ಧರ್ಮಪ್ರವರ್ತ ನಿಡಸಾಲೆಯ ಚನ್ನಂಜಪ್ಪ ಉಚಿತ ವೀರಶೈವ ವಿದ್ಯಾರ್ಥಿನಿಲಯದ ಕಟ್ಟಡದ ಉದ್ಘಾಟನೆ

ತುಮಕೂರು:ವೀರಶೈವ ಸಮಾಜದಲ್ಲಿಯೂ ಕಡುಬಡವರಿದ್ದು,ಅಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸಮಾಜದ ಎಲ್ಲಾ ಭಾಂಧವರು ಕೈಜೋಡಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮನವಿ ಮಾಡಿದ್ದಾರೆ.

ನಗರದ ಉಪ್ಪಾರಹಳ್ಳಿಯಲ್ಲಿ ನವೀಕೃತಗೊಂಡಿರುವ ಧರ್ಮಪ್ರವರ್ತ ನಿಡಸಾಲೆಯ ಚನ್ನಂಜಪ್ಪ ಉಚಿತ ವೀರಶೈವ ವಿದ್ಯಾರ್ಥಿನಿಲಯದ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು, ಗುಬ್ಬಿಯ ತೋಟದಪ್ಪನವರು 200 ವರ್ಷಗಳ ಹಿಂದೆಯೇ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಸ್ಟಲ್ ನಿರ್ಮಿಸಿದರೆ, 75 ವರ್ಷಗಳ ಹಿಂದೆ ಗುಬ್ಬಿಯ ನಿಡಸಾಲೆಯ ಚನ್ನಂಜಪ್ಪ ಅವರು ಸಹ ಹಾಸ್ಟಲ್ ನಿರ್ಮಿಸುವ ಮೂಲಕ ಅವರ ಹಾದಿಯಲ್ಲಿ ನಡೆದಿದ್ದಾರೆ. ಇಂದು ಸಹ ಇಂತಹ ಹಾಸ್ಟಲ್‍ಗಳ ಅಗತ್ಯ ಸಮುದಾಯದ ವಿದ್ಯಾರ್ಥಿಗಳಿಗಿದೆ. ಹಾಗಾಗಿ ಉಳ್ಳುವರು ಕೈಜೋಡಿಸಿದರೆ ಶಿಕ್ಷಣದಲ್ಲಿ ಸಮುದಾಯ ಮತ್ತಷ್ಟು ಪ್ರಗತಿ ಕಾಣಲಿದೆ ಎಂದರು.

ಒಂದು ಸರಕಾರ ಮಾಡುವ ಕೆಲಸವನ್ನು ಕಲ್ಯಾಣ ಕರ್ನಾಟಕ ಹಾಗೂ ಇತರೆ ಭಾಗಗಳಲ್ಲಿ ಮಠ, ಮಾನ್ಯಗಳು, ಸಂಘ, ಸಂಸ್ಥೆಗಳು ಮಾಡಿದರ ಪರಿಣಾಮ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯವಾಯಿತು.ನಾವು ಕೂಡ ಶಿವಮೊಗ್ಗದಲ್ಲಿ ನಾಲ್ಕು ಉಚಿತ ಹಾಸ್ಟಲ್‍ಗಳನ್ನು ಸಮುದಾಯದ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿದ್ದೇವೆ.ಶೀಘ್ರದಲ್ಲಿಯೇ ಹೆಣ್ಣು ಮಕ್ಕಳ ಹಾಸ್ಟಲ್ ಸಹ ಆರಂಭವಾಗಲಿದೆ.ಚನ್ನಂಜಪ್ಪ ಹಾಸ್ಟಲ್ ಸಮಿತಿಯವರು ಇರುವ ಖಾಲಿ ಜಾಗವನ್ನು ಉಪಯೋಗಿಸಿಕೊಂಡು ಸಂಪನ್ಮೂಲ ಕ್ರೂಢೀಕರಿಸಿ, ಹಾಸ್ಟಲ್ ನೆಸಲು ಅಗತ್ಯವಿರುವ ಅದಾಯವನ್ನು ಪಡೆಯುವಂತಾಗಲಿದೆ ಎಂದು ಸಿ.ಎನ್.