ಹಳೇ ಪಠ್ಯ ಮುಂದುವರಿಸುವಂತೆ ಚಿಂತಕರು, ಪೋಷಕರು ಒತ್ತಾಯ


ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯ ಹೊಸ ಪಠ್ಯವನ್ನು ಕೂಡಲೇ ರದ್ದುಗೊಳಿಸಿ, ಈ ಹಿಂದಿನ ಪಠ್ಯವನ್ನು ಮುಂದುವರಿಸಬೇಕು ಎಂದು ಶಿಕ್ಷಣ ತಜ್ಞ, ಹೋರಾಟಗಾರ ಪ್ರೊ. ಕೆ.ದೊರೈರಾಜ್ ಒತ್ತಾಯಿಸಿದರು.

ತುಮಕೂರಿನಲ್ಲಿ ಭಾನುವಾರ ಸಂಜೆ ನಡೆದ ಜಾಗೃತ ನಾಗರೀಕರು ಹಾಗೂ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರ
ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ತಿರುಚುವ ಮೂಲಕ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥರವರನ್ನು ಪಠ್ಯ ಪರಿಷ್ಕರಣಾ ಸಮಿತಿಗೆ ರಾಜ್ಯ ಸರ್ಕಾರ ಅಧ್ಯಕ್ಷರನ್ನಾಗಿ ನೇಮಿಸಿರುವುದೇ ಕಾನೂನು ಬಾಹಿರ. ನಾಡು, ನುಡಿ, ನಾಡಧ್ವಜದ ರಕ್ಷಣೆ ಮಾಡಬೇಕಾಗಿರುವ ಸಂವಿಧಾನಬದ್ಧ ಕರ್ತವ್ಯ ರಾಜ್ಯ ಬಿಜೆಪಿ ಸರ್ಕಾರದ್ದಾಗಿದ್ದು, ನಾಡಗೀತೆಗೆ ಅವಮಾನ ಮಾಡಿರುವ ರೋಹಿತ್‍ಚಕ್ರತೀರ್ಥ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ದೊರೈರಾಜ್ ಆಗ್ರಹಿಸಿದರು.
ನಾಡು, ನುಡಿ, ನಾಡಧ್ವಜಕ್ಕೆ ಅವಮಾನವಾದರೂ ಕ್ರಮ ತೆಗೆದುಕೊಳ್ಳದ ಸರ್ಕಾರದ ನಿಲುವು ಖಂಡನೀಯ ಹಾಗೂ ಅಕ್ಷಮ್ಯ. ಸರ್ಕಾರ ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸಬೇಕೇ ಹೊರತು ಯಾವುದೇ ಕೋಮು, ಧರ್ಮ, ಜಾತಿಯ ಪರವಾಗಿ ಅಲ್ಲ ಸಂವಿಧಾನಕ್ಕೆ ವಿರುದ್ದವಾಗಿ ನಡೆದುಕೊಳ್ಳುವ ಯಾರನ್ನೇ ಆದರೂ ಕೂಡಲೇ ಶಿಕ್ಷಿಸಿ ಸಾಮಾಜಿಕ ಸಾಮರಸ್ಯ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.

ಪಠ್ಯ ಪರಿಷ್ಕರಣೆ ಮೂಲಕ ಸಾಮಾಜಿಕ ಸಾಮರಸ್ಯ ಕೆಡಿಸುವ ಕೆಲಸ ರಾಜ್ಯದಲ್ಲಿ ನಡೆದಿದ್ದು, ಜೀವಜಲಕ್ಕೆ ವಿಷ ಉಳಿಸುವ ಕೆಲಸಕ್ಕೆ ಕೈಹಾಕಲಾಗಿದೆ ಬಹುತ್ವ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿ ತೀರ್ಮಾನವನ್ನು ತೆಗೆದುಕೊಂಡು ಏಕಪಕ್ಷೀಯವಾಗಿ ಹೊಸ ಪಠ್ಯವನ್ನು ಹೇರಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಪ್ರಜಾಸತ್ತಾತ್ಮಕ ಮಾದರಿಯನ್ನು ಉಲ್ಲಂಘಿಸಿ ಹೊಸ ಪಠ್ಯವನ್ನು ರೂಪಿಸಿ ಸರ್ವಾಧಿಕಾರಿ ಧೋರಣೆಯನ್ನು ಮೆರೆದಿದೆ ಎಂದು ದೂರಿದರು.
ಈಗಾಗಲೇ ಶಾಲೆಗಳು ಆರಂಭವಾಗಿದ್ದು ಮಕ್ಕಳಿಗೆ ಪಠ್ಯಪುಸ್ತಕಗಳು ಸಿಗದೆ ಪರದಾಡುವಂತಾಗಿದೆ. ಚಕ್ರತೀರ್ಥ ನೇತೃತ್ವದ ಹೊಸ ಪಠ್ಯ ಪರಿಷ್ಕರಣಾ ಸಮಿತಿ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡಿದ್ದು ಜೀವಜಲಕ್ಕೆ ಕೈಹಾಕಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಂಡು ಹೊಸ ಪಠ್ಯ ಕೈಬಿಟ್ಟು, ಹಳೇ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ತಕ್ಷಣವೇ ವಿತರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಸಿಬಿಎಸ್‍ಇ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪನವರ ಸಮಿತಿಯ ಪಠ್ಯವನ್ನೇ ಮುಂದುವರಿಸಿದ್ದು ರಾಜ್ಯದಲ್ಲಿ ಬದಲಾವಣೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.

