ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಲೇ ಈಶ್ವರಪ್ಪನವರ ವಿರುದ್ಧ ಷಡ್ಯಂತ್ರ :ಸಿ.ಟಿ. ರವಿ

ವ್ಯವಸ್ಥಿತವಾಗಿ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಲೇ ಈಶ್ವರಪ್ಪನವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ದೂರಿದರು.
ತುಮಕೂರು ನಗರದ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿಗೆ ಸಂಬಂಧಿಸಿದ ಅಕ್ರಮದ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವುದು ಬಿಜೆಪಿ ಸರ್ಕಾರ. ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಪರಾಧ ಹೇಗಾಗುತ್ತದೆ. ಅಕ್ರಮವನ್ನು ಮುಚ್ಚಿ ಹಾಕಿದರೆ ಅಕ್ರಮ ಆಗುತ್ತದೆ. ಈ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅವರನ್ನು ಪತ್ತೆಹಚ್ಚಿ ಬಂಧಿಸಿದರೆ ಅಪರಾಧವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಅಕ್ರಮವನ್ನು ಮುಚ್ಚಿ ಹಾಕುವ ಕೆಲಸವನ್ನು ಬಹಳ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದೆ. ಆರ್ಕಾವತಿ ಹಗರಣ, ಹ್ಯೂಬ್ಲೆಟ್ ವಾಚ್ ಹಗರಣವನ್ನು ಮುಚ್ಚಿ ಹಾಕಿದ್ದು ಯಾರು ಎಂದು ಸಿ.ಟಿ. ರವಿ ಪ್ರಶ್ನಿಸಿ, ಯಾವ ಗುತ್ತಿಗೆದಾರರು 40 ಪರ್ಸಂಟೇಜ್ ಕಮೀಷನ್ ಕೊಟ್ಟು ಕೆಲಸ ಮಾಡಲು ಸಾಧ್ಯವಿದೆ. ಇದೆಲ್ಲ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆಸಿರುವ ಷಡ್ಯಂತ್ರ ಎಂದರು.
ಸಾರ್ವಜನಿಕ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಒಪ್ಪಿಕೊಂಡಿರುವ ಪಕ್ಷ ಅಪರಾಧಿ ಅಲ್ಲ ಎನ್ನುವುದನ್ನು ತೋರಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಈಶ್ವರಪ್ಪನವರು ಸ್ವಯಂ ಪ್ರೇರಿತರಾಗಿಯೇ ರಾಜೀನಾಮೆ ನೀಡಿದ್ದಾರೆ. ಯಾರೂ ಅವರ ತಲೆದಂಡೆ ಮಾಡಿಲ್ಲ. ಇದೆಲ್ಲಾ ವಿರೋಧಿಗಳ ಷಡ್ಯಂತ್ರ ಎಂದರು.
ಕನ್ನಡವೇ ಸರ್ವ ಶ್ರೇಷ್ಠ
ನಮ್ಮ ರಾಜ್ಯದಲ್ಲಿ ಮಾತೃಭಾಷೆ ಕನ್ನಡವೇ ಸರ್ವಶ್ರೇಷ್ಠ. ನಾವು ಯಾರ ಗುಲಾಮರೂ ಆಗಬೇಕಿಲ್ಲ. ಈ ಕುರಿತು ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯನವರೇ ಇಂಗ್ಲೀಷ್ ಮತ್ತು ಸೋನಿಯಾಗಾಂಧಿಯವರ ಗುಲಾಮರಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಆಯಾ ಪ್ರಾದೇಶಿಕ ಭಾಷೆಗಳಿಗೆ ಶಿಕ್ಷಣ ಕೊಡಬೇಕು ಎಂಬ ಅಂಶವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಹಾಗೆಯೇ ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲೇ ಕೊಡಬೇಕು ಎಂಬುದನ್ನು ಪ್ರಸ್ತಾಪಿಸಲಾಗಿದೆ. ಹೀಗಿರುವಾಗ ಕನ್ನಡ ಭಾಷೆಯನ್ನು ಕಡೆಗಣಿಸುವ ಅಂಶ ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ವಿನಾ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗೊಂದಲ ಮೂಡಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರು ರಾಷ್ಟ್ರಭಾಷೆಗೆ ಪ್ರಾಧ್ಯಾನ್ಯತೆ ಕೊಡುತ್ತಾರೋ ಅಥವಾ ನಮ್ಮ ಮೇಲೆ ಆಕ್ರಮಣಕಾರಿ ಮಾಡಿದ ಗುಲಾಮಗಿರಿ ಭಾಷೆಗೆ ಪ್ರಾಧಾನ್ಯತೆ ಕೊಡುತ್ತಾರೋ ಎಂದ ಅವರು, ಅಮಿತ್ ಶಾ ಅವರು ಮಾತೃಭಾಷೆಗೆ ಮನ್ನಣೆ ನೀಡಿ, ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಬದಲಿಗೆ ಹಿಂದಿ ಬಳಸಿ ಎಂದು ಹೇಳಿದ್ದಾರೆ. ಕನ್ನಡ ಬಿಟ್ಟು ಹಿಂದಿಯಲ್ಲಿ ಮಾತನಾಡಿ ಎಂದಿದ್ದರೆ ನಾವು ಸಹ ಧ್ವನಿ ಎತ್ತುತ್ತಿದ್ದೆವು ಎಂದು ಅವರು ತಿಳಿಸಿದರು.
ಇಂಗ್ಲೀಷ್ ಗುಲಾಮಗಿರಿ ಭಾಷೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಈ ಮಾನಸಿಕತೆಯಲ್ಲಿ ಯೋಚನೆ ಮಾಡುವುದಾದರೆ ಸಿದ್ದರಾಮಯ್ಯನವರು ತಾನು ಇಂಗ್ಲೀಷ್ ಗುಲಾಮ ಎಂದು ಒಪ್ಪಿಕೊಳ್ಳಬೇಕು ಎಂದರು.
ರಾಜ್ಯದ ಉದ್ದಗಲಕ್ಕೂ ನಡೆದಿರುವ ಬೇರೆ ಬೇರೆ ಗಲಭೆಗಳಲ್ಲಿ ಕಾಂಗ್ರೆಸ್ ಪಕ್ಷ ಪಾತ್ರ ಇರುವುದು ಸ್ಪಷ್ಟವಾಗಿದೆ. ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಜಮೀರ್ ಮಾತ್ರ ಅಲ್ಲ, ಆ ರೀತಿಯ ಬಹಳ ಜನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *