ತುಮಕೂರು : ಮಹಾನಗರ ಪಾಲಿಕೆಯ ಆಯುಕ್ತರಾದ ಬಿ.ವಿ.ಆಶ್ವಿಜ ಅವರು ಖುದ್ದು ವಾರ್ಡ್‍ಗೆ ಭೇಟಿ ನೀಡಿ ವಾರ್ಡಿನ ಅವ್ಯವಸ್ಥೆ ಕಂಡು ದಂಗಾಗಿ ಹೋದರು.
ಅಲ್ಲಿ ಮನುಷ್ಯರು ಹೇಗೆ ಬದುಕುತ್ತಿದ್ದಾರೆ, ಎಂಬುದನ್ನು ಕಣ್ಣಾರೆ ಕಂಡ ಆಯುಕ್ತರು, ಕುರಿ ದೊಡ್ಡಿಯಂತಿರುವ ಬೀದಿಗಳು, ಎಲ್ಲೆಂದರಲ್ಲಿ ಹರಿಯುತ್ತಿರುವ ಕೊಳಚೆ ನೀರು, ಶುಚಿತ್ವವೇ ಇಲ್ಲದ ಸಮುದಾಯ ಶೌಚಾಲಯ, ಶುದ್ಧ ನೀರು ಸರಬರಾಜಾಗದೆ ಇರುವುದು, ಖಾಲಿ ಜಾಗಗಳಲ್ಲಿ ಕೊಳೆತು ನಾರುತ್ತಿರುವ ಕಸದ ರಾಶಿಗಳನ್ನು ಕಂಡು ಅವಕ್ಕಾಗಿ ಹೋದರು.
ಇದೆಲ್ಲಾ ಕಂಡು ಬಂದಿದ್ದು ಮಹಾನಗರ ಪಾಲಿಕೆಯ ವ್ಯಾಪ್ತಿಯ 13ನೇ ವಾರ್ಡಿನ ಕುರಿಪಾಳ್ಯದಲ್ಲಿ, ಇಂದು ಅನೀರಿಕ್ಷಿತ ಭೇಟಿ ನೀಡಿದ ಆಯುಕ್ತರು ಅಲ್ಲಿಯ ಜನರ ಅಹವಾಲುಗಳನ್ನು ಖುದ್ದು ಆಲಿಸಿದರು.
ಪರಿವೀಕ್ಷಣೆ ಮಾಡಿದ ನಂತರ ಅವರು, ವಾರ್ಡಿನ ನಾಗರಿಕರ ಸಮಸ್ಯೆಗಳ ಕುರಿತು ಸಮಲೋಚನೆ ನಡೆಸಿದರು. ಸಮಲೋಚನೆಯಲ್ಲಿ ಬಹುಮುಖ್ಯವಾಗಿ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ ಹಾಗೂ ಒಳಚರಮಡಿ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಅಡುಗೆ ಮನೆ ಕಸ ಹಾಗೂ ಇತರೆ ತ್ಯಾಜ್ಯಗಳನ್ನು ಚರಂಡಿಗಳಿಗೆ ಸುರಿಯದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು.
ನಂತರ ಕುರಿಪಾಳ್ಯದಲ್ಲಿರುವ ಸಮುದಾಯ ಶೌಚಾಲಯ ಹಾಗೂ ಸ್ಮಶಾನ ಭೂಮಿಯ ಪರಿವೀಕ್ಷಣೆ ಮಾಡಿ ಸರ್ಕಾರಿ ಶಾಲೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಭಾಗದಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಕಂಡುಬರುತ್ತಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ವಹಿಸಬೇಕು ಹಾಗೂ ಅಗತ್ಯ ಇರುವ ಕಡೆ ಕೂಡಲೇ ಫಾಗಿಂಗ್ ಮಾಡಲು ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಮಹಾನಗರ ಪಾಲಿಕೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯುಕ್ತರೊಂದಿಗೆ ಉಪಸ್ಥಿತರಿದ್ದರು.