ದೇಶಪ್ರೇಮ, ಸೈನಿಕರಿಗೆ ಬೆಂಬಲ ನೀಡುವ ಬೃಹತ್ ತಿರಂಗಾ ಯಾತ್ರೆ ರಾರಾಜಿಸಿದ ತ್ರಿವರ್ಣ ಧ್ವಜ

ತುಮಕೂರು: ಭಯೋತ್ಪಾದಕರ ವಿರುದ್ಧ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ‘ರಾಷ್ಟ್ರ ರಕ್ಷಣೆಗಾಗಿ ನಾಗರೀಕರು’ ಎಂಬ ಧ್ಯೇಯದೊಂದಿಗೆ ಬಿಜೆಪಿ ನೇತೃತ್ವದಲ್ಲಿ ವಿವಿಧ ಸಮಾಜ, ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಭಾನುವಾರ ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಭಾರತ ಮಾತೆಯ ಭಾವಚಿತ್ರದ ಮೆರವಣಿಗೆಯೊಂದಿಗೆ ಎಸ್‍ಐಟಿ ಕಾಲೇಜು ಮುಂಭಾಗದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದವರೆಗೆ ನಡೆದ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿ ತ್ರಿವರ್ಣ ಧ್ವಜ ಪ್ರದರ್ಶಿಸುತ್ತಾ ಸಾಗಿದರು. ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು 150 ಮೀಟರ್ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿ ದೇಶಪ್ರೇಮ ಮೆರೆದರು.

ತಿರಂಗಾ ಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‍ನಲ್ಲಿ ಅಮಾಯಕ ಭಾರತೀಯರ ಹತ್ಯೆ ಮಾಡಿದ ಪಾಕಿಸ್ತಾನ ಪ್ರಚೋದಿತ ಉಗ್ರರ ಧಮನಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿತು, ನಮ್ಮ ಸೈನಿಕರು ಪಾಕಿಸ್ಥಾನದ ಉಗ್ರದ ನೆಲೆಗಳನ್ನು ಧ್ವಂಸ ಮಾಡಿ ಪರಾಕ್ರಮ ಮೆರೆದರು. ಇಂತಹ ವೀರ ಯೋಧರಿಗೆ ಸ್ವಾಭಿಮಾನಿ ಭಾರತೀಯರು ಬೆಂಬಲ ನೀಡಿ, ಆತ್ಮಸ್ಥೈರ್ಯ ತುಂಬಬೇಕು. ಅದಕ್ಕಾಗಿ ಈ ತಿರಂಗಾ ಯಾತ್ರೆ ಎಂದು ಹೇಳಿದರು.

ಭಾರತ ಯಾವ ದೇಶದ ಮೇಲೂ ಯುದ್ಧ ಸಾರಿಲ್ಲ, ಆದರೆ ಉಗ್ರರಿಗೆ ಆಶ್ರಯ ನೀಡಿ ಭಾರತದ ಮೇಲೆ ದಾಳಿಗೆ ಪ್ರಚೋದಿಸುವ ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿ ಮಾಡಿ ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಉಗ್ರರ ವಿರುದ್ಧದ ಭಾರತದ ಹೋರಾಟವನ್ನು ವಿಶ್ವವೇ ಮೆಚ್ಚಿದೆ. ಭಾರತದ ವ್ಯವಸ್ಥೆಯನ್ನು ಬುಡಮೇಲು ಮಾಡುವ ಉಗ್ರರ ತಂತ್ರ ಯಶಸ್ವಿಯಾಗಲು ಬಿಡುವುದಿಲ್ಲ, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಆಡಳಿತ ದೇಶದ ಸುಭದ್ರತೆಗೆ, ರಕ್ಷಣೆಗೆ ಬದ್ಧವಾಗಿದೆ. ಉಗ್ರರನ್ನು ಬಗ್ಗುಬಡಿಯವಲ್ಲಿ ನಮ್ಮ ಸರ್ಕಾರ ಹಾಗೂ ಸೈನಿಕರು ಸದಾ ಸನ್ನದ್ಧರಾಗಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿರಂಗಾ ಯಾತ್ರೆಯಾಲ್ಲಿ ಭಾಗವಹಿಸಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಅಭಿನಂದನೆ ಸಲ್ಲಿಸಲು ದೇಶಾದ್ಯಂತ ತಿರಂಗಾ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ನಾಗರೀಕರು, ದೇಶಭಕ್ತರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಯಾತ್ರೆ ನಡೆಯುತ್ತಿಲ್ಲ, ದೇಶದ ಜನರಲ್ಲಿ ಜಾಗೃತಿ ಮೂಡಿಸುವುದು, ಸೈನಿಕರಿಗೆ ಬೆಂಬಲ ನೀಡುವುದು ಇದರ ಉದ್ದೇಶ ಎಂದರು.

