ಅನುದಾನಿತ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರ ಹಾಗೂ ಶಿಕ್ಷಕರ ಕಾಲ್ಪನಿಕ ವೇತನಕ್ಕಾಗಿ ಕಾನೂನಿನ ಹೋರಾಟಕ್ಕೆ ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಂದಾಗಿದ್ದಾರೆ.
ಅವರು ಈ ಬಗ್ಗೆ ಮಾಹಿತಿಯನ್ನು ನೀಡಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಹಾಗೂ ಶಿಕ್ಷಕರು 1982ರಿಂದ ಕಾಲ್ಪನಿಕ ವೇತನಕ್ಕಾಗಿ ಹಲವಾರು ಮುಖಂಡರುಗಳ ನಾಯಕತ್ವದಲ್ಲಿ ಕಾನೂನಿನ ಹೋರಾಟವನ್ನು ನಡೆಸುತ್ತಾ ಬಂದಿದ್ದು, 2014ರಲ್ಲಿ ರಾಜ್ಯ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಯ ಉಪನ್ಯಾಸಕರ ಹಾಗೂ ಶಿಕ್ಷಕರಿಗೆ ನೀಡಬೇಕಾದ ಕಾಲ್ಪನಿಕ ವೇತನದ ವ್ಯವಸ್ಥೆಗೆ ಸುಗ್ರೀವಾಜ್ಞೆಯನ್ನು ತರುವುದರ ಮೂಲಕ ಶಿಕ್ಷಕರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಇಂದಿಗೂ ಸಹ ಹೈಕೋರ್ಟ್ ನಲ್ಲಿ ಹಲವಾರು ಮಂದಿ ಇದರ ವಿರುದ್ಧ ಕೇಸ್ ದಾಖಲಿಸಿ ಹೋರಾಟ ನಡೆಸುತ್ತಿದ್ದಾರೆ, ಆದರೆ ಆ ಹೋರಾಟಗಳು ನಿರೀಕ್ಷಿತ ಫಲವನ್ನು ನೀಡಿಲ್ಲ. ಇದೀಗ ಶಿಕ್ಷಕರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಾವು ಈ ಕಾನೂನಿನ ಹೋರಾಟಕ್ಕೆ ಕೈಜೋಡಿಸುವುದಾಗಿ ತಿಳಿಸಿದರು.
ರಾಜದಾದ್ಯಂತ ಹಲವಾರು ಮಂದಿ ಕಾಲ್ಪನಿಕ ವೇತನ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ದಾವೆ ಹೂಡಿ ಹೋರಾಟ ನಡೆಸುತ್ತಿದ್ದು, ಹಲವಾರು ಕಾರಣಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ವಾದ ಪ್ರತಿವಾದಗಳು ಮುಂದುವರೆಯುತ್ತಾ ಬಂದಿವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ರೂಪ್ಸ ಕರ್ನಾಟಕ ಮುಂದಾಗಿದ್ದು, ಈಗಾಗಲೇ ಅನುದಾನಿತ ಶಾಲಾ ಶಿಕ್ಷಕರ ಸಂಘದ ಮುಖಂಡರಾದ ಗೋಪಿನಾಥ್, ಮಂಜುನಾಥ್, ನಾಗರಾಜುರವರುಗಳನ್ನು ಭೇಟಿ ಮಾಡಿ ಮಾತನಾಡಿದ್ದು ಯಾರೆಲ್ಲಾ ಈ ಸಂಬಂಧ ಹೈಕೋರ್ಟ್’ನಲ್ಲಿ ದಾವೆ ಹೂಡಿದ್ದಾರೋ ಅವರೆಲ್ಲರೂ ತಮ್ಮ ವಕೀಲರಿಂದ ನಿರಪೇಕ್ಷಣಾ ಪ್ರಮಾಣಪತ್ರ (ಎನ್.ಒ.ಸಿ.) ಪಡೆದು ತಮಗೆ ನೀಡಿದರೆ, ರೂಪ್ಸ ಕರ್ನಾಟಕ ಸಂಘಟನೆಯಡಿಯಲ್ಲಿ ಹೈಕೋರ್ಟ್’ನಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ದಾವೆ ಹೂಡಿ ಸಮಸ್ಯೆಗೆ ಪರಿಣಾಮಕಾರಿಯಾಗಿ ಪರಿಹಾರ ಪಡೆಯಲು ಪ್ರಯತ್ನಿಸುತ್ತೇನೆಂದರು.
ಆರ್.ಟಿ.ಇ. ನಿಯಮದಡಿಯಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ವೇತನ ಭತ್ಯೆ ನೀಡಬೇಕಿರುವುದು ಸರ್ಕಾರದ ಕರ್ತವ್ಯ, ಆರ್.ಟಿ.ಇ. ನಿಯಮ ಜಾರಿಗೆ ಬಂದಿದ್ದು 2009 ರಲ್ಲಿ, ಆದರೆ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದು 2014ರಲ್ಲಿ, ಆದಕಾರಣ ಕೇಂದ್ರ ಸರ್ಕಾರ ಶಾಸನಬದ್ಧವಾಗಿ ಹೊರಡಿಸಿರುವ ಕಾನೂನನ್ನು ರಾಜ್ಯ ಸರ್ಕಾರ ಪಾಲಿಸದಿರುವುದು ಎದ್ದು ಕಾಣುತ್ತಿದ್ದು ಇದನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.
ಈ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನು ಆಯೋಜಿಸಲಾಗಿದ್ದು ಅಂದು ಕಾನೂನಿನ ಹೋರಾಟದ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಆದ್ದರಿಂದ ದಾವೆ ಹೂಡಿರುವ ಶಿಕ್ಷಕರು ನಿರಪೇಕ್ಷಣ ಪತ್ರವನ್ನು (ಎನ್.ಒ.ಸಿ.) ತಮಗೆ ಸಲ್ಲಿಸಬೇಕೆಂದು ಮನವಿ ಮಾಡಿದರು.