ಸಾವಿರದ ನಡಿಗೆ
……………………..
ಹೀಗೆ ಎಂದು ಹೇಳಲಾಗದ ಆ ಚಿತ್ರ
ಇಡೀ ರಾತ್ರಿ ನಿದ್ದೆ ತುಳಿದು ನಡೆದದ್ದು.
ವಿಚಿತ್ರವೆನ್ನಲಾಗದ ಸಚಿತ್ರಾನುಭವ.
ಕೈತುಂಬಾ ಹಿಡಿದ ಪರಕೆ ಕಡ್ಡಿಗಳೆಂದರೆ
ಪೊರಕೆ ಕಡ್ಡಿಗಳಲ್ಲದ ದಳದಳ ವಿದಳ
ಅಸಮಗಳ ವಿಷಮಸಂಪುಟ.
ಇದೆ ಈಗ ಮಲಗಿದೆ ಅನ್ನಿಸಿದ ಭಾವ
ಎಚ್ಚರವಾಗಿ ನೋಡಿದರೆ ಗಡಿಯಾರ
ಮೂರು ಮುವತ್ತು ಮೂರು.
ಥಟ್ಟನೆ ನೆನಪಿಗೆ ಬಂತು ಮಲಗಿದ್ದು
ಹನ್ನೊಂದು ಮತ್ತೊಂದು.
ನಡುವಿನಲಿ ಈ ಚಿತ್ರ ನಾಲಕ್ಕು ಮುವತ್ತೆರಡು
ತಾಸುಗಳ ಹೆಜ್ಜೆ ಪಯಣದ ಗೆಜ್ಜೆ ಸಾಲು.
ಎದ್ದ ಮೇಲೆ ಬುದ್ಧಿಯೆದುರು ಚಿತ್ರ
ಭಾವದೆದುರು ನಂಬಿಕೆಯ ಪಡಸಾಲೆ.
ಅಪ್ಪ ಅವ್ವರ ಮಾತು ಮಾತಿನ ಪರಿಹಾರ ಸೂತ್ರ.
ಇದು ನೆನಪಿನ ದಾರಿ ; ವಿಚಿತ್ರದಲ್ಲಿ ಸಚಿತ್ರ
ಬೆಳಗಿನ ಗಾಂಧಿ ಜೊತೆಗಿನ ನಡಿಗೆ
ಕವಿಮನೆಯಿಂದ ಗಾಂಧಿಗುಡಿಗೆ.
ಸಮುದ್ರದ ಉಪ್ಪು ಬೆಟ್ಟದ ನೆಲ್ಲಿಯ ನೇಹದಲ್ಲಿ
ಭರವಸೆ ಕಳೆದ ನಿರೀಕ್ಷೆಗಳ ಸಾವಿರದ ನಡಿಗೆ
ಬನ್ನಿ ಗೆಳೆಯರೇ ಬನ್ನಿ ಹಳೆಯರೇ
ಇದುಮುಗಿಯದ ಪಯಣ
ನಮ್ಮ ಸ್ವಾತಂತ್ರ್ಯದ ಹರಣ.
ಜಾವ.೫-೧೨
೮-೭-೨೦೨೨ ಎಸ್ ಜಿ .ಸಿದ್ದರಾಮಯ್ಯ