ತುಮಕೂರು : ತುಮಕೂರು ನಗರದಲ್ಲಿ ಇಂದು ಸಂಜೆ ಸುರಿದ ಒಂದು ಗಂಟೆ ಮಳೆಗೆ ಹಲವಾರು ಕಡೆ ನೀರು ನಿಂತು ಜನ, ವಾಹನಗಳು ಸಂಚರಿಸದಂತಹ ಸ್ಥಿತಿ ಉಂಟಾಗಿ, ಪರದಾಟುವಂತಾಯಿತು.
ಇಂದು ಸಂಜೆ 6ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆಯು ಬಿಟ್ಟು,ಬಿಟ್ಟು ಗುಡುಗು ಸಹಿತ ಮಿಂಚಿನೊಂದಿಗೆ ಬಿರುಸಾಗಿ ಬಂದಿತು.
ಇಷ್ಟು ಮಳೆಗೆ ಯಲ್ಲಾಪುರದ ಸೇತುವೆ ಅಡಿ ಮಳೆ ನೀರು ನಿಂತು ಯಾವುದೇ ವಾಹನಗಳು ಓಡಾಡದಂತಾಯಿತು, ನಗರದ ಪ್ರಮುಖ ರಸ್ತೆಯಾದ ಬಿ.ಹೆಚ್,ರಸ್ತೆಯು ಸಮುದ್ರದಂತಾಗಿ ಯಾವುದೇ ವಾಹನಗಳು ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಯಿತು.
ಮಳೆಯ ನೀರಿನಿಂದ ಟ್ರಾಫಿಕ್ ಜಾಮ್ ಆದ ಹಿನ್ನಲೆಯಲ್ಲಿ ಅಂಬುಲೆನ್ಸ್ ಒಂದು ಸಿಲುಕಿಕೊಂಡಿತು, ಇದರಿಂದ ಜನರು ತುಮಕೂರು ಸ್ಮಾರ್ಟ್ ಸಿಟಿಯಡಿಯಾಗಿರುವ ಕಾಮಗಾರಿಗಳನ್ನು ಬೈಯ್ದುಕೊಂಡು ಓಡಾಡುತ್ತಿದ್ದರು.
ಇದಲ್ಲದೆ ತುಮಕೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನರು ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದರು.
ಇಡೀ ವರ್ಷ ಮಳೆ ಇಲ್ಲದ ಕಾರಣ ಮೈ ಮರೆತು ಕುಳಿತಿರುವ ಮಹಾನಗರ ಪಾಲಿಕೆ ಅಧಿಕಾರಿಗಳು, ಚರಂಡಿ ಸ್ವಚ್ಚತೆ, ರಸ್ತೆ ಬದಿಯ ಮಣ್ಣು, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದೆ ಕಾಲಹರಣ ಮಾಡುತ್ತಿದ್ದಾರೆಂದು ಜನತೆ ಶಾಪ ಹಾಕುತ್ತಿದ್ದಾರೆ.
ತುಮಕೂರು ನಗರದಲ್ಲಿ ಡೆಂಗ್ಯೂ ನಿರೀಕ್ಷೆಗೂ ಮೀರಿ ಹರಡುತ್ತಿದ್ದರೂ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಪಾಲಿಕೆ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷತೆಯನ್ನು ಎತ್ತಿ ತೋರಿಸುತ್ತಿದೆ.
ಒಂದು ಗಂಟೆಯ ಮಳೆಗೆ ತುಮಕೂರಿನಲ್ಲಿ ಸ್ಮಾಟ್ ಸಿಟಿಯ ಅದ್ವಾನಗಳು ಎದ್ದು ಕಾಣುತ್ತಿದ್ದು, ಎಲ್ಲೆಲ್ಲಿ ಏನೇನು ಆಗಿದೆಯೋ ಮಳೆ ಬಿಟ್ಟ ನಂತರ ಬಟಾಬಯಲಾಗಲಿದೆ, ಅದನ್ನು ಹೇಳುವವರು ಯಾರು, ಕೇಳುವವರು ಯಾರು ಇಲ್ಲದಂತಾಗಿದೆ.