ಕುವೆಂಪು ರವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ರಚನೆ ಮಾಡಿದ್ದಾರೆ. ಅವರ ಸಾಹಿತ್ಯದ ಮೂಲದ್ರವ್ಯವೇ ಜೀವ ಕಾರುಣ್ಯ ಎಂದು ತರಂಗಿಣಿರವರು ನುಡಿದರು.
ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತುಮಕೂರು ಸಹಯೋಗದಲ್ಲಿ , ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ’ ಕುವೆಂಪು ನಾಟಕಗಳಲ್ಲಿ ಜೀವಕಾರುಣ್ಯ’ ಎಂಬ ವಿಷಯದ ಬಗ್ಗೆ ತರಂಗಿಣಿ ರವರು ಉಪನ್ಯಾಸ ನೀಡುತ್ತಾ ಮೇಲಿನಂತೆ ನುಡಿದರು.
ಕುವೆಂಪುರವರ ಕವಿತೆ ಮುಚ್ಚುಮರೆ ಇಲ್ಲದೆಯೇ …ನೆನಪಿಸಿಕೊಂಡು ಅಂತರಂಗದ ಗುರುವಿಗೆ ನಮನ ಸಲ್ಲಿಸಿ ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ ಅವರು, ದಯೆ ಇಲ್ಲದಾ ಧರ್ಮ ಯಾವುದಯ್ಯ ಎಂದಿದ್ದಾರೆ ಬಸವಣ್ಣ. ಇವರನ್ನು ಕ್ಷಮಿಸು ಎಂದಿದ್ದಾರೆ ಯೇಸು. ಬುದ್ದ ಗುರು ಇಡೀ ಜಗತ್ತನ್ನು ಕರುಣೆಯಿಂದ ನೋಡಿದ್ದಾರೆ.ಈ ಎಲ್ಲರ ಆಶಯಗಳೂ ಕುವೆಂಪು ಸಾಹಿತ್ಯ ದಲ್ಲಿ ಮೈತಳೆದಿವೆ. ಕುವೆಂಪುರವರ ನಾಟಕಗಳನ್ನು ಓದುತ್ತಾ ,ನೋಡುತ್ತಾ ಹೋಗುವಾಗ ಕರುಣೆಯ ಕಡಲಲ್ಲಿ ತೇಲುತ್ತೇವೆ. ಇವರ ನಾಟಕಗಳಲ್ಲಿ ಪ್ರಕೃತಿಯ ಜೊತೆ ಸಂವಾದ ಇದೆ ,ಭಗವಂತ ಒಲಿಯುವುದು ನಿಷ್ಕಲ್ಮಶ ಪ್ರೀತಿಗೆ, ನಿಷ್ಕಲ್ಮಶ ಹೃದಯವೇ ಭಗವಂತನ ವಾಸಸ್ಥಾನ ಎಂಬುದನ್ನು ಪ್ರತಿಪಾದಿಸಿದ್ದಾರೆ. ಪ್ರಕೃತಿಯಲ್ಲಿನ ಸಕಲ ಚರಾಚರದಲ್ಲಿ ಜೀವಂತಿಕೆ ಹುಡುಕಿ ಕರುಣೆ ತೋರಿಸಿದ್ದಾರೆ, ಯುದ್ಧದ ದುಷ್ಪರಿಣಾಮಗಳನ್ನು ಹೇಳಿದ್ದಾರೆ. ಮಹಾಕಾವ್ಯ ಗಳನ್ನು ಮುರಿದುಕಟ್ಟುವ ಕೆಲಸ ಕುವೆಂಪು ರವರು ಮಾಡಿದ್ದಾರೆ ಅದಕ್ಕೆಉದಾಹರಣೆ ಬೆರಳ್ಗೆ ಕೊರಳ್ ಮತ್ತು ಕಾನೀನ ನಾಟಕಗಳು.ಯಮನ ಸೋಲು ನಾಟಕದಲ್ಲಿ ಯಮನನ್ನು ಕರುಣಾ ಮಯಿ ಮಾಡಿಸಿದ್ದಾರೆ. ಕುವೆಂಪುರವರು ಬರೆದುದಷ್ಟೇ ಅಲ್ಲ ಹಾಗೆ ಬದುಕಿಯೂ ಇದ್ದರು ಎಂದು ನುಡಿದರು.
