ತುಮಕೂರು : ಕೆಲವೇ ಕೆಲವು ಸಣ್ಣ ಮನಸ್ಸುಗಳು ಕೇಡಿನ ಮನಸ್ಸುಗಳಾಗಿ ನಮ್ಮ ಬದುಕಿನ ವಾತವರಣದಲ್ಲಿ ಹೊಲಸು ಮಾಡುವುದರ ಮೂಲಕ ಸೌಹಾರ್ದತೆ, ಸಾಮರಸ್ಯವನ್ನು ಕದಡುತ್ತಿದ್ದು, ಇಂತಹ ಹೊಲಸು ಮಾಡುವ ಕೇಡುಗಳ ಮನಸ್ಸುಗಳನ್ನು ದೊಡ್ಡ ಪೊರಕೆಯಿಂದ ಗುಡಿಸಿ ಭೂಮಿಯಿಂದ ಆಚೆಗೆ ಎಸೆಯಬೇಕಾದ ಅನಿವಾರ್ಯ ಬಂದೊದಗಿದೆ ಎಂದು ಸಾಹಿತಿ ಡಾ.ನಟರಾಜ ಬೂದಾಳು ಅಭಿಪ್ರಾಯಪಟ್ಟರು.
ಅವರು ಜೂನ್ 12ರ ಭಾನುವಾರ ಸಂಜೆ ಕಥೆಗಾರರಾದ ಮಿರ್ಜಾ ಬಶೀರ್ ಅವರ ಮನೆಯಲ್ಲಿ ಏರ್ಪಡಿಸಿದ್ದ ಚಂದ್ರಕಾಂತ ವಡ್ಡು ಸಂಪಾದನೆಯ ‘ಸೌಹಾರ್ದ ಕರ್ನಾಟಕ’ ಪುಸ್ತಕ ಬಿಡುಗಡೆ ಮತ್ತು ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸೌಹಾರ್ದ ಕದಡುವ ಮನಸ್ಸುಗಳು ಉಣ್ಣುವ ಜಾಗಕ್ಕೆ ಬಂದು ಹೊಲಸು ಮಾಡುತ್ತವೆ ಇದರಿಂದ ಉಣ್ಣುವ ಹಾಗೇನೂ ಇಲ್ಲ, ಅದನ್ನು ಸ್ವಚ್ಛ ಮಾಡದೆ ಬದುಕುವ ಹಾಗೇನೂ ಇಲ್ಲ, ದಿನಾ ಸ್ವಚ್ಛ ಮಾಡುತ್ತಲೇ ಇರಬೇಕು, ಅವರು ದಿನಾ ಬಂದು ಹೊಲಸು ಮಾಡುತ್ತಲೇ ಇರುತ್ತಾರೆ, ಈ ರೀತಿ ಹೊಲಸು ಮಾಡುವ ಮನಸ್ಸುಗಳು ಕೆಲವೆ ಕೆಲವು ಇರುತ್ತವೆ, ಆ ಕೆಲವೇ ಕೆಲವು ಮನಸ್ಸುಗಳು ಬದುಕಿನ ಆವರಣವನ್ನು ನಮ್ಮದೇ ಸೌಹಾರ್ದವನ್ನು ತಣ್ಣಗಿನ ವಾತವರಣದಲ್ಲಿ ಬದುಕಲು ಬಿಡದೆ ಹೊಲಸು ಮಾಡುತ್ತಲೇ ಇರುತ್ತವೆ, ನಾವೊಂದು ಪೊರಕೆ ಹಿಡಿದುಕೊಂಡು ಅವರು ಎಲ್ಲಿವರೆಗೆ ಹೊಲಸು ಮಾಡುತ್ತಾರೋ ಅಲ್ಲಿವರೆಗೆ ಗುಡಿಸುತ್ತಲೇ ಇರಬೇಕು, ಇದು ಈಗ ಅನಿವಾರ್ಯವಾಗಿದೆ ಎಂದರು.
ಈ ಮನಸ್ಸುಗಳು ಎಷ್ಟು ಕೇಡಿನ ಮನಸ್ಸುಗಳು ಅಂದರೆ ಕೊಡಲಿ ಕಾವು ಮರಕ್ಕೆ ಹೇಗೆ ಹೊಡೆದ ಎಂದು ಸಂಭ್ರಮಿಸುತ್ತದೆ, ಆದರೆ ಅದು ಯಾರಿಗೆ ಹೊಡೆದೆ ಎಂದು ವಿವೇಕವಿಲ್ಲದೆ ಹೇಗೆ ಲೋಕವೆಲ್ಲಾ ವಿಲವಿಲ ಒದ್ದಾಡಡಬೇಕು ಹಾಗೆ ಮಾಡುತ್ತೇವೆ ಅನ್ನುತ್ತಿದ್ದಾರಲ್ಲ, ಅವರು ವಿಲವಿಲ ಒದ್ದಾಡುವಂತೆ ಯಾರಿಗೆ ಮಾಡುತ್ತಿದ್ದೇವೆ ಎಂಬುದನ್ನು ಅರಿಯದೆ ಕೇಡನ್ನು ಮಾತನಾಡುತ್ತಿದ್ದು, ಆ ಕೇಡನ್ನು ಗುಡಿಸುತ್ತಲೇ ಇರೋಣ ಎಂದ ಬೂದಾಳು, 12ನೇ ಶತಮಾನದಿಂದಲೇ ಇಂತಹ ಕೇಡನ್ನು ಗುಡಿಸಿಕೊಂಡು ಬಂದಿದ್ದಾರೆ, ಅದು ಈಗಲೇ ನಿಲ್ಲುವಂತೆ ಕಾಣುವುದಿಲ್ಲ, ಕೇಡನ್ನು ಬಯಸುವವರನ್ನು ದ್ವೇಷಿಸುವುದು ಬೇಡ, ಎಂದಾದರೂ ಅವರು ನಮ್ಮ ಜೊತೆಗೆ ಕುಳಿತುಕೊಂಡು ಹೊಲಸು ಮಾಡುವ ಬದಲು ಉಂಡು ಹೊಗುತ್ತಾರೆ ಎಂಬ ವಿಶ್ವಾಸ ಇಟ್ಟೊಕೊಳ್ಳೋಣ, ಅವರಿಗೆ ಬನ್ನಿ ಜೊತೆಯಲ್ಲಿ ಉಣ್ಣೋಣ ಹೊಲಸು ಮಾಡುವುದು ಬೇಡ ಎಂದು ಹೇಳೋಣ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಮಾಜದಲ್ಲಿ ಮೇಲ್ಜಾತಿಯ ಕುಟುಂಬಗಳು ಸಹ ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದವು, ಮಾತನಾಡುತ್ತಿದ್ದವು, ಇದು ತುಂಬಾ ಸಂತೋಷ ತರುವಂತಹ ಸಂಗತಿಯಾಗಿತ್ತು, ಆದರೆ ಇಂದು ನಮ್ಮ ಸಹಜ ನಡೆಯನ್ನು ಎಲ್ಲಿ ಕಳೆದುಕೊಂಡೆವು, ನನಗನ್ನಿಸುತ್ತದೆ ಸೌಹಾರ್ದ ಎಂಬುದನ್ನು ವಿಶೇಷವಾಗಿ ನಾವು ವಾಕ್ಯಾನಿಸುವಂತಿಲ್ಲ, ಸಹಜವಾಗಿದ್ದಿದ್ದನ್ನು ಈಗ ಇಲ್ಲವಾಗಿಸಿದ್ದಾರೆ, ಹೀಗೆ ಇಲ್ಲವಾಗಿಸೋರು ಯಾರು, ಯಾಕೆ ಇಲ್ಲವಾಗಿಸುತ್ತಾರೆ, ನಮ್ಮ ಬದುಕಿನ ಸಹಜ ನಡೆಯನ್ನ ಯಾಕೆ ಕಲಕುತ್ತಾರೆ, ಯಾರು ಕಲಕುತ್ತಾರೆ, ಹೇಗೆ ಕಲಕುತ್ತಾರೆ, ಅಂತ ಗಮನಿಸಿದರೆ, ಈ ಪೊಳ್ಳು ಕಾಲ್ಪನಿಕ ಸಂಗತಿಗಳನ್ನೇ ಆಧರಿಸಿರಿಸಿರುತ್ತವೆ, ಸಾಮರಷ್ಯವನ್ನ ಕದಡುವಂತಹ ಮಾತು, ತತ್ವ ಮತ್ತು ಅದು ಹುಟ್ಟಿ ಬರುತ್ತಿರುವ ಆಕಾರಗಳು, ಹುಟ್ಟಿ ಬರುತ್ತಿರುವ ಮನಸ್ಸುಗಳು, ಇವೆಲ್ಲಾ ಪೊಳ್ಳನ್ನು ನಂಬಿಕೊಂಡಿರುವಂತಹವು, ಕಾಲ್ಪನಿಕ ಸಂಗತಿಗಳನ್ನೇ ಆಧರಿಸಿರೋ ಸೌಹಾರ್ದ, ಸಾಮರಷ್ಯ, ವಾಸ್ತವ ಸಂಗತಿಯನ್ನು ಆಧರಿಸಿ ಅದು ಸುಮ್ಮನಿರುತ್ತೆ, ಮಾತೆತ್ತಿದರೆ ಸತ್ಯ ಸುಳ್ಳಿನ ಮಾತು-ಕತೆ ಇದೆಯಲ್ಲಾ ಇದು ತುಂಬಾ ಕಠಿಣವಾದ ಮಾತುಕತೆ ಎಂದು ನಟರಾಜು ಬೂದಾಳು ಹೇಳಿದರು.
ಕರ್ನಾಟಕವೆ ಅಲ್ಲ ಇಡೀ ಭಾರತವನ್ನೇ ಗಮನಿಸಿದರೆ, ಅಥವಾ ವಿಶ್ವದ ಕಡೆ ಗಮನಿಸಿದರೆ ಒಬ್ಬರ ಪಕ್ಕ ಒಬ್ಬರು ಕೂತು ಮಾತನಾಡುವಂತಹ-ಬದುಕುವಂತಹ ಸಂಗತಿಗಳು ಬಹು ಕಾಲದಿಂದಲೂ ನಡೆದುಕೊಂಡು ಬಂದಿವೆ. ಒಬ್ಬ ಕಪ್ಪು ಹುಡುಗ-ಬಿಳಿ ಹುಡುಗಿ ಅಕ್ಕ ಪಕ್ಕ ಕೂತು ಮಾತನಾಡುತ್ತಿರುವುದನ್ನು ನೋಡಿ ಬಿಟ್ಟರೆ ನಮಗೆ ಇದೊಂದು ಎಷ್ಟು ಒಳ್ಳೆಯ ದೃಶ್ಯ ಅನ್ನಿಸುತಿತ್ತು, ಒಬ್ಬ ಕರಿಯ ಹುಡುಗ-ಒಬ್ಬಳು ಬಿಳಿಯ ಹುಡುಗಿ ಆಕರ್ಷಿತರಾಗಿ ಮಾತನಾಡುತ್ತಿರುವುದು ನೋಡಿ ತುಂಬಾ ಸಂಭ್ರಮಿಸುತ್ತಿದೆದೆವು, ಇಂತಹ ಸಂಭ್ರಮಗಳು ಯಥೇಚ್ಛವಾಗಿ ಇದ್ದದ್ದು ನಿಜ, ಅದಕ್ಕಿಂತ ಹೆಚ್ಚಾಗಿ ಮನ ಕಲಕುವ ಸಂಗತಿ ಇವತ್ತಿಗೂ ಹಿಂದೂ-ಮುಸ್ಲಿಂ, ಇತರ ಧರ್ಮೀಯರ ನಡೆವೆ ಅಲ್ಲ, ಒಂದೇ ಧರ್ಮ ಎಂದು ಕರೆದುಕೊಂಡಿರುವ ಧಾರ್ಮಿಕ ಆವರಣದಲ್ಲಿ ಜಾತಿಗಳ ಗುಂಪು, ಈ ಗುಂಪಾದರೂ ದೀರ್ಘ ಕಾಲದ ಸಾಮರಸ್ಯದ ನಡೆಯಲ್ಲಿ ಬದುಕಿತ್ತಾ, ಹೌದು ಅನ್ನಲು ಧೈರ್ಯ ಸಾಲದು, ಅದೆಷ್ಟು ತಾರತಮ್ಯ, ಆ ತಾರತಮ್ಯದಲ್ಲೇ ಸಾವಿರಾರು ವರ್ಷಗಳಿಂದ ಉಸಿರಾಡಿಕೊಂಡು ಬದುಕಿದ್ದಾರೆ.

