ಗುಬ್ಬಿ: ಭೂಗಳ್ಳ ರಿ ಗೆ ನ್ಯಾಯಾಂಗ ಬಂಧನ ಬಹು ಕೋಟಿ ಭೂ ಹಗರಣ ದಲ್ಲಿ ಭಾಗಿ, ತಾಲ್ಲೂಕು ಆಡಳಿತ ಮತ್ತು ಜನ ಪ್ರತಿನಿಧಿ ಗಳ ಮೇಲೆ ಗುಮಾನಿ ಹಳೆಯ ದಾಖಲಾತಿ ಗಳನ್ನ ತಿದ್ದಿ ಲಭ್ಯ ಇರುವ ೧೩೫ ನಕಲಿ ಫಲನುಭವಿ ಗಳ ಪೈಕಿ ೯೦ ದಾಖಲೆಗಳು ಒಂದೇ ಸಮುದಾಯಕ್ಕೆ ಸೃಷ್ಠಿಸಿರುವ ಎಂಎಲ್‌ಎ ಭಂಟ ಹದಲೂರು ವಿಜಯ ಕುಮಾರ್, ಕರಿಯಪ್ಪ ಮತ್ತು ಗುಬ್ಬಿ ತಾಲ್ಲೂಕು ಕಛೇರಿ ರೇಕಾರ್ಡ್ ರೂಂನ ಸತೀಶ್ ಅವರುಗಳು ಈ ಪ್ರಕರಣದ ಮುಖ್ಯ ಕಿಂಗ್ ಪಿನ್ ಗಳಾಗಿದ್ದಾರೆ.

ಬಂಧಿಸಲು ಆಗ್ರಹ: ರಾಜ್ಯದಲ್ಲೇ ಅತಿ ದೊಡ್ಡ ಭೂ ಮಾಫಿಯಾ ದಂಧೆಯಾದ ಗುಬ್ಬಿ ತಾಲ್ಲೂಕಿನಲ್ಲಿ ನಡೆದ ಗೋಮಾಳ ಜಮೀನು ಗುಳುಂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಓಡಿ ತನಿಖೆಗೆ ಒಳಪಡಿಸಿ ಇದರ ಹಿಂದಿನ ಪ್ರಭಾವಿಗಳನ್ನು ಬಂಧಿಸಬೇಕು ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಆಗ್ರಹ.

ಪಟ್ಟಣದ ಸುಭಾಷ್ ನಗರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗೋಮಾಳ ಜಮೀನಿನ ಮೂಲ ದಾಖಲೆಯನ್ನು ತಿರುಚುವ ಮತ್ತು ಬೇಕಾದವರಿಗೆ ಜಮೀನು ಸೃಷ್ಟಿಸಿಕೊಡುವ ದೊಡ್ಡ ಮಟ್ಟದ ಮಾಫಿಯಾ ತಂಡ ಇಲ್ಲಿ ಕಾರ್ಯ ಚಟುವಟಿಕೆ ನಡೆಸಿದೆ. ಈ ಅವ್ಯವಹಾರದಲ್ಲಿ ಕಾಣದ ಕೈಗಳ ರೀತಿ ಇರುವ, ದೊಡ್ಡ ಅಧಿಕಾರಿಗಳು, ಪ್ರಭಾವಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳನ್ನು ಬಂಧಿಸಿ ನ್ಯಾಯಯುತ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಗೋಡು ತಿಮ್ಮಪ್ಪ ಅವರ ಕೊಡುಗೆಯಾದ ಈ ಬಗರ್ ಹುಕುಂ ಸಮಿತಿಯ ಮಂಜೂರಾತಿ ಕಾರ್ಯದಲ್ಲಿ ಶಿವಮೊಗ್ಗ ನಂತರ ಗುಬ್ಬಿ ತಾಲ್ಲೂಕು ಅತೀ ಹೆಚ್ಚು ಹಕ್ಕುಪತ್ರ ನೀಡಿದ್ದು ಸಾವಿರಾರು ಎಕರೆ ಪ್ರದೇಶ ನೀಡಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ಶಾಸಕರೇ ಇರುವ ಕಾರಣ ಈಗ ನಡೆದ ಭ್ರಷ್ಟಾಚಾರಕ್ಕೆ ವಿರೋಧ ವ್ಯಕ್ತಪಡಿಸಿ ಅನ್ಯಾಯವಾದ ರೈತರ ಪರ ನಿಲ್ಲಬೇಕು. ಸಮಿತಿ ಇಲ್ಲದ ಸಮಯದಲ್ಲಿ ನಡೆದ ಗೋಲ್ ಮಾಲ್ ತನಿಖೆಗೆ ಒಳಪಡಿಸಿದಂತೆ ಸಮಿತಿಯ ಮೂಲಕ ಆಗಿರುವ ಮಂಜೂರಾತಿಯನ್ನು ತನಿಖೆಗೆ ಒಳಪಡಿಸಬೇಕು. ಅಲ್ಲಿಯೂ ಸಹ ಸಾಕಷ್ಟು ಅವ್ಯವಹಾರ ನಡೆದಿದೆ. ನಿಯಮ ಮೀರಿ ಜಮೀನು ನೀಡಿರುವುದು ಕಂಡಿದೆ. ಒಂದೇ ಕುಟುಂಬಕ್ಕೆ ಹತ್ತಾರು ಎಕರೆ ನೀಡಲಾಗಿದೆ. ಈ ಬಗ್ಗೆ ಸಹ ಸಿಓಡಿ ತನಿಖೆ ಆಗಲಿ ಎಂದು ಒತ್ತಾಯಿಸಿದರು.
