ಬೀದಿಯ ಬದಿಯಲ್ಲೊಂದು ನಾಯಿ
ಯಾರದೋ ಸ್ವತ್ತಿಗೆ ಹಾಕಿತು ಬಾಯಿ
ಕತ್ತು ಸಿಕ್ಕೀಕೊಂಡೀತೆಂಬ ಪರಿವೆಯೆ ಇಲ್ಲ
ಮಾನ ಹೋದೀತೆಂಬ ಅರಿವೇ ಇಲ್ಲ
ಉದರ ಪೋಷಣೆಯೊಂದೇ ಗುರಿ ಅದಕೆ
ಅಂಕೆ ಶಂಕೆಗಳ ಚಿಂತೆ ಅದಕೇತಕೆ…
ಎಷ್ಟೇ ಆದರು ಅದು ಶ್ವಾನ
ಹೋದರೆ ಹೋಗಲಿ ಬಿಡಿ ಅದರ ಮಾನ
ಅದಕಿಂತಲೂ ಕೀಳು ನಮ್ಮ ಕೆಲ ಜನ.
ಅದೇನು ರಾಜಕಾರಣಿಯಲ್ಲ
ನೆಲವೇ ನುಂಗಿ ನೀರು ಕುಡಿದರೂ
ಗಂಟಲಿಗೂ ಅಂಟದೆ ಜೀರ್ಣಿಸಿಕೊಳ್ಳಲು
ಅದಾವ ಆಡಳಿತ ಸೇವೆಯ
ಅಧಿಕಾರಿಯೂ ಅಲ್ಲ
ಕೋಟಿ ಕೋಟಿ ಲೂಟಿಮಾಡಿ
ಎಲ್ಲೋ ಅಡಗಿಡಿಸಲು
ಅದಕಾವ ವಸ್ತ್ರವೂ ತೊಡಿದಿಲ್ಲ
ಟ್ರಾಫಿಕ್ಕಲಿ ನಿಂತು
ಬಂದು ಹೋಗುವವರಿಗೆಲ್ಲ ಕೈ ಅಂದು
ಕಿಸೆಯಲಿ ಕಾಸಿಗೆ/ಹೇಸಿಗೆ ತುರುಕಿಕೊಳ್ಳಲು
ಕೊನೆಪಕ್ಷ ಮುನಿಸಿಪಾಲಿಟಿಯದೋ ಅಥವ
ಇನ್ನಾವುದೋ ಕಛೇರಿಯ ಗುಮಾಸ್ತನೂ ಅಲ್ಲ
ಬಡವರ ಬಸವಳಿದವರ ರಕ್ತ ಹೀರಲು….
ಅದು ಕೇವಲ ನಾಯಿ
ಅದಕಿಂತಲೂ ಕಡೆ ನಮ್ಮವರ ಕೈಯಿ ಬಾಯಿ
ಅದೋ ಹೊಟ್ಟೆ ಹೊರೆಯಲು ಹೋಗಿ
ಸಿಕ್ಕಿ ಹಾಕಿಕೊಂಡ ಶ್ವಾನ
ನಾವೋ ಏನೇ ತಿಂದು ತೇಗಿದರೂ
ಗುರುತೇ ಇಲ್ಲವಾಗಿಸುವ ಜನ..
ಹಜ಼ರತ್ ಅಲಿ. ಉಜ್ಜಿನಿ..