ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸದಂತೆ ದಿನೇ ದಿನೇ ಹೋರಾಟಗಳು ನಡೆಯುತ್ತೆಲೆ ಇವೆ ಆದರೂ ಸಹ ರಾಜ್ಯ ಸರ್ಕಾರ ನನಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ಸರಿಯಲ್ಲ ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಪೋಷಕ ಸಮಿತಿಯ ಸಂಚಾಲಕ ನಿವೃತ್ತ ಶಿಕ್ಷಕ ಗೋವಿಂದಯ್ಯನವರು ಒತ್ತಾಯಿಸಿದರು.
ಅವರು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಈ ಕೂಡಲೇ ವಜಾಮಾಡಬೇಕು ಮತ್ತು ಈ ಹಿಂದೆ ಪ್ರಜಾಸತ್ತಾತ್ಮಕವಾಗಿ ರಚನೆಯಾಗಿದ್ದ ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯ ಪಠ್ಯಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳು ಮತ್ತು ಘನತೆವೆತ್ತ ರಾಜ್ಯಪಾಲರಿಗೆ ಪತ್ರಚಳವಳಿಗೆ ಚಾಲನೆ ನೀಡಿ ಮಾತನಾಡಿದರು.
ಹೋರಾಟ ಸಮಿತಿಯ ಎಸ್. ರಾಘವೇಂದ್ರ ಮಾತನಾಡಿ, ದಿನೇ ದಿನೇ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಸಮಿತಿಯನ್ನು ವಜಾಗೊಳಿಸಬೇಕು ಎಂದು ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದೆ. ನಾಡಗೀತೆಗೆ ಅವಮಾನಗೊಳಿಸಿದ, ನಾಡಧ್ವಜವನ್ನು ಲಂಗೋಟಿಗೆ ಹೋಲಿಸಿರುವುದನ್ನು ನಾಡಿನ ಜನ ವಿರೊಧಿಸುತ್ತಿದ್ದಾರೆ, ನಾಡಿನ ಹಲವು ಸಾಹಿತಿಗಳು ಸರ್ಕಾರದ ನಡೆಯನ್ನು ಪ್ರಶ್ನಿಸಿ ಧ್ವನಿ ಎತ್ತಿದ್ದಾರೆ ಆದರೂ ಸರ್ಕಾರ ಮೌನವಹಿಸಿದೆ.
ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ ರೋಹಿತ್‍ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಬೇಕು ಮತ್ತು ಈ ಹಿಂದಿನ ಪಠ್ಯಪುಸ್ತಕ ರಚನಾ ಸಮಿತಿ ಸರ್ವಾಧ್ಯಕ್ಷರಾಗಿದ್ದ ಪ್ರೊ. ಬರಗೂರು ರಾಮಚಂದ್ರಪ್ಪನವರು 172 ಜನ ತಜ್ಞರು, 27 ಸಮಿತಿಗಳು, 27 ಸಮಿತಿಗಳಿಗೂ ಒಬ್ಬೊಬ್ಬರು ಅಧ್ಯಕ್ಷರು, ಜೊತೆಗೆ ಅಧ್ಯಾಪಕರ ಸಂಘಗಳು, ಡಯಟ್ ಪ್ರಾಂಶುಪಾಲರು, ವಿಷಯ ಪರೀಕ್ಷಕರು ಮತ್ತು ಎಲ್ಲಾ ಪಠ್ಯವಿಷಯ ಪರಿಣಿತರ ಜೊತೆ 30ಕ್ಕೂ ಹೆಚ್ಚು ಸಮಾಲೋಚನಾ ಸಭೆಗಳನ್ನು ನಡೆಸಿ ಪ್ರಜಾಸತ್ತಾತ್ಮಕವಾಗಿ ಪರಿಷ್ಕರಣೆ ಮಾಡಲಾದ ಪಠ್ಯಪುಸ್ತಕಗಳನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಈ ಪತ್ರಚಳವಳಿ ನಡೆಸಲಾಗುತ್ತಿದೆ ಎಂದರು. ಈ ಪತ್ರಚಳವಳಿ ಹೋರಾಟದಲ್ಲಿ ಸಮಿತಿಯ ಸಂಚಾಲಕ ನಟರಾಜಪ್ಪ, ವಕೀಲ ಓಬಯ್ಯ, ಹೆಚ್.ವಿ ವೆಂಕಟಾಚಲ, ಶ್ರೀಧರ್, ರಮೆಶ್.ವಿ ಸುಬ್ರಮಣ್ಯ, ಮಹಿಳಾ ಹೋರಾಟಗಾರರಾದ ಕಲ್ಯಾಣಿ, ಮಂಜುಳ,ರತ್ನಮ್ಮ, ಶೈಲಜ, ಶಂಕರಪ್ಪ ಮತ್ತು ಲಕ್ಕಪ್ಪ, ಮುಂತಾದವರಿದ್ದರು.