ತುಮಕೂರು : ತುಮಕೂರು ಎಂದರೆ ಸಿದ್ಧಗಂಗೆ, ಸಿದ್ಧಗಂಗೆ ಎಂದರೆ ಡಾ.ಶ್ರೀ ಶಿವಕುಮಾರಸ್ವಾಮಿಗಳು ಎಂಬ ಭಾವನೆ ಇಡೀ ಕನ್ನಡ ನಾಡಿನಲ್ಲಿದ್ದು, ಶ್ರೀಗಳ 4ನೇ ಪುಣ್ಯಸ್ಮರಣೆಗೆ ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಬಂದು ಸೇರಿದರು.
ಶ್ರೀಗಳ ಗದ್ದುಗೆಯನ್ನು ವಿವಿಧ ಹಣ್ಣು, ಹೂಗಳಿಂದ ಅಲಂಕರಿಸಿದ್ದನ್ನು ಕಣ್ತುಂಬಿಕೊಂಡ ಭಕ್ತರು, ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪುಣ್ಯಸ್ಮರಣೆಗೆ ಏರ್ಪಡಿಸಲಾಗಿದ್ದ ದಾಸೋಹದಲ್ಲಿ ಲಕ್ಷಾಂತರ ಜನರಿಗೆ ಊಟೋಪಚಾರವನ್ನು ಯಾವುದೇ ಲೋಪವಿಲ್ಲದೆ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.

ಡಾ.ಶಿವಕುಮಾರಸ್ವಾಮಿಗಳು ಮೊದಲು ಪ್ರಸಾದ ಸೇವನೆಗೆ ಆಧ್ಯತೆಯನ್ನು ನೀಡುತ್ತಿದ್ದರು, ಮಠಕ್ಕೆ ಬಂದ ಯಾವ ಭಕ್ತರು ಹಸಿವಿನಿಂದ ಹೋಗ ಬಾರದು ಎಂಬುದು ಶ್ರೀಗಳ ಆಶಯ ಇಂದಿಗೂ ನಡೆಯುತ್ತಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದರು.
ಶ್ರೀಗಳ ಪುಣ್ಯಸ್ಮರಣೆಗೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ಶ್ರೀಗಳ ಪುಣ್ಯಸ್ಮರಣೆಯ ಸಮಾರಂಭದಲ್ಲಿ ಹಲವಾರು ಮಠಾಧೀಶರುಗಳು, ಮಂತ್ರಿಗಳು ಭಾಗವಹಿಸಿದ್ದರು.