ಪಾಕಿಸ್ತಾನ ಜಿಂದಾಬಾದ್ ಎನ್ನುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಕೂಗುವ ದೇಶದ್ರೋಹಿಗಳು ನಮ್ಮ ರಾಜ್ಯದಲ್ಲೂ ಇದ್ದಾರೆ. ದೇಶದಲ್ಲೂ ಇದ್ದಾರೆ. ಅಂತಹವರನ್ನು ಹುಡುಕುವ ಕೆಲಸ ಆಗಬೇಕಾಗಿದೆ. ತಿರಂಗಾ ಯಾತ್ರೆ ಪಕ್ಷಕ್ಕೆ ಸೀಮಿತವಾಗದೆ ರಾಜಕಿಯೇತರವಾಗಿ ಸಮಾಜದ ಎಲ್ಲಾ ವರ್ಗದವರನ್ನು ಮುಂಚೂಣಿಯಲ್ಲಿ ಕರೆದುಕೊಂಡು ತಿರಂಗಾ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಪಹಲ್ಗಾಮ್‍ನಲ್ಲಿ ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮಾಡಿ ಪಾಕಿಸ್ತಾನದಲ್ಲಿದ್ದ ಉಗ್ರರ ತಾಣಗಳನ್ನು ಧ್ವಂಸ ಮಾಡಿದೆ. ಉಗ್ರರ ವಿರುದ್ಧ ಸೇಡು ತೀರಿಸಿಕೊಂಡ ನಮ್ಮ ವೀರ ಯೋಧರಿಗೆ ದೇಶದ ಪ್ರತಿಯೊಬ್ಬರೂ ಬೆಂಬಲ ನೀಡಿ, ಅವರಿಗೆ ನೈತಿಕ ಸ್ಥೈರ್ಯ ನೀಡಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.

ಚಿತ್ರ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿದ ಉಗ್ರರ ಸಂಘಟನೆಗಳ ವಿರುದ್ಧ ನಮ್ಮ ಪರಾಕ್ರಮಿ ಸೈನಿಕರು ಕಾರ್ಯಾಚರಣೆ ಮಾಡಿ ಅವರ ನೆಲೆಗಳನ್ನು ನೆಲಸಮ ಮಾಡಿದ್ದಾರೆ. ಉಗ್ರರ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಟರ್ಕಿ ದೇಶ ಬೆಂಬಲ ನೀಡಿದೆ. ಭಾರತದ ಮೇಲೆ ಪಾಕಿಸ್ತಾನವು ಟರ್ಕಿಯ ಡ್ರೋಣ್‍ಗಳನ್ನು ಹಾರಿಸಿದೆ, ಟರ್ಕಿಯಲ್ಲಿ ಭೂಕಂಪನವಾದ ಸಂಕಷ್ಟದ ಸಮಯದಲ್ಲಿ ಮೋದಿ ಸರ್ಕಾರ ಆ ದೇಶಕ್ಕೆ ಸಹಾಯ ಮಾಡಿತ್ತು. ನಿಯತ್ತಿಲ್ಲದ ಟರ್ಕಿ ಈಗ ಪಾಕಿಸ್ತಾನದ ಬೆಂಬಲಕ್ಕಿದೆ ಎಂದು ಟೀಕಿಸಿದರು.

ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ.ಸ್ವಾಮಿ ವೀರೇಶಾನಂದ ಸರಸ್ವತಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಶಿವಗಂಗೆ ಮಹಾಲಕ್ಷ್ಮಿ ಪೀಠದ ಜ್ಞಾನಾನಂದಪುರಿ ಸ್ವಾಮೀಜಿ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‍ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಮಾಜಿ ಶಾಸಕರಾದ ಡಾ.ಎಂ.ಆರ್.ಹುಲಿನಾಯ್ಕರ್, ಮಸಾಲ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದರು.

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಜಿಲ್ಲಾ ವೈದ್ಯರ ಸಂಘ, ಜಿಲ್ಲಾ ವಕೀಲರ ಸಂಘ, ದಲಿತ ಸಂಘಟನೆಗಳು, ಆಟೋ ಚಾಲಕರ ಸಂಘ, ಸಹಕಾರಿ ಬ್ಯಾಂಕುಗಳು, ನಿವೃತ್ತ ಸೈನಿಕರ ಸಂಘ, ಹಲವು ಸಮಾಜಗಳ ಪ್ರಮುಖರು, ಸಾರ್ವಜನಿಕರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದರು.

Leave a Reply

Your email address will not be published. Required fields are marked *