ವರದಿ : ಸಲಿಂಪಾಶ, ಗುಬ್ಬಿ.

ಗುಬ್ಬಿ: ಕಳೆದ 20 ವರ್ಷದ ಒಡನಾಟದ ಜೆಡಿಎಸ್ ಪಕ್ಷವನ್ನು ಹೀಯಾಳಿಸಿದ ಗುಬ್ಬಿ ಶಾಸಕರಿಗೆ ಯಾವ ಪಕ್ಷವೂ ಸರಿ ಹೋಗಲ್ಲ. ಮರಳಿ ಗೂಡಿಗೆ ಬರಲೇಬೇಕು. ಇವೆಲ್ಲವೂ ಅರಿತು ಇರುವಷ್ಟು ದಿನ ಒಳ್ಳೆಯವ ಎನಿಸಿಕೊಳ್ಳಬೇಕಿತ್ತು. ಜಾತಿಗೆ ಜಾತಿ ವೈರಿ ಅನ್ನೋವಂತೆ ದೇವೇಗೌಡರಿಗೆ ಮೋಸ ಮಾಡಿದ್ದರ ಫಲ ಮುಂದಿನ ಚುನಾವಣೆಯಲ್ಲಿ ಅನುಭವಿಸಲೇಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯಿಸಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಜೆಡಿಎಸ್ ತಾಳಿ ಕಟ್ಟಿಕೊಂಡು ಮತ್ತೊಂದು ಪಕ್ಷದ ಜೊತೆ ಸಂಸಾರ ಮಾಡುವುದು ಸೂಕ್ತವಲ್ಲ. ಈ ರಾಜ್ಯಸಭಾ ಚುನಾವಣೆಯಲ್ಲಿ ಎರಡು ತಾಳಿ ಕಟ್ಟಿದ್ದು ಇದ್ಯಾವ ಲೆಕ್ಕ ಅನ್ನೋದೇ ಅರ್ಥ ಆಗುತ್ತಿಲ್ಲ ಎಂದು ಹಾಸ್ಯವಾಗಿಯೇ ಛೇಡಿಸಿದರು.
ಜಾತ್ಯತೀತ ನಿಲುವು ಅಳವಡಿಸಿಕೊಂಡ ದೇವೇಗೌಡರಿಗೆ ನಾನು ಮುಸ್ಲಿಂ ಆಗಿ ನಿಯತ್ತು ಇಟ್ಟುಕೊಂಡಿದ್ದೇನೆ. ಆದರೆ ನೀವು ಅವರ ಸಮುದಾಯವೇ ಆಗಿಯೂ ಮೋಸ ಮಾಡಿದ್ದು ಸರಿಯಲ್ಲ ಎಂದು ಶಾಸಕರಿಗೆ ಟಾಂಗ್ ಕೊಟ್ಟ ಅವರು ಶಾಸಕ ವಾಸಣ್ಣ ಅವರನ್ನು ಕರೆದುಕೊಳ್ಳಲು ಸಿದ್ಧವಾದ ಡಿಕೆಶಿ ಅವರೇ ಶ್ರೀನಿವಾಸ್ ಅವರ ಮೂಲಕ ಬಿಜೆಪಿಗೆ ಮತ ಹಾಕಿಸಿದ್ದೂ ಸರಿಯೇ, ಇದು ಕಾಂಗ್ರೆಸ್ ಸಿದ್ದಾಂತವೇ ಎಂದು ಪ್ರಶ್ನಿಸಿ ಈ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ. ಈವರೆವಿಗೂ ಉತ್ತರ ಬಂದಿಲ್ಲ ಎಂದು ಲೇವಡಿ ಮಾಡಿದರು.
ನಮ್ಮ ಜೆಡಿಎಸ್ ತಾಳಿ ಕಟ್ಟಿಕೊಂಡು ಬೇರೆಡೆ ಸಂಸಾರ ಮಾಡೋದು ಸಂಸ್ಕಾರವಲ್ಲ. ವಾಸಣ್ಣನಿಗೆ ಯಾವ ಪಕ್ಷವೂ ಸರಿ ಹೋಗಲ್ಲ. ಅಲ್ಲಿ ಕ್ಯಾಬರೆ ಡ್ಯಾನ್ಸ್ ಆಡೋರು ಜಾಸ್ತಿ. ಈ ವಯಸ್ಸಿನಲ್ಲಿ ಅವರಿಗೆ ಆಗೋದಿಲ್ಲ. ಮರಳಿ ನಮ್ಮಲ್ಲಿಗೆ ಬರಬೇಕಾಗುತ್ತೆ ಎಂದ ಅವರು ಜನತಾ ಪಾರ್ಟಿಯಲ್ಲಿದ್ದ ಮಾಧುಸ್ವಾಮಿ ಅವರು ಅಡ್ಡ ಮತದಾನಕ್ಕೆ ಡೀಲ್ ನಡೆಸಿರುವುದು ಅವರ ಅದರ್ಶಕ್ಕೆ ದಕ್ಕೆ ತಂದಿದೆ. ಇತಿಹಾಸ ತಿರುಚುವ ಕೆಲಸ ಮಾಡಿದ ಬಿಜೆಪಿ ಕೇಶವ ಕೃಪ ಆಶೀರ್ವಾದದಿಂದ ಕೆಲಸ ಮಾಡುತ್ತಿದೆ. ಕೋಮು ಸೌಹಾರ್ದ ಹಾಳು ಮಾಡಿ ಕಿಚ್ಚು ಹಚ್ಚಿದ್ದಲ್ಲದೆ ಈಗ ಅಗ್ನಿ ಪಥ ಯೋಜನೆ ಹೆಸರಿನಲ್ಲಿ ಯುವಕರ ಶಿಕ್ಷಣಕ್ಕೆ ತಿಲಾಂಜಲಿ ಹಚ್ಚುವ ಕೆಲಸ ಮಾಡಿದೆ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ ದೇವೇಗೌಡರನ್ನು ತಂದೆ ಸಮಾನ ಎಂದೇ ಹೇಳುತ್ತಾ ಇಡೀ ಪಕ್ಷಕ್ಕೆ ಮಾಡಿದ ದ್ರೋಹ ಉಂಡು ಮನೆಗೆ ಎರಡು ಬಗೆದಂತೆ ಈ ಜೊತೆಗೆ ಸುಳ್ಳು ಹೇಳಿಕೆ ನೀಡುತ್ತಾ ವರಿಷ್ಠರನ್ನೇ ಏಕ ವಚನದಲ್ಲೇ ಹೀಯಾಳಿಸಿದ್ದು ಬೆನ್ನಿಗೆ ಚೂರಿ ಹಾಕಿದ್ದು ನಂಬಿಕೆ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿ ಮತದಾರರೇ ನಿಮಗೆ ಉತ್ತರ ಕೊಡುತ್ತಾರೆ. ರಾಜಕೀಯ ಗಡಿಪಾರು ಮಾಡುತ್ತಾರೆ. ಶ್ರೀನಿವಾಸ್ ಸೋಲಿಸಲು ಕುಮಾರಣ್ಣ ಬರಬೇಕಿಲ್ಲ. ಇಲ್ಲಿನ ಕಾರ್ಯಕರ್ತರೇ ಸಾಕು ಎಂದು ತೀಕ್ಷ್ಣ ಉತ್ತರ ನೀಡಿದರು.
