ತುಮಕೂರು: ರಾಜ್ಯದ್ಯಾಂತ ನಡೆದ ಜನತಾ ಜಲಧಾರೆ ಸಮಾರೋಪ ಸಮಾರಂಭ ಮೇ.13ರಂದು ನೆಲಮಂಗಲ ಬಳಿ ನಡೆಯಲಿದ್ದು, ಜಿಲ್ಲೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಜನತಾ ಜಲಧಾರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೇ.13ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಜಿಲ್ಲೆಯಲ್ಲಿ ಆಯಾ ಕ್ಷೇತ್ರದ ಮುಖಂಡರು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂದು ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು ಎಂದು ಈಗಾಗಲೇ ವರಿಷ್ಠರಾದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ, ಜಿಲ್ಲೆಯಲ್ಲಿ ಗೊಂದಲವಿರುವ 2-3 ಕ್ಷೇತ್ರಗಳಲ್ಲಿ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಟಿಕೆಟ್ ನೀಡಲಾಗುವುದು ಎಂದು ಹೇಳಿದರು.
ತುಮಕೂರು ನಗರದಲ್ಲಿ ಟಿಕೆಟ್‍ಗೆ ಪೈಪೋಟಿ ಇರುವುದು ವರಿಷ್ಠರ ಗಮನದಲ್ಲಿದ್ದು, ಯಾವುದೇ ಗೊಂದಲಗಳಾದಂತೆ ಟಿಕೆಟ್ ಹಂಚಿಕೆ ಮಾಡುವ ಮೂಲಕ ಈ ಬಾರಿ ತುಮಕೂರು ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ ವಶಪಡಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಕ್ಕೂ ಟಿಕೆಟ್ ನೀಡಲಾಗುವುದು ಎಂದು ಹೇಳಿದರು.
ಜೆಡಿಎಸ್ ಮುಖಂಡ ಗೋವಿಂದರಾಜು ಮಾತನಾಡಿ, ಮೇ.13ರಂದು ನಡೆಯಲಿರುವ ಜನತಾ ಜಲಧಾರೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ 5-6ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಿದರು ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಬೆಳ್ಳಿ ಲೋಕೇಶ್, ಗಂಗಣ್ಣ, ದೇವರಾಜು, ಕೃಷ್ಣಮೂರ್ತಿ ಸೇರಿದಂತೆ ಇತರರಿದ್ದರು.