ಅಂತಹ ಅಸಾಮರಷ್ಯದ-ತಾರತಮ್ಯ ಅಪಮಾನದ ಲೋಕವನ್ನು ಎದರಿಗಿಟ್ಟುಕೊಂಡು ಈವರೆವಿಗೂ ಬದುಕಿಕೊಂಡು, ಬಾಳಿಕೊಂಡು ಬಂದಿದ್ದೇವೆ, ಹೀಗೆ ಬದುಕಿಕೊಂಡು ಬಂದ ನಾವು ಅತ್ಯಂತ ಹೀನ ಚರಿತ್ರರು, ಈ ವಿಷಯದಲ್ಲಿ. ಸೌಹಾರ್ದ-ಸಾಮರಷ್ಯದ ದೃಷ್ಠಿಯಿಂದ ನೋಡಿದರೆ ನಮ್ಮ ಹಿರೀಕರು, ಮಿಥ್ಯವನ್ನೇ ನಂಬಿ, ಮಿಥ್ಯವನ್ನೇ ಪೂಜಿಸಿ ಮಿಥ್ಯದಲ್ಲೇ ಬದುಕಿದ್ದಾರೆ, ಅಲ್ಲಮಪ್ರಭು ಹೇಳಿದಂತೆ ಈ ಬದಕು ನಾಯಿ ಬಾಳು, ನಾಯಿ ಸಾವು ಆ ನಾಯಿ ಬಾಳು, ನಾಯಿ ಸಾವನ್ನೇ ನಾವು ಮುಂದಿನ ಪೀಳಿಗೆಗೂ ವರ್ಗಾಯಿಸುತ್ತಾ ಇದ್ದೇವೇನೋ, ಯಾಕೆಂದರೆ ಜಾತಿ, ಅಸ್ಪೃಶ್ಯತೆ, ಹೆಣ್ಣು-ಗಂಡು ಎಂಬ ತಾರತಮ್ಯ, ಕೇವಲ ಮಾತಿನಲ್ಲಿ ಕಟ್ಟಿಕೊಂಡ ಕಾಲ್ಪನಿಕ ಸಂರಕ್ಷಣೆಗಳು ಎಂದ ಬೂದಾಳು, ಹೇಗೆ ಯೋಚನೆ ಮಾಡಿದರು ನಾವು ಯಾವ ಜಾತಿ ಎಂಬುದು ಕಾಲ್ಪನಿವಾದ ಸಂಗತಿ, ನಾವು ಭಾಷೆಯನ್ನು ಈ ಕಾಲ್ಪನಿಕ ಸಂಗತಿಗಳನ್ನು ಕಟ್ಟಲಿಕ್ಕೆ ಬಳಸಿಕೊಂಡಿದ್ದೇವೆ. ನನಗೇನಾದರೂ ವಿಶೇಷವಾದ ಶಕ್ತಿ ಸಿಕ್ಕಿ ಬಿಟ್ಟರೆ, ಶಪಿಸುವಂತಹ ಶಕ್ತಿಯೇನಾದರೂ ಸಿಕ್ಕರೆ ನಾನು ಇಡೀ ಮನುಷ್ಯ ಕುಲಕ್ಕೆ ಒಂದು ದೊಡ್ಡ ಶಾಪ ಕೊಡಬೇಕು ಅಂದುಕೊಂಡಿದ್ದೇನೆ ಮನುಷ್ಯನಿಗೆ ಭಾಷೆ ಮರೆತು ಹೋಗಲಿ, ಮಾತು ನಿಂತು ಹೋಗಲಿ, ಹಾಗೆ ಆದಾಗ ಈ ಜಾತಿ, ಅಸ್ಪøಶ್ಯತೆ, ಈ ತಾರತಮ್ಯ ಮುಂದುವರೆಯಲ್ಲ, ಕಳೆದುಕೊಳ್ಳೋದು ಬೇಕಾದಷ್ಟಿರಬಹುದು ಎಂದರು.
