ತುಮಕೂರು : ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿಯ ಶ್ರೀ ಶ್ರೀ ವಿಧು ಶೇಖರ ಭಾರತೀ ಸ್ವಾಮಿಗಳ ವಿಜಯ ಯಾತ್ರೆ ಜುಲೈ 7 ಮತ್ತು 8ರಂದು ಬಿ.ಹೆಚ್.ರಸ್ತೆಯ ಶಂಕರ ಮಠದಲ್ಲಿ ಶ್ರೀ ಶಂಕರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಂಕರಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ.ಕೆ.ನಾಗರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಗಳು ಜುಲೈ 7ರ ಸಂಜೆ ನಗರಕ್ಕೆ ಆಗಮಿಸುವರು. ಅವರನ್ನು ಪುರಭವನದ ಬಳಿ ಸ್ವಾಗತಿಸಿ ಶಂಕರ ಮಠದವರೆಗೆ ಶೋಭಾ ಯಾತ್ರೆಯಲ್ಲಿ ಕರೆತರಲಾಗುವುದು ಎಂದರು. ನಂತರ ಶಂಕರ ಮಠದ ಆವರಣದಲ್ಲಿ ಧೂಳೀ ಪಾದ ಪೂಜೆ ಮತ್ತು ಶ್ರೀ ಶ್ರೀ ಗಳ ಅನುಗ್ರಹ ಭಾಷಣದ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಶ್ರೀಗಳು ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು ನೆರವೇರಿಸುವರು.
ಜುಲೈ 8 ಬೆಳಿಗ್ಗೆ, ಶಂಕರ ಮಠದಲ್ಲಿ ನಡೆಯುವ ರುದ್ರಹೋಮದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗಳು ಭಾಗವಹಿಸುವರು. ನಂತರ ಶಾಂಕರ ತನ್ನ ಪ್ರಸಾರ ಅಭಿಯಾನದ ವಿವಿಧ ಮಹಿಳಾ ಮಂಡಳಿಯವರು ಭಜನೆ ಸಮರ್ಪಣೆ ಕಾರ್ಯಕ್ರಮ ನಡೆಸಿಕೊಡುವರು, ಪಾದಪೂಜೆ, ಭಿಕ್ಷಾವಂದನೆ ಮುಂತಾದ ಕಲಾಪಗಳು ಈ ಸಂದರ್ಭದಲ್ಲಿ ನಡೆಯುತ್ತವೆ. ಇದರೊಂದಿಗೆ ಶ್ರೀ ಶ್ರೀ ಗಳು ಬರುವ ಸಮಸ್ತ ಭಕ್ತರಿಗೆ ಆಶೀರ್ವದಿಸಿ ಅನುಗ್ರಹಿಸುವರು ಎಂದು ತಿಳಿಸಿದರು.
ಈ ಎಲ್ಲಾ ಕಾರ್ಯಕ್ರಮವು ಶಾಂಕರ ತತ್ವ ಅಭಿಯಾನಂ, ಶ್ರೀ ಶಂಕರ ಸೇವಾ ಸಮಿತಿ – ಶಂಕರ ಮಠ, ಮತ್ತು ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಈ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತವ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿ ಸಹಕಾರ ನೀಡುತ್ತಿವೆ ಎಂದರು.