್ಯ ಜನರ ಜೊತೆ ಬೆರೆಯುವ ವ್ಯಕ್ತಿ ಎಂದು ಗುರುತಿಸಿಕೊಂಡರು.

1994 ಜನತಾದಳವು ಉತ್ತುಂಗದಲ್ಲಿದ್ದ ಕಾಲವದು, ಕುಣಿಗಲ್ ಕ್ಷೇತ್ರದಲ್ಲಿ ಕುಣಿಗಲ್ ಕುದುರೆ ಎಂದೇ ಕರೆಸಿಕೊಳ್ಳುತ್ತಿದ್ದ ವೈ.ಕೆ.ರಾಮಯ್ಯನವರನ್ನು ಸೋಲಿಸಿ ಶಾಸಕರಾದರು. 1999ರಲ್ಲಿ ಜೆಡಿಎಸ್‍ನಿಂದ ನಿಂತಿದ್ದ ಹೆಚ್.ನಿಂಗಪ್ಪನವರನ್ನು ಪರಾಭವಗೊಳಿಸಿ ಮತ್ತೊಮ್ಮೆ ಶಾಸಕರಾದರೂ ಎಸ್.ಎಂ.ಕೃಷ್ಣ ಸರ್ಕಾರ ಬಂದರೂ ಮಂತ್ರಿಯಾಗುವ ಯೋಗ ದೊರಕಲಿಲ್ಲ. ಈ ಮಧ್ಯೆ ಮುದ್ದಹನುಮೇಗೌಡರು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.

ಆದರೆ ಅವರಿಗೆ ಕಾಂಗ್ರೆಸ್‍ನ ಕೆಲವರು ಒಳ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸೇರಿ ಚುನಾವಣೆಗೆ ಸ್ಪರ್ಧಿಸಿದರೂ ಗೆಲುವು ಸಾಧಿಸಲು ಆಗಲಿಲ್ಲ, ಆ ವೇಳೆಗೆ ರಾಜಕೀಯದ ದಾಳಗಳೇ ಯಾವಾಗ ಎತ್ತ ಉರುಳುತ್ತವೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಾಗದಂತಹ ಪೆಟ್ಟುಗಳು ಎಲ್ಲಾ ಪಕ್ಷಗಳಲ್ಲೂ ಕಾಣಿಸಿಕೊಂಡಿತು.

ಮುದ್ದಹನುಮೇಗೌಡರ ರಾಜಕೀಯ ಮುಗಿಯಿತು ಎನ್ನುವಾಗಲೇ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು, 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ವತಃ ಡಾ.ಜಿ.ಪರಮೇಶ್ವರ್ ಅವರು ಮುದ್ದಹನುಮೇಗೌಡರನ್ನು ಕರೆ ತಂದು ತುಮಕೂರು ಲೋಕಸಭಾ ಟಿಕೆಟ್ ಕೊಡಿಸಿ ಸಂಸದರನ್ನಾಗಿ ಮಾಡುವುದರ ಮೂಲಕ ಎಸ್.ಪಿ.ಎಂ.ಗೆ ರಾಜಕೀಯ ಮರು ಜೀವ ನೀಡಿದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೂ ಎಟುಕುತ್ತಾ, ಸಂಸದರಾಗಿ ಜಿಲ್ಲೆಗೆ ಉತ್ತಮ ಕೆಲಸವನ್ನು ಮಾಡಿದ್ದಲ್ಲದೆ, ಕೊಬ್ಬರಿಗೆ ಉತ್ತಮ ಬೆಲೆ ನೀಡಬೇಕೆಂದು ಸಂಸತ್ತಿನಲ್ಲಿ ಏರು ಧ್ವನಿಯಲ್ಲಿ ಮಾತನಾಡಿದರು, ಇವರ ಕಾಲದಲ್ಲೇ ತುಮಕೂರು-ಶಿವಮೊಗ್ಗ ದ್ವಿಪಥ ರೈಲ್ವೆ ಹಳಿ ಮತ್ತು ಬಿ.ಹೆಚ್.ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಕಾಮಗಾರಿಗಳನ್ನು ಪ್ರಾರಂಭಿಸಿದರು, ಇಡೀ ರಾಜ್ಯದಲ್ಲಿ ಉತ್ತಮ ಸಂಸದರು ಎಂಬ ಹೆಸರನ್ನು ಪಡೆದುಕೊಂಡರು.
ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ತುಮಕೂರು ಲೋಕಸಭಾ ಕ್ಷೇತ್ರವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬಿಟ್ಟು ಕೊಡಬೇಕಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಜೊತೆ ಗುರುತಿಸಿಕೊಂಡ ಮುದ್ದಹನುಮೇಗೌಡರು ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಣೆಯನ್ನು ಮಾಡಿದರು. ಕಾಂಗ್ರೆಸ್ ಮುಖಂಡರು ಮನ ಒಲಿಸಿದ ಹಿನ್ನಲೆಯಲ್ಲಿ ಕಣದಿಂದ ಹಿಂದೆ ಸರಿದು, ಎಲ್ಲಿಯೂ ದೇವೇಗೌಡರ ಪರವಾಗಿ ಪ್ರಚಾರವನ್ನು ಮಾಡಲಿಲ್ಲ.

ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪರಾಭವಗೊಂಡರು, ಕಾಂಗ್ರೆಸ್ ನಾಯಕರು ಎಸ್.ಪಿ.ಎಂ.ಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ನೀಡಿದ್ದ ವಾಗ್ದಾನವನ್ನು ಈಡೇರಿಸಲೇ ಇಲ್ಲ, ಇದರಿಂದ ಬೇಸರಗೊಂಡ ಮುದ್ದಹನುಮೇಗೌಡರು ಕೆಲ ದಿನ ಮೌನಕ್ಕೆ ಶರಣಾದರು.

ಈಗ್ಗೆ ವರ್ಷದಿಂದ ಕಾಂಗ್ರೆಸ್‍ನಿಂದ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಕೇಳಿದಾಗ, ಅದು ಸಾಧ್ಯವಿಲ್ಲ ಎಂದರು, ಇದರಿಂದ ಮತ್ತಷ್ಟು ವಿಚಲಿತರಾದ ಮುದ್ದಹನುಮೇಗೌಡರು, ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದರು.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಳಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತನಾಡಿದ ಮುದ್ದಹನುಮೇಗೌಡರು, ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡದಿದ್ದರೆ ಪಕ್ಷ ತೊರೆಯುವುದಾಗಿ ತಿಳಿಸಿದರು, ಹೀಗೆ ತಿಳಿಸಿದಾಗಲೂ ಹಲವಾರು ತಿಂಗಳು ಕಾದ ಎಸ್‍ಪಿಎಂ ಸೆಪ್ಟಂಬರ್‍ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. ನವೆಂಬರ್ 3ರಂದು ಅಧಿಕೃತವಾಗಿ ಬಿಜೆಪಿಯನ್ನು ಸೇರ್ಪಡೆಯಾದರು.

ಅವರು ಬಿಜೆಪಿಗೆ ಸೇರ್ಪಡೆಯಾದ ಕಾಲಘಟ್ಟವು ಮುದ್ಹನುಮೇಗೌಡರಿಗೆ ಪಾಸೀಟಿವ್ ಆಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಈಗಿನ ಶಾಸಕರಾದ ಡಾ||ರಂಗನಾಥ ಅವರು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಸಂಬಂಧಿಯಾಗಿದ್ದು, ರಂಗನಾಥರ ಗೆಲುವಿಗೆ ಟೊಂಕ ಕಟ್ಟಿ ನಿಲ್ಲುವುದರಲ್ಲಿ ಎರಡು ಮಾತಿಲ್ಲ, ಅಲ್ಲದೆ ಚುನಾವಣಾ ವೇಳೆಗೆ ಅವರದೇ ಆದ ಕೆಲವು ಚುನಾವಣಾ ತಂತ್ರಗಳನ್ನು ಮಾಡುತ್ತಾರೆ, ಇನ್ನ ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ ಚುನಾವಣೆಯ ಪಟ್ಟುಗಳನ್ನು ಚೆನ್ನಾಗಿ ಅರೆದು ಕುಡಿದಿರುವುದರಿಂದ ಈ ಸಲದ ಚುನಾವಣೆ ಅವರಿಗೆ ಕೊನೆಯ ಚುನಾವಣೆ ಆಗಿರುವುದರಿಂದ ಅವರು ಸಹ ಗೆಲ್ಲಲು ಬೇಕಾದ ತಂತ್ರಗಳನ್ನು ಮಾಡುವುದಲ್ಲದೆ ಚುನಾವಣೆಯ ಸಂದರ್ಭದಲ್ಲಿ ಗೆಲ್ಲಲು ಬೇಕಾದ ಮತಗಳನ್ನು ತಮ್ಮತ್ತ ಸೆಳೆಯಲು ಎಲ್ಲಾ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಇಬ್ಬರ ಮಧ್ಯೆ ಬಿಜೆಪಿಗೆ ಬಂದಿರುವ ಮುದ್ದಹನುಮೇಗೌಡರು ಮೊದಲು ಬಿಜೆಪಿಯ ಮನಃಸ್ಥಿತಿಯ ಜೊತೆಗೆ ಆರ್.ಎಸ್.ಎಸ್.ನ ಶರತ್ತುಗಳು ಮತ್ತು ಅವರ ಮಾತಿಗೆ ಎದರು ಮಾತನಾಡದೆ ವಿನಯವಂತಿಕೆಯನ್ನು ತೋರಬೇಕಾದ ಅನಿವಾರ್ಯತೆಯಿದೆ.

ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಬಿಜೆಪಿ ಸರ್ಕಾರಗಳಿಗಿದ್ದರೂ ಸಾಮಾನ್ಯ ಜನರನ್ನು ಬೆಲೆ ಏರಿಕೆ, ಜಿಎಸ್ಟಿ ಮತ್ತು ಧರ್ಮದ ಆಧಾರದ ಮೇಲೆ ಕೋಮು ದಳ್ಳುರಿಯಂತಹ ಘಟನೆಗಳಿಂದ ಬೇಸತ್ತು ಹೋಗಿರುವುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ಇಂತಹ ಕಾಲದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವ ಮುದ್ದಹನುಮೇಗೌಡರಿಗೆ ಘಾಡ್ ಫಾದರ್ ಯಾರು ಇಲ್ಲ ತಮ್ಮ ಶಕ್ತಿ ಮತ್ತು ವರ್ಚಸ್ಸನ್ನೇ ಚುನಾವಣೆಗೆ ಮಾನದಂಡವಾಗಿ ಬಳಸಿಕೊಂಡು ಗೆಲ್ಲಬೇಕಾದ ಅನಿವಾರ್ಯತೆಯಿದೆ. ಈ ಬಾರಿಯ ಚುನಾವಣೆಯು ದೊಡ್ಡ ನಾಯಕರು ಅನ್ನಿಸಿಕೊಂಡವರೆ ಗೆಲ್ಲುತ್ತೇವೆಯೋ ಇಲ್ಲವೋ ಎಂಬ ಭಯ ಈಗಲೇ ಪ್ರಾರಂಭವಾಗಿದ್ದು, ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕೆಂಬ ದರ್ದು ಬಿಜೆಪಿಗರಿಗೇನು ಇಲ್ಲ, ಅವರ ಶಕ್ತಿಯಿದ್ದರೆ ಗೆಲ್ಲಬಹುದಷ್ಟೆ ಎಂಬ ಮಾತುಗಳು ಈಗಾಗಲೇ ಹರಿದಾಡುತ್ತಾ ಇವೆ.

ಒಟ್ಟಿನಲ್ಲಿ 2023ರ ವಿಧಾನಸಭಾ ಚುನಾವಣೆ ಮುದ್ದಹನುಮೇಗೌಡರಿಗೆ ಇಳಿ ಜಾರೇನೂ ಇಲ್ಲ, ಏರು ತಿಟ್ಟು ಹತ್ತುವ ಚುನಾವಣೆಯೇ ಆಗಿದ್ದು ಈ ತಿಟ್ಟನ್ನು ಮುದ್ದಹನುಮೇಗೌಡರು ಹೇಗೆ ಹತ್ತುತ್ತಾರೆ ಎಂಬುದರ ಮೇಲೆ ಅವರು ಮೂರನೇ ಪಕ್ಷಕ್ಕೆ ಜಿಗಿದಿದ್ದು ರಾಜಕೀಯ ಉಳಿವೋ ಅಳಿವೋ ಎಂಬುದು ತಿಳಿಯಲಿದೆ. ಒಟ್ಟಿನಲ್ಲಿ ಮುದ್ದಹನುಮೇಗೌಡರಿಗೆ ಮಂತ್ರಿಯಾಗುವ ಯೋಗ ಒಮ್ಮೆಯಾದರೂ ಸಿಗುವುದೇ ಎಂಬುದನ್ನು ಸಹ ಈ ಮುಂಬರುವ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.

ಒಬ್ಬ ಸಜ್ಜನ ರಾಜಕಾರಣಿಗೆ ಆಗುವ ಎಲ್ಲಾ ರಾಜಕೀಯ ಸಂಕಷ್ಟಗಳು ಮುದ್ದಹನುಮೇಗೌಡರಿಗೂ ಆಗಿವೆ.

                                             -ಹೆಚ್.ವಿ.ವೆಂಕಟಾಚಲ 

Leave a Reply

Your email address will not be published. Required fields are marked *