ಮೊದಲು ನಾವು ಕಳೆದುಕೊಳ್ಳಬೇಕಾಗಿರುವುದು ಈ ಅಸ್ಪøಶ್ಯತೆ, ತಾರತಮ್ಯವನ್ನು ಎಂದ ಅವರು, ಯಾವುದೇ ಕಾರಣಕ್ಕೂ ಒಬ್ಬ ನಿರ್ಧಿಷ್ಟ ಜಾತಿ, ನಿರ್ಧಿಷ್ಟ ಧರ್ಮದ ಮನುಷ್ಯ ಎಂದು ಹುಟ್ಟಿನ ಮೂಲಕ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದಕ್ಕೊಂದು ಉದಾಹರಣೆ ಅಂದರೆ ಮಹಾರಾಷ್ಟ್ರದ ನಾರಾಯಣ ಸರ್ವೆ ಅವರು ಕಸದ ತೊಟ್ಟಿಯಲ್ಲಿ ಸಿಕ್ಕ ಮಗು, ನಾವು ಅವರನ್ನು ನಾನು ತೊಟ್ಟಿಯಲ್ಲಿ ಸಿಕ್ಕ ಮಗು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಲ್ಲ ಯಾಕೆ ಎಂದು ಪ್ರಶ್ನಿಸಿದಾಗ, ನೋಡ್ರಿ ನಿಮಗೆಲ್ಲ ಒಂದು ಜಾತಿ, ಧರ್ಮ ಬೇಕಿರಲಿ, ಬೇಕಿಲ್ಲದೆ ಇರಲಿ ಕೊಟ್ಟು ಬಿಟ್ಟಿದ್ದಾರೆ, ಆದರೆ ನಾನು ನೋಡಿ ತೊಟ್ಟಿಯಲ್ಲಿ ಸಿಕ್ಕವನು ಹುಟ್ಟುತ್ತಲೇ ವಿಶ್ವ ಮಾನವ, ಗಂಗಾರಾವ್ ಸರ್ವೆ ಎಂಬ ಮುನ್ಸಿಪಾಲಿಟಿ ನೌಕರನಿಗೆ ಸಿಕ್ಕೆ ಹಂಗಾಗಿ ನನ್ನ ಹೆಸರು ನಾರಾಯಣ ಸರ್ವೆ, ನಾನು ಮುಸ್ಲಿಂ ಮೆಹಬೂಬ್‍ಗೆ ಸಿಕ್ಕಿದ್ದರೆ, ಕ್ರಿಶ್ಚಿಯನ್ ಜೋಸೆಪ್‍ಗೆ ಸಿಕ್ಕಿದ್ದರೆ ಹಂಗಾಗಿ ನಾನು ಹುಟ್ಟುತ್ತಲೆ ವಿಶ್ವ ಮಾನವನಾಗಿ ಹುಟ್ಟಿದೆ ಎನ್ನುತ್ತಾರೆ, ಈ ಧರ್ಮ-ಜಾತಿ ಇಲ್ಲದಿದ್ದರೆ ಎಲ್ಲರೂ ವಿಶ್ವ ಮಾನವರಾಗುತ್ತಿದ್ದರು ಎಂದರು.
ಇದೊಂದು ದೊಡ್ಡ ಸತ್ಯವನ್ನು ತೋರಿಸುತ್ತೆ, ನಮಗೆ ಹೇಳಲಿಕ್ಕೆ ಅಪ್ಪ-ಅಮ್ಮ ಇದ್ದಾರೆ ಅಪ್ಪ-ಅಮ್ಮ ಜಾತಿ-ಧರ್ಮ ಇದೆ ಎಂದು ನಮಗೂ ಹೇಳಿದ್ದಾರೆ, ಇದರಿಂದ ನಮಗೆ ಧರ್ಮ, ಒಂದಷ್ಟು ದೇವರುಗಳು ಸಿಕ್ಕಿದ್ದಾವೆ, ಇದೇ ಸಾಮರಷÀ್ಯವನ್ನು ಕದಡಲಿಕ್ಕೆ ಕಾರಣವಾಗಿರುವುದು, ಇದಕ್ಕೆ ನಾನು ಭಾಷೆ ಮರೆತು ಹೋಗಲಿ, ಮಾತು ನಿಂತು ಹೋಗಲಿ ಎಂದು ಬಯಸುತ್ತೇನೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಚಲನಚಿತ್ರ ನಟರಾದ ಹನುಮಂತೇಗೌಡರು ಮಾತನಾಡಿ ಎಲ್ಲಾ ಧರ್ಮದಲ್ಲಿರುವ ಮತಾಂಧರನ್ನು ಎಲ್ಲರು ಖಂಡಿಸಬೇಕು, ಇಂದು ಇಂತಹ ಮತಾಂಧರಿಂದ ಕೇಡನ್ನೆ ಬಯಸುವ, ಸಂವಿಧಾನ ಬದಲಾಯಿಸುವ, ಪ್ರಜಾಪ್ರಭುತ್ವವನ್ನು ಧಿಕ್ಕರಿಸುವ ಸರ್ಕಾರಗಳು ಬರಲು ಕಾರಣವಾಗಿವೆ, ಈ ಹಿನ್ನಲೆಯಲ್ಲಿ ಮೊದಲು ಈ ಮತಾಂಧರು ಬದಲಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀಕಾಂತೆರಾಜ ಅರಸು ಅವರು ಮಾತನಾಡಿ ಇಂದು ಸಮಾಜಕ್ಕೆ ಕಂಟಕವಾಗುವಂತಹ ಸಣ್ಣ ವಿಷಯಗಳನ್ನೆ ದೊಡ್ಡದು ಮಾಡಿ ಸಾಮರಸ್ಯ ಹಾಳು ಮಾಡುತ್ತಿದ್ದು, ಪ್ರತಿಯೊಬ್ಬರು ಇದನ್ನು ಖಂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕರಾದ ಮಿರ್ಜಾ ಬಶೀರ ಅವರು ಕರ್ನಾಟಕದಲ್ಲಿ ಇತ್ತೀಚೆಗೆ ಉಂಟಾದ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ನಿಭಾಯಸಿವುದು ಎಂದು ಯೋಚಿಸಿದ ಚಂದ್ರಕಾಂತ ವಡ್ಡು ಅವರು, ಹಲವಾರು ಲೇಖಕರಿಂದ ಲೇಖನಗಳನ್ನು ಬರೆಸಿ ಅತೀ ಶೀಘ್ರದಲ್ಲಿ ‘ಸೌಹಾರ್ದ ಕರ್ನಾಟಕ’ ಪುಸ್ತಕವನ್ನು ಹೊರ ತಂದಿದ್ದು, ಈ ಪುಸ್ತಕ ಪ್ರಸಕ್ತ ಕಾಲಮಾನದಲ್ಲಿ ಎಲ್ಲರೂ ಓದಬೇಕಾದ ಪುಸ್ತಕವಾಗಿದೆ ಎಂದ ಅವರು, ಸುಳ್ಳು ಸತ್ಯದ ಬಟ್ಟೆಗಳನ್ನು ಹಾಕಿಕೊಂಡು ಸುಳ್ಳನ್ನೆ ಸತ್ಯ ಎಂದು ಹೇಳುತ್ತಿದ್ದು, ಸುಳ್ಳಿನ ಬಟ್ಟೆಗಳನ್ನು ಹಾಕಿಕೊಂಡಿರುವ ಸತ್ಯ ಎಷ್ಟೇ ಹೇಳಿದರು ಅದನ್ನು ನಂಬುತ್ತಿಲ್ಲ, ಈಗ ಅಂತಹ ಪರಿಸ್ಥಿತಿ ನಮ್ಮೆದುರಿಗಿದೆ ಎಂದರು.
ಆರ್.ಶಾಂತಮೂರ್ತಿ, ನಿಕೇತ ಮಾತನಾಡಿದರು, ಕ.ಸಾ.ಪ. ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಲೇಖಕಿ ಗೀತಾವಸಂತ, ಎಸ್.ಎ.ಖಾನ್ ಮುಂತಾದವರು ಭಾಗವಹಿಸಿದ್ದರು. ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಸ್ವಾಗತಿಸಿ, ಮಧುಗಿರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಚೈತನ್ಯ ಪ್ರಾರ್ಥಿಸಿದರು.