ಭೂಮಿಯ ಹಗರಣ ಗಮನಿಸಿದರೆ ಕೋಟ್ಯಾಂತರ ರೂಗಳ ಕಬಳಿಕೆ ನಡೆದಿದೆ. ಜಮೀನು ನೋಡದ ವ್ಯಕ್ತಿಗಳಿಗೆ ಜಮೀನು ದಾಖಲೆ ಸೃಷ್ಟಿ ಮಾಡಿರುವುದು ಗಮನಿಸಿದರೆ ಈ ಮಾಫಿಯಾ ತಂಡಕ್ಕೆ ಪ್ರಭಾವಿಗಳ ಬೆಂಬಲ ಕಾಣುತ್ತಿದೆ. ಏಳು ಮಂದಿ ಆರೋಪಿಗಳ ಬಂಧನ ನಂತರ ತನಿಖೆಗೆ ಒಳಪಟ್ಟವರಲ್ಲಿ ಶಾಸಕರ ಬಲಗೈ ಭಂಟರೊಬ್ಬರು ಇರುವುದು ಮೇಲ್ನೋಟಕ್ಕೆ ಶಾಸಕರ ಸಹಕಾರ ಇರುವಂತೆ ಭಾಸವಾಗುತ್ತದೆ ಎಂದು ನೇರ ಆರೋಪ ಮಾಡಿದರು.
ತಹಶೀಲ್ದಾರ್ ಮನೆಗೆ ಕನ್ನ ಹಾಕಿರುವುದು ಸಹ ದಾಖಲೆ ಕದಿಯಲು ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಈ ನಕಲಿ ದಾಖಲೆ ಸೃಷ್ಟಿಯಲ್ಲಿ ಶಾಸಕರ ಸಹಿ ಫೋರ್ಜರಿ ಆಗಿರುವ ಬಗ್ಗೆ ಅವರೇ ಹೇಳಿಕೆ ನೀಡುತ್ತಿರುವುದು ಗಮನಿಸಿದರೆ ತಾಲ್ಲೂಕು ಆಡಳಿತ ಕುಸಿತದ ಅಳ ತಿಳಿಯುತ್ತದೆ. ಲೆಕ್ಕಕ್ಕೆ ಸಿಗದಷ್ಟು ಕಬಳಿಕೆ ಮಾಡಿರುವ ಅನುಮಾನಗಳು ಇಲ್ಲಿವೆ. ಮಧ್ಯವರ್ತಿಗಳ ಜೊತೆ ಶಾಮೀಲು ಆಗಿರುವ ಉನ್ನತ ಅಧಿಕಾರಿಗಳನ್ನು ಮೊದಲು ಬಂಧಿಸಬೇಕು. ಕಳೆದ ಹಲವು ವರ್ಷದಿಂದ ನಡೆದ ಈ ಎಲ್ಲಾ ಭ್ರಷ್ಟಾಚಾರಕ್ಕೆ ತೆರೆ ಎಳೆಯಲು ಕಂದಾಯ ಸಚಿವ ಆರ್.ಅಶೋಕ್ ಅವರು ಮಧ್ಯ ಪ್ರವೇಶ ಮಾಡಬೇಕು. ಕೂಡಲೇ ಸಿಓಡಿ ತನಿಖೆಗೆ ಒಳಪಡಿಸಿ ಅವ್ಯವಹಾರದ ಜಮೀನು ಮುಟ್ಟುಗೋಲು ಹಾಕಿಕೊಂಡು ಅರ್ಹ ಫಲಾನುಭವಿಗೆ ನೀಡಲು ಆಗ್ರಹಿಸಿ, ನ್ಯಾಯ ಸಿಗದಿದ್ದಲ್ಲಿ ಹೋರಾಟ ನಡೆಸುತ್ತೇವೆ. ಈ ಕಬಳಿಕೆ ಪ್ರಕರಣಕ್ಕೆ ಒಳಪಟ್ಟ ಎಲ್ಲಾ ದಾಖಲೆಯನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ನೀಡಿ ಕೂಲಂಕುಷ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದರು.