2021-2022 ರ ಪಠ್ಯ ಪುಸ್ತಕ ಪುನರ್ ಪರಿಷ್ಕರಣಾ ಸಮಿತಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯ ಪುಸ್ತಕದಲ್ಲಿ ಹಲವಾರು ಲೋಪಗಳಿದ್ದು, ಈ ನಾಡಿನ ಸಾಕ್ಷಿ ಪ್ರಜ್ಞೆಯ ರಾಯಭಾರಿಗಳಾದ ವಿಶ್ವಗುರು ಬಸವಣ್ಣ, ರಾಷ್ಟ್ರಕವಿ ಕುವೆಂಪು, ಭಗತ್‍ಸಿಂಗ್, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ಅಯ್ಯಂಗಾರ್, ಮಹಿಳಾ ಸಮಾಜ ಸುಧಾರಕರಾದ ಸಾವಿತ್ರಿಬಾಯಿಪುಲೆ, ತಾರಬಾಯಿ ಸಿಂಧೆ, ಪಂಡಿತ್ ರಮಾಬಾಯಿ ಸೇರಿದಂತೆ ಹಲವರ ಪಠ್ಯಗಳನ್ನು ಕೈ ಬಿಟ್ಟಿರುವುದು, ತಿರಿಚಿರುವುದು ಮೇಲ್ನೋಟಕ್ಕೆ ಇದೊಂದು ನಾಡ ವಿರೋಧ, ಮಹಿಳಾ ವಿರೋಧಿ, ದಾರ್ಶನಿಕರ ವಿರೋಧಿ ನಿರ್ಧಾರವಾಗಿರುವುದರಿಂದ ಪಠ್ಯ ಪುಸ್ತಕ ಪುನರ್ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ಕೂಡಲೇ ವಜಾಗೊಳಿಸಿ, ಮಕ್ಕಳ ಭವಿಷ್ಯವನ್ನು ಕಾಪಾಡಲು ಮತ್ತು ಪಠ್ಯ ಪುಸ್ತಕವನ್ನು ಸಮರ್ಪಕ ರೀತಿಯಲ್ಲಿ ಪರಿಷ್ಕರಿಸಲು ವಿಫಲವಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರ ರಾಜೀನಾಮೆಯನ್ನು ಕೂಡಲೇ ಪಡೆಯ ಬೇಕೆಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿರವರಿಗೆ ಭಾರತೀಯ ಶರಣ ಸೇನಾ-ಕರ್ನಾಟಕದ ರಾಜ್ಯ ಸಂಚಾಲಕರಾದ ರಾಯಸಂದ್ರ ರವಿಕುಮಾರ ಆಗ್ರಹಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಪಠ್ಯ ಪುಸ್ತಕ ಹೇಗಿರಬೇಕು ಎಂಬ ಗಂಧ-ಗಾಳಿಯೆ ಗೊತ್ತಿಲ್ಲದಂತಹ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಆರ್‍ಎಸ್‍ಎಸ್ ಅಜೆಂಡ ಜಾರಿಗೆ ತರಲು ಎಂದು ಆರೋಪಸಿದ ಅವರು, ಸಾಮಾಜಿಕ ನ್ಯಾಯ ತಂದ ಬಸವಣ್ಣ ಮತ್ತು ರಾಷ್ಟ್ರ ಕವಿ ಕುವೆಂಪುರವರ ಬಗ್ಗೆ ಅವಹೇಳನಕಾರಿಯಾಗಿ ಬರೆದುಕೊಂಡಿರುವಂತಹ ರೋಹಿತ್ ಚಕ್ರತೀರ್ಥರನ್ನು ಕೂಡಲೇ ವಜಾಗೊಳಿಸಿ, ಶಾಲಾ ಮಕ್ಕಳಿಗೆ ಪುಸ್ತಕ ಒದಗಿಸದೆ ಪರಿಷ್ಕರಣಾ ನೆಪದಲ್ಲಿ ವಿವಾದ ಹುಟ್ಟಾಕಿರುವ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಕೂಡಲೇ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಪ್ರಜಾಸತ್ತಾತ್ಮಕದಡಿಯಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರನ್ನುಸಕಾರಣವಿಲ್ಲದೆ ಬಂಧಿಸಿ ಕೇಸು ದಾಖಲಿಸಿರುವುದು ಖಂಡನೀಯ ಎಂದ ಅವರು, ದೆಹಲಿ ಮುಖ್ಯಮಂತ್ರಿ ಮನೆ ಮೇಲೆ ದಾಳಿ ಮಾಡಿದ ಸಂಸದ ತೇಜಸ್ವಿ ಸೂರ್ಯನಿಗೆ ಯಾಕೆ ಏನು ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಹೊರಟಿರುವ ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸದಿದ್ದರೆ ಹಾಗೂ ಶಿಕ್ಷಣ ಸಚಿವರ ರಾಜೀನಾಮೆ ಪಡೆಯದಿದ್ದರೆ ತುಮಕೂರಿನ ರಾಷ್ಟ್ರೀಯ ಸ್ವಯಂ ಸೇವ ಸಂಘದ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಶರಣ ಸೇನಾ ಕರ್ನಾಟಕದ ರಾಜ್ಯ ಸಂಚಾಲಕರಾದ ರಾಯಸಂಸದ್ರ ರವಿಕುಮಾರ ತಿಳಿಸಿದರು.