ಷಡಕ್ಷರಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಪ್ರವರ್ತ ಚನ್ನಂಜಪ್ಪ ಉಚಿತ ವೀರಶೈವ ವಿದ್ಯಾರ್ಥಿನಿಲಯ ಆಡಳಿತ ಮಂಡಳಿ ಕಾರ್ಯದರ್ಶಿ ಧರ್ಮಪಾಲ್,1944ರಲ್ಲಿ ನಿರ್ಮಾಣಗೊಂಡ ಈ ಹಾಸ್ಟಲ್ 2010ರ ವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಆದರೆ 2011ರಲ್ಲಿ ರೈಲ್ವೆ ಪ್ಲೇಓವರ್ ನಿರ್ಮಾಣಕ್ಕೆಂದು ಭೂಸ್ವಾಧೀನ ಮಾಡಿಕೊಂಡಾಗ ಹಾಸ್ಟಲ್‍ನ ಕೆಲ ಭಾಗ ಭೂ ಸ್ವಾಧೀನ ಗೊಂಡು, ಉಳಿದ ಭಾಗ ಪಾಳು ಬಿದ್ದಿತ್ತು.ಇದನ್ನು ಹೇಗಾದರೂ ಮಾಡಿ ಅಭಿವೃದ್ದಿ ಪಡಿಸಬೇಕೆಂಬ ಇಚ್ಚೆಯಿಂದ ಹಳೆಯ ವಿದ್ಯಾರ್ಥಿಗಳು, ಚನ್ನಂಜಪ್ಪ ವಂಶಸ್ಥರು ಹಾಗೂ ಹಾಸ್ಟಲ್ ಸಮಿತಿಯೊಂದಿಗೆ ಚರ್ಚೆ ನಡೆಸಿ ಸುಮಾರು 1.25 ಕೋಟಿ ರೂಗಳಲ್ಲಿ 32 ಸುಸಜ್ಜಿತ ಕೊಠಡಿಗಳನ್ನು ಒಳಗೊಂಡ ಹಾಸ್ಟಲ್ ನಿರ್ಮಾಣಗೊಂಡಿದೆ. ಸುಮಾರು 120 ರಿಂದ 150 ವಿದ್ಯಾರ್ಥಿಗಳು ಇಲ್ಲಿ ತಂಗಲು ಅವಕಾಶವಿದೆ.ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಆರ್ಪಿಸಲಾಗುವುದು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಯಡಿಯೂರಿನ ಬಾಳೇಹೊನ್ನೂರಿನ ಶ್ರೀಮದ್ ರಂಭಾಪುರಿ ಶಾಖಾ ಮಠದ ಶ್ರೀರೇಣುಕ ಶಿವಾಚಾರ್ಯ ಮಹಾಸ್ವಾಮೀಗಳು,ವೀರಶೈವ ಮಠಗಳಲ್ಲಿ ಹಾಸ್ಟಲ್ ಪರಿಕಲ್ಪನೆ ಮಾಡಿದವರಲ್ಲಿ ಚಿತ್ರದುರ್ಗದ ಮುರುಘಾ ಮಠದ ಶ್ರೀ ಜಯದೇವಸ್ವಾಮಿಗಳು,ಆ ನಂತರದಲ್ಲಿ ಎಲ್ಲಾ ಮಠಗಳು ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ.ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಮಠ ಮಾನ್ಯಗಳು, ಸಂಘ ಸಂಸ್ಥೆಗಳ ಮಾಡುವ ಮೂಲಕ ಕರ್ನಾಟಕದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ.ಇದೇ ನಿಟ್ಟಿನಲ್ಲಿ ಗುಬ್ಬಿ ತೋಟದಪ್ಪ, ನಿಡಸಾಲೆಯ ಚನ್ನಂಜಪ್ಪ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಉಚಿತ, ಊಟ ವಸತಿ ನೀಡಲು ಶ್ರಮಿಸಿದ್ದಾರೆ ಎಂದರು.
