ತುಮಕೂರು : ತುಮಕೂರು ನಗರದ ಹಾಲಿ ಮತ್ತು ಮಾಜಿ ರೌಡಿಗಳ ಮನೆಗೆ ಇಂದು ಮುಂಜಾನೆಯೇ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ದಾಳಿ ನಡೆಸಿದ ಪೊಲೀಸರು ರೌಡಿಗಳೆಲ್ಲರನ್ನೂ ಒಂದಡೆ ಸೇರಿಸಿ ಡ್ರಿಲ್ ಮಾಡಿಸಿದರು.
ಯಾವುದೇ ಕಾರಣಕ್ಕೂ ಸಮಾಜದ್ರೋಹ, ದರೋಡೆ, ಕೊಲೆ, ಸುಲಿಗೆ, ಮುಂತಾದವನ್ನು ಮಾಡದಂತೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್‍ವಾಡ್‍ರವರ ನೇತೃತ್ವದಲ್ಲಿ ರೌಡಿಗಳ ಮನೆಯ ಬಾಗಿಲನ್ನು ಮುಂಜಾನೆಯೇ ಬಡಿದ ಪೊಲೀಸರು, ರೌಡಿಗಳನ್ನು ವಶಕ್ಕೆ ಪಡೆದು ವಿವಧ ದಂಧೆಗಳಲ್ಲಿ ಭಾಗವಹಿಸುತ್ತಿರುವ ಬಗ್ಗೆ ಮತ್ತು ಬಾರ್ & ರೆಸ್ಟೋರೆಂಟ್, ಮೀಟರ್ ಬಡ್ಡಿ, ಭೂ ಮಾಫಿಯಾ, ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆನ್ನಲಾದ ರೌಡಿಗಳನ್ನು ವಶಕ್ಕೆ ಪಡೆದು ಡ್ರಿಲ್ ಮಾಡಿಸಿದ್ದಲ್ಲದೆ, ಒಬ್ಬೊಬ್ಬರ ಇತಿಹಾಸವನ್ನು ಖುದ್ದಾಗಿ ಜಿಲ್ಲಾ ಎಸ್.ಪಿ.ಯವರೇ ಬಿಚ್ಚಿಟ್ಟಾಗ ರೌಡಿಗಳ ಎದೆ ಝಲ್ಲೆಂದಿತು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಲಿ ಮತ್ತು ಮಾಜಿ ರೌಡಿಗಳಿಂದ 54 ಮಾರಕಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ, ತುಮಕೂರಿನಲ್ಲಿ ಇತ್ತೀಚೆಗೆ ಬಡ್ಡಿ ದಂಧೆ ಹೆಚ್ಚಿದ್ದು ಇದಕ್ಕೆ ಕಡಿವಾಣ ಹಾಕಿದರೆ ಬಹಳಷ್ಟು ಕೊಲೆ, ಸುಲಿಗೆ, ಹಲ್ಲೆ ಹತೋಟಿಗೆ ಬರಲಿದೆ ಎಂದರು.

ಈ ಸಂದರ್ಭದಲ್ಲಿ ರೌಡಿಶೀಟರ್‍ಗಳಿಗೆ ಬುದ್ದವಾದ ಹೇಳಿದ ಪೊಲೀಸ್ ವರಿಷ್ಠಾಧಿಕಾರಿಗಳು ಸಮಾಜದಲ್ಲಿ ನೀವು ಒಳ್ಳೆಯವರಾಗಿ ಬದುಕಬೇಕು ಮನ ಪರಿವರ್ತನೆ ಮಾಡಿಕೊಳಲು ತಿಳಿಸಿದರು.
ಜೈಲಿನಲ್ಲಿರುವ ರೌಡಿಗಳೊಂದಿಗೆ ಸಂಪರ್ಕವಿರುವುದು ನಮಗೆ ಮಾಹಿತಿ ಇದ್ದು, ಇದನ್ನು ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ರೌಡಿಗಳ ಮನೆ ಬಡಿದ ತಂಡದಲ್ಲಿ ಅಡಿಷನಲ್ ಎಸ್.ಪಿ. ಉದೇಶ್, ಡಿ.ವೈ.ಎಸ್.ಪಿ. ಶ್ರೀನಿವಾಸ್, ವೃತ್ತ ನಿರೀಕ್ಷಕರಾದ ನವೀನ್, ಗ್ರಾಮಾಂತರ ವೃತ್ತ ನಿರೀಕ್ಷಕರಾದ ರಾಮಕೃಷ್ಣಯ್ಯ, ತಿಲಕ್ ಪಾರ್ಕ್ ವೃತ್ತ ನಿರೀಕ್ಷಕರಾದ ಮುನಿರಾಜು, ಜಯನಗರ ಪೊಲೀಸ್ ಠಾಣೆ ಪಿ.ಎಸ್.ಐ. ಮಂಜುನಾಥ್, ಕ್ಯಾತ್ಸಂದ್ರ ಪಿ.ಎಸ್.ಐ. ಭಾಗವಹಿಸಿ ಎಸ್.ಪಿ.ಯವರಿಗೆ ಸಾಥ್ ನೀಡಿದರು.
ಪೋಟೋಗಳು : ಮುರಳಿ, ಎಸ್.ಪಿ. ಕಛೇರಿ.