ಮಲ್ಲಿಕಾ ಬಸವರಾಜು ಅಧ್ಯಕ್ಷರು ಕಲೇಸಂ ತುಮಕೂರು ಜಿಲ್ಲಾ ಶಾಖೆರವರು ಪ್ರಸ್ತಾವನೆ ಮಾತುಗಳನ್ನಾಡುತ್ತಾ ಜಗದ ಕವಿ ಯುಗದ ಕವಿ , ಈ ನೆಲದ ವೈಚಾರಿಕ ಕವಿ ಕುವೆಂಪುರವರು ,ನಮಗೆ ನೀಡಿರುವ ಪಂಚ ಮಂತ್ರಗಳಾದ ಮನುಜ ಮತ ,ವಿಶ್ವ ಪಥ ಸರ್ವೋದಯ ,ಸಮನ್ವಯ ಹಾಗೂ ಪೂರ್ಣದೃಷ್ಠಿ ಯನ್ನು ಮತ್ತು ಸಪ್ತ ಸೂತ್ರಗಳನ್ನು , ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ,ಎಲ್ಲಾ ತಾರತಮ್ಯಗಳನ್ನು ಮೆಟ್ಟಿನಿಂತು ವಿಶ್ವಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಕುವೆಂಪು ರವರ ಆಶಯದಂತೆ, ವಿದ್ಯಾರ್ಥಿಗಳು ವೈಚಾರಿಕ, ವೈಜ್ಞಾನಿಕ ದೃಷ್ಠಿಕೋನ ಬೆಳೆಸಿಕೊಂಡು, ಅತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಆರೋಗ್ಯಕರ ಮನಸುಗಳನ್ನು ಮತ್ತು ಸ್ವಸ್ಥ ಸಮಾಜವನ್ನು ಕಟ್ಟಬೇಕು, ಕುವೆಂಪುರವರ ಸಾಹಿತ್ಯದ ಮೂಲ ದ್ರವ್ಯವಾದ, ವೈಚಾರಿಕ ಚಿಂತನೆ ಸಮತೆಯ ಆಶಯ, ಜೀವ ಕಾರುಣ್ಯ ಮತ್ತು ನಿಸರ್ಗ ವಿವೇಕವನ್ನು ಅಳವಡಿಸಿಕೊಂಡು ವಿಶ್ವಮಾನವರಾಗೋಣ ಎಂದು ನುಡಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಕಮಲಾ ನರಸಿಂಹರವರು, ಕನ್ನಡ ಸಿನಿಮಾಗಳಲ್ಲಿ ಕುವೆಂಪು ರಚನೆಯ ಕವಿತೆಗಳನ್ನು ಚಿತ್ರಗೀತೆಗಳಾಗಿ ಅಳವಡಿಸಿಕೊಂಡಿರುವುದನ್ನು ಪ್ರಸ್ತಾಪಿಸಿ, ಅವುಗಳಲ್ಲಿರುವ ಭಾವಮಾಧುರ್ಯ ಮತ್ತು ಪದ ಸಂಪತ್ತಿನ ಬಗ್ಗೆ ತಿಳಿಸಿ , ನೀವು ಸದಾ ಇವುಗಳನ್ನು ಕೇಳಿದರೆ ನಿಮ್ಮ ಭಾಷಾಜ್ಞಾನ ಹೆಚ್ಚಾಗುವುದು ಎಂದು ಹೇಳುತ್ತಾ ನಡುವೆ ಸುಶ್ರಾವ್ಯವಾಗಿ ಒಂದೆರಡು ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸದರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮಂಜುನಾಥ್ ರವರು, ಕುವೆಂಪುರವರ ಸಾಹಿತ್ಯದಿಂದ ಸ್ಪೂರ್ತಿಗೊಂಡ ತಾವು ಕಾವ್ಯ ರಚನೆಗೆ ಮುಂದಾದ್ದನ್ನು ತಿಳಿಸಿದರು.
ಅಕ್ಕಮ್ಮನವರು, ಕುವೆಂಪು ರವರ ಅನಿಕೇತನ ಗೀತೆ ಮತ್ತು ವೈಚಾರಿಕ ಗೀತೆಗಳನ್ನು ಹಾಡಿದರು.
ಪಾರ್ವತಮ್ಮ ರಾಜಕುಮಾರ್ ರವರು ,ಕುವೆಂಪು ರವರ ಭಾವಗೀತೆಗಳನ್ನು ಹಾಡಿದರು.
ಸಿ.ಎಲ್ .ಸುನಂದಮ್ಮರವರು ಸ್ವಾಗತಿಸಿದರು .ಕಾಲೇಜಿನ ವಿದ್ಯಾರ್ಥಿನಿ ಆಶಾರಾಣಿ ನಿರೂಪಣೆ ಮಾಡಿದರು. ಸಂಘದ ಉಪಾಧ್ಯಕ್ಷರಾದ ಸಿ.ಎ.ಇಂದಿರಾ , ಕಾರ್ಯಕಾರಿ ಸಮಿತಿ ಸದಸ್ಯರಾದ ಉಮಾದೇವಿ ಗ್ಯಾರಳ್ಳ ಮತ್ತು ಸದಸ್ಯರಾದ ಸರೋಜಮ್ಮ ರವರು ಉಪಸ್ಥಿತರಿದ್ದರು.