ಸಾಹಿತ್ಯ ಪರಿಷತ್ ಧೋರಣೆ ಖಂಡನೀಯ : ರಾಷ್ಟ್ರಕವಿ ನಾಡಗೀತೆಯನ್ನು ತಿರುಚಿ ವಿಶ್ವಮಾನವ ಪ್ರಜ್ಞೆಗೆ ಅಪಚಾರವೆಸಗಿರುವ ರೋಹಿತ್‍ಚಕ್ರತೀರ್ಥರವರ ದೋರಣೆಯನ್ನು ಖಂಡಿಸಿದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ದೋರಣೆ ಖಂಡನೀಯ. ನಾಡು, ನುಡಿಗೆ, ನಾಡ ದ್ವಜಕ್ಕೂ ಅವಮಾನವಾದರೂ ದಿವ್ಯ ಮೌನವಹಿಸಿರುವ ಕನ್ನಡ ಸಾಹಿತ್ಯ ಪರಿಷತ್ ಏಕೆ ಬೇಕು ಎಂದು ದೊರೈರಾಜ್ ಮಾರ್ಮಿಕವಾಗಿ ಪ್ರಶ್ನಿಸಿದರು.

ನಿವೃತ್ತ ಪ್ರಾಂಶುಪಾಲ ಹಾಗೂ ಇತಿಹಾಸ ಅಧ್ಯಾಪಕ ಎಂ.ಹೆಚ್. ನಾಗರಾಜು ಮಾತನಾಡಿ ಪಠ್ಯಪುಸ್ತವನ್ನು ಏಕಪಕ್ಷೀಯವಾಗಿ ತಿರುಚಿ ಇತಿಹಾಸಕ್ಕೆ ಅಪಚಾರವೆಸಗಲಾಗಿದ್ದು ಇದನ್ನು ಸರಿಪಡಿಸುವ ಕೆಲಸದ ಹಿನ್ನೆಲೆಯಲ್ಲಿ ಹಳೇ ಪಠ್ಯವನ್ನು ಮುಂದುವರಿಸಬೇಕು ಎಂದರು.
ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಎನ್. ನಾಗಪ್ಪ ಮಾತನಾಡಿ ಇತಿಹಾಸವನ್ನು ಪುರಾಣ ಮಾಡುವ, ಪುರಾಣವನ್ನು ಇತಿಹಾಸ ಮಾಡುವ ಹುನ್ನಾರವನ್ನು ಹೊಸ ಪಠ್ಯ ಪರಿಷ್ಕರಣಾ ಸಮಿತಿ ಮಾಡಿದ್ದು ಈ ಕೂಡಲೇ ಈ ಪಠ್ಯಪುಸ್ತಕ ಸಮಿತಿಯನ್ನು ರದ್ದುಗೊಳಿಸಬೇಕು ಎಂದರು.