ಇಷ್ಟಲಿಂಗವನ್ನು ರೂಪಿಸಿದವರು ಬಸವಣ್ಣನವರು. ಇಷ್ಟಲಿಂಗದೀಕ್ಷೆ ಬಸವಣ್ಣನವರ ಕಾಲದಿಂದ ಜಾರಿಗೆ ಬಂದಿತು.
‘ವೀರಶೈವ’ ಎನ್ನುವುದು ೧೪ನೆಯ ಶತಮಾನದಿಂದ ಈಚೆಗೆ ಬಳಕೆಗೆ ಬಂದ ಪದ.
ಈ ಸತ್ಯವನ್ನರಿಯದ ಪಠ್ಯ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಚಾರವೆಸಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮನದಲ್ಲಿ ತಪ್ಪು ಅಭಿಪ್ರಾಯಗಳ ಬೀಜಬಿತ್ತಿದಂತಾಗುತ್ತದೆ. ತಪ್ಪುಗಳು ಉದ್ದೇಶಿತ, ಅನುದ್ದೇಶಿತ ಮತ್ತು ದುರುದ್ದೇಶಿತ ಎಂದು ಮೂರು ವಿಧ: ಒಳ್ಳೆಯದಕ್ಕಾಗಿ ಮಾಡಿದ್ದು ಉದ್ದೇಶಿತ; ಗೊತ್ತಿಲ್ಲದೆ ಮಾಡಿದ್ದು ಅನುದ್ದೇಶಿತ; ಕೆಟ್ಟದೃಷ್ಟಿಯಿಂದ ಮಾಡಿದ್ದು ದುರುದ್ದೇಶಿತ. ಈ ತಪ್ಪುಗಳು ಮೂರನೆಯ ವರ್ಗಕ್ಕೆ ಸೇರಿದುವಾಗಿವೆ ಎಂದು ಭಾರತೀಯ ಶರಣ ಸೇನಾ ಖಂಡಿಸುತ್ತದೆ ಎಂದರು. ಕಾರಣ ಕೂಡಲೇ ಈ ದೋಷಪೂರಿತ ಪಠ್ಯವನ್ನು ಸ್ಥಗಿತಗೊಳಿಸಿ, ತಜ್ಞರಿಂದ ಸೂಕ್ತ ತಿದ್ದುಪಡಿ ಮಾಡಿಸಿ ದೋಷಮುಕ್ತಗೊಳಿಸಿ ವಿದ್ಯಾರ್ಥಿಗಳ ಕೈಗೆ ಕೊಡುವಂತಾಗಬೇಕೆಂದು ಈ ಮೂಲಕ ಭಾರತೀಯ ಶರಣ ಸೇನಾ ಕರ್ನಾಟಕ (ಬಿಎಸ್‍ಎಸ್) ಆಗ್ರಹಿಸುತ್ತದೆ ಎಂದರು.
ಕೊನೆಯದಾಗಿ, 2, 3 ನೆ ತರಗತಿಯ ಕನ್ನಡದ ವಿದ್ಯಾರ್ಥಿಗಳು ಸರಳವಾಗಿ ಓದಿ ಆರ್ತೈಸಿಕೊಳ್ಳುವಂತಹ ಶುದ್ಧ ಕನ್ನಡಲ್ಲಿಯೇ ಇರುವ ಬಸವಣ್ಣನವರ ವಚನವನ್ನ ಅಪಬ್ರಾಂಶ ಮಾಡಿ ಈ ಕೆಳಗಿನಂತೆ ಪ್ರಕಟಿಸುವ ಉದ್ದೇಶವೇನು?..ಇಡೀ ಜಗತ್ತಿನಲ್ಲೆ ಮೊದಲವಾದ 12ನೆ ಶತಮಾನದ ಸಮಾಜೋ-ಧಾರ್ಮಿಕ-ಆರ್ಥಿಕ ಸರ್ವಾಂಗೀಣ ಅಭಿವೃದ್ಧಿಯ ಚಳವಳಿಯ ಹರಿಕಾರ ಬಸವಣ್ಣನ ಕುರಿತು, ಜಗತ್ತಿಗೆ ಅತಿದೊಡ್ಡ ಅನುಭಾವ ಸಾಹಿತ್ಯದ ಕೊಡುಗೆ ಕೊಟ್ಟು ಕನ್ನಡ ಭಾಷೆಗೆ ತುರಾಯಿ ಮುಡಿಸಿದ ಶರಣರ ಕುರಿತು ಕೇವಲ 2 ಪ್ರಶ್ನೆಗಳು ಆದರೆ ಮಾದ್ವ, ರಾಮಾನುಜ, ಶಂಕರರ ಕುರಿತು 10 ಪ್ರಶ್ನೆಗಳು, ಇದು ಏನನ್ನು ಸೂಚಿಸುತ್ತದೆ?.. ಲಿಂಗಾಯತ, ಒಕ್ಕಲಿಗ ಮತ್ತು ಇನ್ನಿತರ ಹಿಂದುಳಿದ ಸಮುದಾಯಗಳ ಬೆಂಬಲದಿಂದ ಅಧಿಕಾರ ಹಿಡಿದವರು ಆ ಸಮುದಾಯಗಳ ವೃಕ್ಷದ ಮೂಲ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವುದು ವಿಪರ್ಯಾಸ, ಪ್ರಜ್ಞಾವಂತ ಸಮಾಜ ಇದನ್ನ ಸಹಿಸದಿರಲಿ ಎಂದು ಭಾರತೀಯ ಶರಣ ಸೇನಾ ಕರ್ನಾಟಕ (ಬಿಎಸ್‍ಎಸ್) ಆಶಿಸುತ್ತದೆ. ಕರ್ನಾಟಕ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯಪುಸ್ತಕಗಳನ್ನ ಬೇಜವಾಬ್ದಾರಿ ವ್ಯಕ್ತಿಗೆ ಪರಿಷ್ಕರಿಸುವ ನೇತೃತ್ವ ನೀಡಿ ವಿವಾದಕ್ಕೀಡು ಮಾಡಿ, ಜಾಲತಾಣದಲ್ಲಿ ಲಭ್ಯವಾದ ಪಿಡಿಎಫ್ ಪಠ್ಯಪುಸ್ತಕಗಳಲ್ಲಿ ಬಸವಣ್ಣ ಕುವೆಂಪು, ಭಗತ್ ಸಿಂಗ್, ಪೆರಿಯಾರ್, ಅಂಬೇಡ್ಕರ್ ಮುಂತಾದ ಮಹನೀಯರ ಕೈಬಿಡುವುದರ ಮೂಲಕ ಅಥವಾ ತಿರುಚುವುದರ ಮೂಲಕ ಪಠ್ಯಪು ಮಣ್ಣುಪಾಲು ಮಾಡಲಾಗಿದೆ. ಇಷ್ಟೆಲ್ಲವಾಗಿದ್ದರೂ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಕಂಡು ಕಾಣದಂತಿರುವುದನ್ನು ಬಿಎಸ್‍ಎಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ತಾಲ್ಲೂಕು ಸಂಚಾಲಕರಾದ ಕುಚ್ಚಂಗಿ ರಮೇಶ್, ಕೊರಟಗೆರೆ ತಾಲ್ಲೂಕು ಸಂಚಾಲಕರಾದ ಶಿವಕುಮಾರ ಡಿ, ತುರುವೇಕೆರೆ ತಾಲ್ಲೂಕು ಸಂಚಾಲಕರಾದ ಕೋಳಘಟ್ಟ ಯೋಗೀಶ್ ಉಪಸ್ಥಿತರಿದ್ದರು.