ತುಮಕೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆದಿದ್ದು, ಇದು ತುಮಕೂರು ಜಿಲ್ಲೆ ಕೊನೆ ವಿಜಯ ಸಂಕಲ್ಪ ಯಾತ್ರೆಯಾಗಿದೆ.
ಇಡೀ ಜಿಲ್ಲೆಯಲ್ಲಿಯೇ ಬೀಡು ಬಿಟ್ಟಿರುವ ಬಿ.ಎಸ್.ಯಡಿಯೂರಪ್ಪ, ಬೆಳಗ್ಗೆ ತುರುವೇಕೆರೆಯಲ್ಲಿ, ಮಧ್ಯಾಹ್ನ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಸಂಜೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹಾಗೂ ವಿಜಯ ಸಂಕಲ್ಪಯಾತ್ರೆ ಉಸ್ತುವಾರಿ ಸಚ್ಚಿದಾನಂದಮೂರ್ತಿ ಅವರೊಂದಿಗೆ ಮೂರು ಕ್ಷೇತ್ರಗಳಲ್ಲಿ ಸಂಕಲ್ಪ ಯಾತ್ರೆ ನಡೆಸಿದರು.
ನಗರದ ಟೌನ್‍ಹಾಲ್ ವೃತ್ತದಿಂದ ಆರಂಭವಾದ ಬಿಜೆಪಿಯ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಯಾತ್ರೆ ಶಾಸಕ ಜಿ.ಬಿ.ಜೋತಿಗಣೇಶ್,ಮಾಜಿ ಶಾಸಕ ಎಸ್.ಶಿವಣ್ಣ,ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಹೆಬ್ಬಾಕ, ಡಾ.ಹುಲಿನಾಯ್ಕರ್,ಸಂಸದ ಜಿ.ಎಸ್.ಬಸವರಾಜು ಹಾಗೂ ಇನ್ನಿತರ ನಾಯಕರುಗಳೊಂದಿಗೆ ,ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಬಾರ್‍ಲೈನ್ ರಸ್ತೆ,ಕೆ.ಆರ್.ಬಡಾವಣೆ ಮೂಲಕ ಭದ್ರಮ್ಮ ವೃತ್ತ ತಲುಪಿ ಮುಕ್ತಾಯಗೊಂಡಿತ್ತು.
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಇದುವರೆಗೂ ನಡೆದಿರುವ ವಿಜಯ ಸಂಕಲ್ಪಯಾತ್ರೆಯ ಮುಕ್ತಾಯ ಸಮಾರಂಭ ಮಾರ್ಚ್ 25 ರಂದು ದಾವಣಗೆರೆಯಲ್ಲಿ ನಡೆಯಲಿದ್ದು,ಆ ಕಾರ್ಯಕ್ರಮದಲ್ಲಿ ಸ್ವತಹಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ನಿಮ್ಮನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಈ ಕಾರ್ಯಕ್ರಮಕ್ಕೆ ಸುಮಾರು 4-5 ಲಕ್ಷ ಜನ ಸೇರುವ ನಿರೀಕ್ಷೆಯಿದೆ.ನಮ್ಮ ಕಾರ್ಯಕ್ರಮಗಳಿಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಕಾಂಗ್ರೆಸ್ ಪಕ್ಷದವರಿಗೆ ಗಾಬರಿ ಯಾಗಿದ್ದಾರೆ.ಎಂದಿಗೂ ಮೋದಿಗೆ,ರಾಹುಲ್ ಸರಿಸಾಟಿಯಲ್ಲ.ನರೇಂದ್ರಮೋದಿ,ಅಮಿತ್ ಷಾ,ಜೆ.ಡಿ.ನಡ್ಡಾ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ.ಸಾಧ್ಯವಾದರೆ ತುಮಕೂರು ಜಿಲ್ಲೆಗೂ ಮೋದಿಯವರನ್ನು ಕರೆತರುವ ಪ್ರಾಮಾಣಿಕ ಪ್ರಯತ್ನ ನಡಸುತ್ತೇನೆ. ಮತ್ತೊಮ್ಮೆ ಬಿಜೆಪಿಯನ್ನು ಈ ಕ್ಷೇತ್ರದಿಂದ ಆಯ್ಕೆ ಮಾಡಿ ಕಳುಹಿಸಿಕೊಡುಬೇಕು ಎಂದರು.
ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಲ್ಲಿಯೂ ಬಿಜೆಪಿ ಕಾರ್ಯಕರ್ತರು ಗೆಲ್ಲಬೇಕು. ಹಣಬಲ,ತೋಳ್ಬಲದಿಂದ,ಅಧಿಕಾರ ನಡೆಸುಬಹು ದೆಂಬ ಕಾಂಗ್ರೆಸ್ ಭ್ರಮೆಯಿಂದ ಸುಳ್ಳು ಭರವಸೆ ನೀಡುತ್ತಿದ್ದಾರೆ.ಭಾಗ್ಯಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಮಕ್ಕಳಿಗೆ ಒಳ್ಳೆಯದಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದೇವೆ. ರೈತರಿಗೆ ಉಚಿತ ವಿದ್ಯುತ್ ನೀಡಿದ್ದ ಯಡಿಯೂರಪ್ಪ ಎಂಬುದನ್ನು ನಿವ್ಯಾರು ಮರೆಯಬಾರದು.ಹಿಂದು,ಮುಸ್ಲಿಂ ಎಲ್ಲರೂ ಒಗ್ಗೂಡಿ ಬಾಳಬೇಕೆಂಬುದು ಪ್ರಧಾನಿ ನರೇಂದ್ರಮೋದಿ ಸೇರಿದಂತೆ ನಮ್ಮೆಲ್ಲರ ಅಪೇಕ್ಷೆಯಾಗಿದೆ.ಎಲ್ಲರ ಸಹಕಾರದಿಂದ ನಮ್ಮ ಶಾಸಕರನ್ನು ಆಯ್ಕೆ ಮಾಡಿಕಳುಹಿಸಲು ಮನವಿ ಮಾಡುತ್ತೇನೆ.ಜಿಲ್ಲೆಯಲ್ಲಿ ಒಂದೇ ಒಂದು ಕಾಂಗ್ರೆಸ್ ಪಕ್ಷ ಗೆಲ್ಲದಂತೆ ನಾವುಗಳು ನೋಡಿಕೊಳ್ಳಬೇಕಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇವೆ ಎಂಬ ತಿರುಕನ ಕನಸು ಕಾಣುತ್ತಿದ್ದು,ಇದಕ್ಕೆ ಎಂದಿಗೂ ಬಿಜೆಪಿ ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು ಎಂದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ತಿಗಳ ಸಮುದಾಯದ ಅಭಿವೃದ್ದಿಗಾಗಿ ಕರ್ನಾಟಕ ತಿಗಳರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲಾಗಿದೆ.ಇದರ ಜೊತೆಗೆ ತಿಗಳ ಸಮುದಾಯದ ಕೋರಿಕೆಯಂತೆ ಮಾರ್ಚ್ 28 ರಂದು ಶ್ರೀಅಗ್ನಿಬನ್ನಿರಾಯಸ್ವಾಮಿ ಜಯಂತಿಯನ್ನು ಸರಕಾರವೇ ಆಚರಿಸಲು ಆದೇಶ ಹೊರಡಿಸಿದೆ.ಇದರ ಜೊತೆಗೆ ನೇಕಾರ ಸಮುದಾಯಕ್ಕೂ ಹೆಚ್ಚು ಕೊಡುಗೆಯನ್ನು ನಮ್ಮ ಸರಕಾರ ನೀಡಿದೆ. ರೈತರಿಗೆ, ನಾಗರಿಕರಿಗೆ ಹೆಚ್ಚಿನ ಸೌಲಭ್ಯ ನೀಡಿದೆ. ಹಾಗಾಗಿ ನಮ್ಮ ಪಕ್ಷಕ್ಕೆ ಹೆಚ್ಚಿನ ಮತ ನೀಡಬೇಕೆಂದು ಸಾರ್ವಜನಿಕರಲ್ಲಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.