ವೀರಶೈವರ ಮೂಲಕ ಕಸುಬು ವ್ಯಾಪಾರ. ಹಿಂದೆ ವ್ಯಾಪಾರಸ್ಥರಾಗಿದ್ದ ವೀರಶೈವರು ತಮ್ಮ ಆದಾಯದ ಒಂದಷ್ಟನ್ನು ಇಂತಹ ಸತ್ಕಾರ್ಯಗಳಿಗೆ ವಿನಿಯೋಗಿಸುತಿದ್ದರು. ಆದರೆ ಇಂದು ಎಲ್ಲರೂ ಸರಕಾರಿ ನೌಕರಿ,ವೈದ್ಯರು, ಇಂಜಿನಿಯರ್‍ಗಳಾಗಿ ದಾನ, ಧರ್ಮವೆಂಬುದು ಮರೀಚಿಕೆಯಾಗಿದೆ.ಆದರೂ ಧರ್ಮಪ್ರವರ್ತ ಚನ್ನಂಜಪ್ಪ ಅವರ ಹೆಸರು ಉಳಿಸುವ ನಿಟ್ಟಿನಲ್ಲಿ ಇಂತಹ ಭವ್ಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ನೀವೆಲ್ಲರೂ ಪೂಜ್ಯರು.ಇಂತಹ ಕಾರ್ಯಗಳು ಮುಂದೆಯೂ ನಿಮ್ಮಿಂದ ಆಗಬೇಕಾಗಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ವೀರಶೈವ ಸಮುದಾಯದಲ್ಲಿರುವ ಒಳಪಂಡಗಡಗಳ ಭಿನ್ನಮತವನ್ನು ಬದಿಗೊತ್ತಿ,ನಾವೆಲ್ಲರೂ ಒಂದೇ ಎಂಬ ರೀತಿಯಲ್ಲಿ ಸಮಾಜದ ಕೆಲಸಕ್ಕೆ ದುಡಿಯೋಣ ಎಂದು ಶುಭಾಶೀರ್ವಾದ ನೀಡಿದರು.

ವೇದಿಕೆಯಲ್ಲಿ ಹಾಸ್ಟಲ್ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನಾಗರಾಜು,ಉಪಾಧ್ಯಕ್ಷ ಅರುಣಕುಮಾರ್,ಪ್ರಧಾನ ಕಾರ್ಯದರ್ಶಿ ಧರ್ಮಪಾಲ್,ಸದಸ್ಯರಾದ ಸಿ.ಎಸ್.ಕುಮಾರಸ್ವಾಮಿ, ಸಿ.ಎಸ್.ಶಿವಪ್ರಸಾದ್,ಗುರುಮಲ್ಲಿಕಾರ್ಜುನ್,ಧರ್ಮಶಂಕರ್ ರಾಜು, ಶಿವಜೋತಿ, ಹಳೆಯ ವಿದ್ಯಾರ್ಥಿ ಸದಾಶಿವಯ್ಯ, ನಂಜುಂಡಪ್ಪ, ಸಿದ್ದರಾಮಯ್ಯ, ಸರ್ವಮಂಗಳ,ಪಾಲಿಕೆ ಸದಸ್ಯರಾದ ಮಂಜುಳ ಆದರ್ಶ,ವೀರಶೈವ ಲಿಂಗಾಯಿತ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರೇಣುಕಾರಾಧ್ಯ, ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಹಾಸ್ಟಲ್ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯ ಮಾಡಿದ ಧಾನಿಗಳನ್ನು ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *