ಪತ್ರಕರ್ತರು ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವ ನೇರ-ನಿಷ್ಠುರವಾದಿಗಳು-ಬಿಎಸ್‍ವೈ


ತುಮಕೂರು:ಸಮಾಜದಲ್ಲಿ “ಪತ್ರಕರ್ತರೆಂದರೆ ಕೇವಲ ಟೀಕೆ ಮಾಡುವವರಲ್ಲ. ತಪ್ಪಾದಾಗ ಎಚ್ಚರಿಸಿ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವ ನೇರ ಮತ್ತು ನಿಷ್ಠುರವಾದಿಗಳು” ಎಂದು ಪತ್ರಕರ್ತರನ್ನುದ್ದೇಶಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರಿಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾಧ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸುವ ರಭಸದಲ್ಲಿ ವಸ್ತುಸ್ಥಿತಿಯನ್ನು ಮರೆಮಾಚಬಾರದು ಎಂದು ಕಿವಿ ಮಾತು ಹೇಳಿದರು.

ಮೊದಲಿನಿಂದಲೂ ಪತ್ರಕರ್ತರೊಂದಿಗೆ ನಾನು ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಅಧಿಕಾರದಲ್ಲಿದ್ದಾಗ ಪತ್ರಕರ್ತರ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆಂಬ ಆತ್ಮತೃಪ್ತಿ, ಸಂತಸ ನನಗಿದೆ. ಸಂವಿಧಾನದ 4ನೇ ಅಂಗವಾದ ಪತ್ರಿಕಾ ರಂಗವು ಕೋವಿಡ್ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿರುವುದು ಶ್ಲಾಘನೀಯವಾದುದು. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಕೋವಿಡ್ ವಾರಿಯರ್‍ಗಳೆಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿದಂತೆ ಸುಮಾರು 25000ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕೆಯನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಹೊಣೆಗಾರಿಕೆಯಿಂದ ದುಡಿದು ಸೋಂಕಿನಿಂದ ಮೃತಪಟ್ಟ ರಾಜ್ಯದ ಅರ್ಹ ಪತ್ರಕರ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದ ಅವರು ಕೋರೋನಾ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿ ನೆರವಿಗೆ ಧಾವಿಸಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ತಿಳಿಸಿದರು.

ನಾನು ಮುಖ್ಯ ಮಂತ್ರಿಯಾಗಿದ್ದಾಗ ತುಮಕೂರು ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ 25ಲಕ್ಷ ರೂ.ಗಳನ್ನು ನೀಡಲಾಗಿತ್ತು. ಎಲ್ಲರ ಸಹಕಾರದಿಂದ ಪತ್ರಿಕಾಭವನ ಕಟ್ಟಡ ನಿರ್ಮಾಣ ಪೂರ್ಣವಾಗಿದ್ದರೂ ಹಲವಾರು ತಾಂತ್ರಿಕ ಕಾರಣಗಳಿಂದ ನಿರ್ವಹಣೆ ಮಾಡಲಾಗದೆ ಮುಚ್ಚಲಾಗಿತ್ತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನೀ. ಪುರುಷೋತ್ತಮ್ ಹಾಗೂ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಪರಿಶ್ರಮದಿಂದ ಪತ್ರಿಕಾಭವನ ಕಾರ್ಯನಿರ್ವಹಿಸುವಂತಾಗಿದೆ. ಅಲ್ಲದೆ ಪತ್ರಿಕಾಭವನದ ನವೀಕರಣಕ್ಕಾಗಿ ಪಾಲಿಕೆಯಿಂದ 18ಲಕ್ಷ ರೂ. ಮಂಜೂರಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ರಾಜ್ಯದ ಜನರ ನೆಮ್ಮದಿಯನ್ನು ಕಿತ್ತುಕೊಂಡಿದ್ದ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವ-ಜೀವನವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸಿದ ಪತ್ರಕರ್ತರ ಸೇವೆಯನ್ನು ನಾನೆಂದೂ ಮರೆಯುವುದಿಲ್ಲ. ನನ್ನ ಅಧಿಕಾರಾವಧಿಯ ಕೆಲಸಕಾರ್ಯಗಳನ್ನು ಮೆಚ್ಚಿ ಸಂಘದ ವತಿಯಿಂದ ನನ್ನನ್ನು ಅಭಿನಂದಿಸಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದು ಮನತುಂಬಿ ಹೇಳಿದರು.

ಸಂಘಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಹುಟ್ಟು ಹಾಕಿರುವ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾದುದು. ಜನತಂತ್ರ ವ್ಯವಸ್ಥೆಯಲ್ಲಿ 4ನೇ ಸ್ಥಂಭವಾದ ಪತ್ರಿಕಾರಂಗದ ಶಕ್ತಿ ಪತ್ರಕರ್ತನ ಹೊಣೆಗಾರಿಕೆ ಮೇಲೆ ನಿಂತಿದೆ. ಪತ್ರಕರ್ತರ ಲೇಖನಗಳಿಗೆ ಸರ್ಕಾರಗಳೇ ಉರುಳಿ ಹೋದ ನಿದರ್ಶನಗಳಿವೆ. ಪತ್ರಕರ್ತನು ಪ್ರಜೆಗಳ ದನಿಯಾಗಿ ಅವರ ತುಡಿತಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಬೇಕಾಗುತ್ತದೆ. ಪತ್ರಿಕಾ ವೃತ್ತಿಯಲ್ಲಿ ಹಣ ಮಾಡಲು ಬರುವವರು ಕ್ಷಣಿಕ ಆನಂದವನ್ನಷ್ಟೆ ಹೊಂದಬಹುದು. ಆದರೆ ಉತ್ತಮ ಧ್ಯೇಯೋದ್ದೇಶಗಳನ್ನಿಟ್ಟುಕೊಂಡ ವೃತ್ತಿಧರ್ಮ ಪಾಲಿಸುವ ಪತ್ರಕರ್ತ ಮಾತ್ರ ಯಶಸ್ವಿ ಕಾಣುತ್ತಾನೆ. ಪತ್ರಿಕಾ ವೃತ್ತಿಯನ್ನು ವ್ಯವಹಾರ/ವ್ಯಾಪಾರದ ದೃಷ್ಟಿಯಲ್ಲಿ ನೋಡದೆ ಅರ್ಪಣಾ ಮನೋಭಾವದಿಂದ ಅಪ್ಪಿಕೊಂಡಾಗ ಮಾತ್ರ ಸಮಾಜದ ಪಾವತ್ರ್ಯತೆ ಉಳಿಯುತ್ತದೆ ಎಂದರಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಳಿತದಲ್ಲಿ ಚತುರರಷ್ಟೆ ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಹೃದಯವಂತಿಕೆಯಿಂದ ನಾಡಿನ ಪ್ರಜೆಗಳಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ರೂಪಿಸಿ ಎಲ್ಲರ ಮನದಲ್ಲಿ ಮನೆ ಮಾಡಿದ್ದಾರೆ. ಹಾಗಾಗಿ ಬಿಎಸ್‍ವೈ ಅವರನ್ನು ನಾಡಿನ ಎಲ್ಲರೂ ಗೌರವಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸ್ವಂತ ಕಟ್ಟಡಕ್ಕೆ ನಿವೇಶನ ಒದಗಿಸಲು ತುಮಕೂರು ಜಿಲ್ಲೆಯ ಪತ್ರಕರ್ತರ ಸಂಘದ ಬೇಡಿಕೆಯಂತೆ ಶಾಸಕರು, ಸಂಸದರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸಾಮಾಜಿಕ ಜಾಲತಾಣಗಳ ಭರಾಟೆ ಹೆಚ್ಚುತ್ತಿರುವುದರಿಂದ ಪತ್ರಕರ್ತರು ತಂತ್ರಜ್ಞಾನದಲ್ಲಿ ಅಪ್‍ಡೇಟ್ ಆಗಬೇಕು. ಈ ನಿಟ್ಟಿನಲ್ಲಿ ಸಂಘದ ವತಿಯಿಂದ ಪತ್ರಕರ್ತರಿಗೆ ವೃತ್ತಿ ನೈಪುಣ್ಯತೆ ತರಬೇತಿ, ಸಂವಾದ, ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ ಪತ್ರಕರ್ತರ ಹಿತರಕ್ಷಣೆಗಾಗಿ ನೆರವು ನೀಡುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಭರವಸೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷ ಶಿವಾನಂದ ತಗಡೂರು ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರಿತು ಅಭಿನಂದನೆ ನುಡಿಗಳನ್ನಾಡುತ್ತಾ ಬಿ.ಎಸ್.ವೈ. ಅವರು ತಮ್ಮ ಅಧಿಕಾರಾವಧಿಯಲ್ಲಿ ಪತ್ರಕರ್ತ ಸ್ನೇಹಿಯಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಕೋವಿಡ್‍ನಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಇಡೀ ಜನತೆ ಸುರಕ್ಷಿತವಾಗಿ ಮನಯಲ್ಲಿರಿ ಎಂದು ಎಚ್ಚರಿಕೆ ಸಂದೇಶದ ವರದಿಗಳನ್ನು ಮಾಡುತ್ತಾ ತಮ್ಮ ಸುರಕ್ಷತೆಯನ್ನೇ ಪಣಕ್ಕಿಟ್ಟು ಮೃತಪಟ್ಟ ರಾಜ್ಯದ ಸುಮಾರು 55 ಪತ್ರಕರ್ತ ಕುಟುಂಬಗಳಿಗೆ ತಲಾ 5ಲಕ್ಷ ರೂ.ಗಳ ಪರಿಹಾರ ನೀಡಲು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಂದ ಸಾಧ್ಯವಾಯಿತು. ಅಲ್ಲದೆ ಕೋವಿಡ್‍ನಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಮಾಧ್ಯಮಗಳಿಗೆ ಒಂದೂವರೆ ವರ್ಷಗಳಿಂದ ಬಾಕಿ ಬರಬೇಕಿದ್ದ 56 ಕೋಟಿ ರೂ.ಗಳ ಜಾಹೀರಾತು ವೆಚ್ಚವನ್ನು ಬಿಡುಗಡೆ ಮಾಡಲು ತಕ್ಷಣವೇ ಆದೇಶ ಮಾಡುವ ಮೂಲಕ ಪತ್ರಕರ್ತರ ನೆರವಿಗೆ ನಿಂತರಲ್ಲದೆ ಪತ್ರಕರ್ತರಿಗಾಗಿ ಆರೋಗ್ಯ ಕಾರ್ಡು ವಿತರಿಸುವ ಮಹತ್ತರ ನಿರ್ಣಯ ಕೈಗೊಂಡರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ತಲಾ 25ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ ಕೀರ್ತಿ ಯಡಿಯೂರಪ್ಪ ಅವರದು. ಯಡಿಯೂರಪ್ಪ ಅವರ ಎಲ್ಲ ಕೆಲಸಕಾರ್ಯಗಳು ಮನಸಿನಲ್ಲುಳಿವಂತಹವು ಎಂದು ಹೇಳಿದರು.