ನಿಕಟ ಪೂರ್ವ ಕಸಾಪ ಜಿಲ್ಲಾಧ್ಯಕ್ಷೆ ಹಾಗೂ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷೆ, ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ ಊಟಕ್ಕೆ ನೀರು ಬೇಕು ಮತ್ತೇನು ಅಲ್ಲ. ಆದರೆ ಹೊಸ ಪಠ್ಯ ಊಟದ ಜೊತೆಗೆ ಜೀವಜಲ ನೀರನ್ನು ಕೊಡುವುದರ ಬದಲು ಬೇರೆನೆನೋ ಕೊಟ್ಟು ಕಲುಷಿತಗೊಳಿಸಿ ಸಾಮಾಜಿಕ ಆರೋಗ್ಯವನ್ನು ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಚಿಂತಕ ಗೋವಿಂದಯ್ಯ ಮಾತನಾಡಿ ಹೊಸ ಪಠ್ಯಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಬೇಕು ಈ ಹಿನ್ನೆಲೆಯಲ್ಲಿ ಸರ್ಕಾರದ ಧೋರಣೆಯನ್ನು ಖಂಡಿಸಿ ಒಂದು ದಿನ ಉಪವಾಸ ಸತ್ಯಾಗ್ರಹವನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಎ. ನರಸಿಂಹಮೂರ್ತಿ ಮಾತನಾಡಿ ನಮ್ಮ ಜಿಲ್ಲೆಯವರೇ ಆದ ಬರಗೂರು ರಾಮಚಂದ್ರಪ್ಪನವರ ಹಳೇ ಪಠ್ಯಕ್ರಮವನ್ನು ಬದಲಿಸಿ ಏಕಪಕ್ಷೀಯವಾಗಿ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಿರುವುದು ಸರ್ಕಾರದ ದುರಹಂಕಾರದ ನಡೆ ಎಂದು ಟೀಕಿಸಿದರು.

ಎ.ಐಡಿ.ಎಸ್.ಓ ಎಸ್.ಎನ್. ಸ್ವಾಮಿ ಮಾತನಾಡಿ ಶಿಕ್ಷಣ ಎಂದರೆ ಧರ್ಮ ಅಲ್ಲ, ಸ್ವತಂತ್ರವಾಗಿ ಚಿಂತಿಸುವ ಪಠ್ಯಕ್ರಮ ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಇದಕ್ಕೆ ತದ್ವಿರುದ್ದವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ.
ವಕೀಲ ಡಾ. ಎಸ್. ರಮೇಶ ಮಾತನಾಡಿ ಹೊಸ ಪಠ್ಯಕ್ರಮ ಹೇರಿಕೆ ವಿರೋಧಿಸಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಳರಿಗೆ ಪತ್ರ ಚಳವಳಿ ನಡೆಸಬೇಕು ಸಲಹೆ ನೀಡಿದರು. ಆರಂಭದಲ್ಲಿ ಎಸ್. ರಾಘವೇಂದ್ರ ವಿಷಯ ಮಂಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ರಾಜೇಂದ್ರನಾಯಕ್, ವಕೀಲ ಓಬಯ್ಯ, ಮಹಾವೀರ್, ಸಿ.ಕೆ. ಮಹೇಂದ್ರ, ಓ. ನಾಗರಾಜು, ರೈತ ಸಂಘದ ನಟರಾಜಪ್ಪ, ವೆಲ್‍ಫೇರ್ ಪಾರ್ಟಿಯ ತಾಜುದ್ದೀನ್ ಷರೀಪ್, ಜನಸಂಗ್ರಾಮ ಪರಿಷತ್‍ನ ಪಂಡಿತ್ ಜವಹರ್ ಕುಣಿಹಳ್ಳಿ ಮಂಜುನಾಥ್, ಮಹಿಳಾ ಸಂಘಟನೆಯ ಕಲ್ಯಾಣಿ, ಹೆಚ್.ಜಿ. ರಮೇಶ್, ಪತ್ರಕರ್ತರಾದ ವೆಂಕಟಾಚಲ, ರಮೇಶ್, ಮಾತನಾಡಿದರು ಗೋವಿಂದರಾಜು, ಕಿರಣ್, ಶ್ರಮಿಕ ಕಟ್ಟಡ ಕಾರ್ಮಿಕರ ಸಂಘದ ರಾಮಚಂದ್ರ, ಕೊಳಗೇರಿಯ ಅರುಣ, ತಿರುಮಲೇಶ್‍ಬಾಬು, ಶ್ರೀರಾಮ ಸೇವಾ ಸಮಿತಿಯ ಟಿ.ಹೆಚ್. ರಾಮು ಹಾಗೂ ಸ್ನೇಹಿತರು, ಸುಬ್ರಮಣ್ಯ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದಿದ್ದರೂ ಸಹ ಕನ್ನಡ ನಾಡು, ನುಡಿ, ನಾಡಧ್ವಜಕ್ಕೆ ಅವಮಾನಿಸಿರುವ ರೋಹಿತ್‍ಚಕ್ರತೀರ್ಥರವರನ್ನು ತುಮಕೂರು ಜಿಲ್ಲಾಡಳಿತ ವಿಶ್ವಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಅವಕಾಶ ನೀಡಿರುವುದನ್ನು ಖಂಡಿಸಿ, ನಿರ್ಣಯ ತೆಗೆದುಕೊಳ್ಳಲಾಯಿತು.

Leave a Reply

Your email address will not be published. Required fields are marked *