ಮಹಿಳೆಯರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ-ಡಿ.ಸಿ. ಶುಭಾ ಕಲ್ಯಾಣ್

ತುಮಕೂರು: ಜಿಲ್ಲೆಯ ಮಹಿಳೆಯರು, ಮಕ್ಕಳ ಅಪೌಷ್ಠಿಕತೆ ಪ್ರಮಾಣ ಕಡಿಮೆ ಮಾಡುವಲ್ಲಿ ಆರೋಗ್ಯ ಕಾರ್ಯಕರ್ತೆಯರು, ಅಧಿಕಾರಿಗಳ ಕಾರ್ಯ ಶ್ಲಾಘನೀಯ, ಪೋಷಣ್ ಅಭಿಯಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವುದರಲ್ಲಿ ನಿಮ್ಮಗಳ ಕೊಡುಗೆ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಿ ಜನರ ಆರೋಗ್ಯ ಕಾಪಾಡಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೇಳಿದರು.

ಶನಿವಾರ ನಗರದ ಜಿಲ್ಲಾ ಆಸ್ಪತ್ರೆಯಿಂದ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜನರ ಆರೋಗ್ಯ ರಕ್ಷಣೆಯ ಮಹತ್ವದ ಸೇವೆಯಲ್ಲಿರುವ ಆರೋಗ್ಯ ಇಲಾಖೆ ಕಾರ್ಯಕರ್ತೆಯರು, ಸಿಬ್ಬಂದಿ ಕಾರ್ಯ ಒತ್ತಡದ ನಡುವೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಹೇಳಿದರು.

ಮಹಿಳೆಯರಿಗೆ ಸಾಕಷ್ಟು ಸವಾಲುಗಳಿರುತ್ತವೆ. ಕುಟುಂಬ ನಿರ್ವಹಣೆ ಜೊತೆಗೆ ವೃತ್ತಿಯ ಕೆಲಸದ ಒತ್ತಡವೂ ಇರುತ್ತದೆ. ಎರಡೂ ಕಡೆ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಅಂತಹ ಸಾಮಥ್ರ್ಯ ಮಹಿಳೆಯರಿಗೆ ಇದೆ. ಆ ನಿಟ್ಟಿನಲ್ಲಿ ಯಶಸ್ವಿಯಾಗಬೇಕು. ಮಹಿಳಾ ದಿನಾಚರಣೆಯ ಮಹತ್ವ ತಿಳಿದು ಅದರ ಆಶಯಗಳನ್ನು ಎಲ್ಲರೂ ಅನುಸರಿಸಿಕೊಂಡು ಹೋಗಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್ ಮಾತನಾಡಿ, ಮಹಿಳಾ ದಿನ ಆಚರಣೆಯ ಆಶಯ ತಿಳಿಸಿ, ಮಹಿಳೆಗೆ ಆದಿಶಕ್ತಿಯ ಶಕ್ತಿ ಇರುತ್ತದೆ. ಆಕೆ ಯಾವುದನ್ನಾದರೂ ಸಮರ್ಥವಾಗಿ ಸಾಧಿಸುವ ಶಕ್ತಿ ಇರುತ್ತದೆ. ಕುಟುಂಬ, ಸಮಾಜದಲ್ಲೂ ಮಹಿಳೆಯರ ಪ್ರಮುಖ ಪಾತ್ರ ವಹಿಸುವ ಮಹಿಳೆಯ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಮಹಿಳೆಯ ಹಕ್ಕು, ತ್ಯಾಗ, ಶೋಷಣೆ, ದೌರ್ಜನ್ಯ ಕುರಿತಂತೆ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಚರ್ಚೆಗೆ ಬಂದು ಮಹಿಳೆಯರ ಸ್ಥಾನಮಾನಗಳ ಬಗ್ಗೆ ಜನರಲ್ಲಿ ಮನದಟ್ಟು ಮಾಡಿ, ಸಾಮಾಜಿಕ, ಸಾಂಸಾರಿಕ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎನ್ನುತ್ತಾರೆ. ತಾಯಿ ತಮ್ಮ ಮಕ್ಕಳಿಗೆ ತಾಯಿ ಬಾಲ್ಯದಿಂದಲೇ ಆದರ್ಶ ಗುಣಗಳನ್ನು ತಿಳಿಸಿಕೊಡಬೇಕು. ಈಗ ಮೊಬೈಲ್ ಮಕ್ಕಳ ಪಾಲಿನ ದುಷ್ಟ ಶಕ್ತಿ ಎನ್ನುವಂತಾಗಿದೆ. ಹತ್ತು ವರ್ಷದವರೆಗೆ ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಅಂತಹ ಮಕ್ಕಳು ಮುಂದೆ ಎಲ್ಲಾ ರೀತಿಯಲ್ಲಿಯೂ ಯಶಸ್ವಿಯಾಗುತ್ತಾರೆ ಎಂದು ಹೇಳಿದರು.

ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ರಾಮೇಗೌಡ, ತಜ್ಞ ವೈದ್ಯರಾದ ಡಾ.ಈಶ್ವರಯ್ಯ, ಡಾ.ಪ್ರಭಾ, ಗಾಯತ್ರಿ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *