ಪೋಷಕರು ಮಕ್ಕಳೊಂದಿಗೆ ಬಂದು ನಾಟಕ ನೋಡಿ, ಅವರಿಗೆ ಕಲೆ-ಸಾಹಿತ್ಯ ಅಭಿರುಚಿ ಬೆಳೆಸುವಂತೆ ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ. ವಿದ್ಯಾಕುಮಾರಿ ಸಲಹೆ ನೀಡಿದರು.
ಅವರು ತುಮಕೂರಿನ ಕನ್ನಡ ಭವನದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ಎರಡು ದಿವಸಗಳ ಬೇಸಿಗೆ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳಿಗೆ ಚಿಕ್ಕಂದಿನಲ್ಲೇ ನಾಟಕ ನೋಡುವ ಅಭಿರುಚಿ ಬೆಳೆಸಿದರೆ, ಮುಂದೆ ಅವರು ಕಲೆ, ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಳ್ಳುತ್ತಾರೆ. ಮಂದೆ ಮಕ್ಕಳ ಭವಿಷ್ಯದಲ್ಲಿ ಒಳ್ಳೆಯ ಪರಿಣಾಮ ಬೀರುತ್ತದೆ. ನಾಟಕ ನೋಡುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುತ್ತದೆ ಎಂದ ಅವರು, ಬೆಂಗಳೂರಿನಲ್ಲಿ ರಂಗಶಂಕರದಂತಹ ಕಡೆ ಮಕ್ಕಳಿಗೆ ಪ್ರವೇಶವಿಲ್ಲದಿದ್ದರೂ, ಅನುಮತಿ ಪಡೆದು ಮಕ್ಕಳೊಂದಿಗೆ ನಾಟಕ ನೋಡಿದ ನೆನಪು ಅವಿಸ್ಮರಣೀಯ ಎಂದರು.
ನಾಟಕ ಒಂದು ವಿಶಿಷ್ಟ ಕಲೆ. ಬರಹ ರೂಪದ ಪಠ್ಯಕ್ಕೆ ಅಭಿನಯದ ಚೌಕಟ್ಟನ್ನು ಅಳವಡಿಸುವದರಿಂದ ನಾಟಕ ಪ್ರದರ್ಶನಗೊಳ್ಳುತ್ತದೆ. ನಾಟಕ ಚಳವಳಿ, ಚಲನಶೀಲತೆ, ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಸಿನಿಮಾ ಇದ್ದರೂ ನಾಟಕ ಪ್ರೇಕ್ಷಕರಿಗೆ ನೇರವಾಗಿ ತಲುಪುವ ವಿಶಿಷ್ಟ ಕಲೆಯಾಗಿದ್ದು, ಇದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವುದರ ಮೂಲಕ ರಂಗಭೂಮಿ ಕಲೆಗೆ ಪ್ರೋತ್ಸಾಹಿಸಬೇಕಿದೆ ಎಂದರು.
ಝೆನ್ ಟೀಮ್ ನಾಟಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದು, ಟೀಂ ಮುಖ್ಯಸ್ಥ ಉಗಮ ಶ್ರೀನಿವಾಸ್ ನಾಟಕ ಕಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದು ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.
ಕವಯತ್ರಿ ವೀಣಾ ಶ್ರೀನಿವಾಸ್ ಮಾತನಾಡಿ, ನಾಟಕಕ್ಕೆ ಸಾಮಾಜಿಕ ಸಂದೇಶ ನೀಡುವ ವಿಶಿಷ್ಟ ಶಕ್ತಿಯಿದೆ. ಸುಮಾರು 18 ವರ್ಷಗಳಿಂದ ತುಮಕೂರಿನಲ್ಲಿ ವಿವಿಧ ಪ್ರಾಕಾರದ ನಾಟಕಗಳನ್ನು ಆಯೋಜಿಸುತ್ತಿರುವ ಝೆನ್ ಟೀಮ್ ಅಭಿನಂದನಾರ್ಹ ಎಂದರು.
ಸಾಮಾಜಿಕ ಹೋರಾಟಗಾರ ಪಂಡಿತ್ ಜವಾಹರ್ ಮಾತನಾಡಿ, ನಾಟಕ ಸಾಹಿತ್ಯ ಹೊಸ ಅಲೆಯ ಸೃಷ್ಟಿಸಿ, ಗುಪ್ತಗಾಮಿನಿಯಾಗಿ ಹರಿಯುತ್ತದೆ. ತುಮಕೂರಿನಲ್ಲಿ ಪೌರಾಣಿಕ ನಾಟಕಗಳಿಗೆ ಒಗ್ಗಿ ಹೋಗಿದ್ದ ಜನತೆಗೆ ನೀನಾಸಂ, ಸಾಣೆಹಳ್ಳಿ, ರಂಗಾಯಣ ಮತ್ತಿತರೆ ರಾಜ್ಯದ ವಿವಿಧ ಭಾಗಗಳ ನಾಟಕ ತಂಡಗಳು ತುಮಕೂರಿನಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಲು ಝೆನ್ ಟೀಂ ನ ಉಗಮ ಶ್ರೀನಿವಾಸ್ ಕಾರಣಕರ್ತರಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ವಿ ದ ಪೀಪಲ್ ಆಫ್ ಇಂಡಿಯಾ ನಾಟಕ ಪ್ರದರ್ಶನವನ್ನು ಬೇಸಗೆಯ ದಗೆಯಲ್ಲೂ ಜನತೆ ನಿಂತು ನೋಡಿದ್ದು ಗಮನಾರ್ಹ. ಸಾಮಾಜಿಕ ಸಂದೇಶಗಳಿರುವ ನಾಟಕಗಳನ್ನು ಝೆನ್ ಟೀಮ್ ಹೆಚ್ಚು-ಹೆಚ್ಚು ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಮಾಜಿ ಸದಸ್ಯ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ಉಗಮ ಶ್ರೀನಿವಾಸ್ ತಮ್ಮ ಝೆನ್ ಟೀಮ್ ಮೂಲಕ ವಿಭಿನ್ನ ನಾಟಕಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಪೌರಾಣಿಕ, ಸಾಮಾಜಿಕ ನಾಟಕಗಳು, ಸಾಮಾಜಿಕವಾಗಿ ಹಿಂದೆಲ್ಲಾ ಪರಿಣಾಮ ಬೀರಿದೆ ಎಂದರು. ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶೆ ರತ್ನಕಲಾ ಇತರರಿದ್ದರು. ರುತ್ವಿ ಗೌಡ ಕಾರ್ಯಕ್ರಮ ನಿರೂಪಿಸಿದರು.