ಶಾಸಕ ಡಿ.ಸಿ.ಗೌರಿ ಶಂಕರ್ ಮಾತನಾಡಿ ಅಭ್ಯರ್ಥಿ ತಯಾರಿಸುವ ಫ್ಯಾಕ್ಟರಿ ಜೆಡಿಎಸ್ ಪಕ್ಷವಾಗಿದೆ. ಏಕ ವಚನ ಪ್ರಯೋಗ ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತಾಗಿದೆ. ಎದುರಾಳಿ ಬಗ್ಗೆ ಚಿಂತಿಸದೆ ಮುನ್ನುಗ್ಗಿ ಯುದ್ಧ ಮಾಡುವ ಕಲೆ ಇಲ್ಲಿ ಕಲಿಸುತ್ತೇವೆ. ಜಿಲ್ಲೆಯ ಯಾವ ಕ್ಷೇತ್ರಕ್ಕಾದರೂ ನೀನು ಸಿದ್ಧನಾಗಲು ಕುಮಾರಣ್ಣ ನನಗೆ ಸೂಚಿಸಿದ್ದರು. ನಾಗರಾಜು ಬರದೇ ಹೋಗಿದ್ದರೆ ನಾನೇ ಗುಬ್ಬಿಗೆ ಬರುತ್ತಿದ್ದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಒಕ್ಕಲಿಗರು ಒಗ್ಗೂಡಲು ಗುಬ್ಬಿ ಶಾಸಕರೇ ದಾರಿ ಮಾಡಿಕೊಟ್ಟಿದ್ದಾರೆ. ಇದೇ ನಾಗರಾಜು ಗೆಲುವಿಗೆ ಸೋಪಾನ ಎಂದು ಹೇಳಿದರು.
ಬಡ ರೈತ ಕುಟುಂಬದಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆ ಕಂಡು ನೂರಾರು ಮಂದಿಗೆ ಉದ್ಯೋಗ ಕೊಟ್ಟು ಉದ್ಯಮಿ ಆದ ಬಳಿಕ ತವರೂರಲ್ಲಿ ಜನಸೇವೆಗೆ ಒತ್ತು ನೀಡಿ ಜಿಪಂ ಸದಸ್ಯ ಸ್ಥಾನದ ಮೂಲಕ 50 ಕೋಟಿ ಕೆಲಸ ಸಾಕ್ಷಿಯಾಗಿದೆ. ರಾಜಕಾರಣ ಮಾಡುವುದು ನನಗೂ ತಿಳಿದಿದೆ. ಅಖಾಡಕ್ಕೆ ನಾನು ಸಿದ್ದ ಬನ್ನಿ ಎಂದು ಶಾಸಕರಿಗೆ ಸವಾಲೆಸದರು.
ಬೇಲೂರು ಶಾಸಕ ಲಿಂಗೇಶ್, ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಜೆಡಿಎಸ್ ಮಹಿಳಾ ಘಟಕದ ಅಜ್ಮ ನಜೀಮ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಚಿಕ್ಕೀರಪ್ಪ ಅವರನ್ನು ಅಧಿಕೃತ ಘೋಷಣೆ ಮಾಡಲಾಯಿತು.
ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಧುಗಿರಿ ಶಾಸಕ ವೀರಭದ್ರಯ್ಯ, ಮಾಜಿ ಶಾಸಕರಾದ ಸುಧಾಕರ್ ಲಾಲ್, ತಿಮ್ಮರಾಯಪ್ಪ, ಡಿ.ನಾಗರಾಜಯ್ಯ, ಸುರೇಶ್ ಬಾಬು, ಮುಖಂಡರಾದ ಗೋವಿಂದರಾಜು, ರುದ್ರೇಶ್, ಕರಿಯಪ್ಪ, ಶಿವಲಿಂಗಯ್ಯ, ಜಿ.ಡಿ.ಸುರೇಶ್ ಗೌಡ, ಮಹಾಲಿಂಗಪ್ಪ ಇತರರು ಇದ್ದರು.