ಸಂಸದ ಜಿ.ಎಸ್. ಬಸವರಾಜು,ಕೊರಟಗೆರೆ ತಾಲೂಕು ಶ್ರೀ ಕ್ಷೇತ್ರ ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನೀ. ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಐ.ಎಫ್.ಡಬ್ಲ್ಯೂ.ಜೆ. ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಸರ್ಕಾರದಿಂದ 5ಲಕ್ಷ ರೂ. ಪರಿಹಾರ ಪಡೆದಿರುವ ಕೋವಿಡ್ ಸೋಂಕಿನಿಂದ ಮೃತಪಟ್ಟ ಗುಬ್ಬಿ ಜಯಣ್ಣ ಅವರು ಪತ್ನಿ ಜ್ಯೋತಿ ಮಾತನಾಡಿ ಪತಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ನನ್ನ ಹಾಗೂ ಕುಟುಂಬಕ್ಕೆ ನೆರವಾದ ಬಿ.ಎಸ್.ವೈ. ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಗಂಗಹನುಮಯ್ಯ, ಮೇಯರ್ ಬಿ.ಜಿ. ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ|| ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಲಬುರ್ಗಿಯಲ್ಲಿ ಜರುಗಿದ ಪತ್ರಕರ್ತರ ಸಮ್ಮೇಳನದ ಸ್ಮರಣಾರ್ಥ ಹೊರತಂದಿರುವ “ಪತ್ರಕರ್ತ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್ ಸ್ವಾಗತಿಸಿದರು. ಪತ್ರಕರ್ತ ಪ್ರಸನ್ನ ದೊಡ್ಡಗುಣಿ ನಿರೂಪಿಸಿದರು. ಸವಿತಾ ಉಮಾಶಂಕರ್ ಪ್ರಾರ್ಥಿಸಿದರು. ಇದಕ್ಕೂ ಮುನ್ನ ದಿಬ್ಬೂರು ಮಂಜುನಾಥ ಮತ್ತು ಸಂಗಡಿಗರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *