ರಾಜಕೀಯ ವಿರೋಧಿಗಳು ಭಯಪಡಿಸುವ ಉದ್ದೇಶದಿಂದ ಕಲ್ಲೇಸೆತ ಕೃತ್ಯ-ಡಾ.ಜಿ.ಪರಮೇಶ್ವರ್

ತುಮಕೂರು: ನಾನು 35 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಶತ್ರುಗಳು ಕಡಿಮೆ ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ರೆ ಈ ರೀತಿ ತೀರಿಸಿಕೊಳ್ಳಬಾರದು. ಕೆಲವು ರಾಜಕೀಯ ವಿರೋಧಿಗಳು ನನ್ನನ್ನು ಭಯ ಪಡಿಸುವ ಉದ್ದೇಶ ಹೊಂದಿ, ಈ ರೀತಿಯ ಕ್ಷುಲ್ಲಕ ಕೆಲಸಕ್ಕೇನಾದರೂ ಕೈ ಹಾಕಿದ್ದಲ್ಲಿ ಅದಕ್ಕೆ ನಾನು ಹೆದರುವುದಿಲ್ಲ. ಬದಲಾಗಿ ರಾಜಕೀಯವಾಗಿಯೇ ಉತ್ತರ ನೀಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಅವರು ಹೇಳಿದರು.

ತುಮಕೂರು ನಗರದ ಸಿದ್ದಾರ್ಥನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಕೊರಟಗೆರೆ ಕ್ಷೇತ್ರದ ಅರಸಾಪುರ ಪಂಚಾಯ್ತಿಯಲ್ಲಿನ ಭೈರೇನಹಳ್ಳಿಯಲ್ಲಿ ಸಂಜೆ 4.30 ರ ಸುಮಾರಿಗೆ ಚುನಾವಣಾ ಪ್ರಚಾರದಲ್ಲಿ ತಲೆಗೆ ಬಿದ್ದ ಕಲ್ಲಿನ ಘಟನೆ ಕುರಿತು ಮಾತನಾಡಿದರು.

ರಾಜಕೀಯ ಬದುಕಿನಲ್ಲಿ ಸೋಲನ್ನು-ಗೆಲುವನ್ನು ನೋಡಿದ್ದೇನೆ. ಸೋತಾಗ ಕುಗ್ಗಿಲ್ಲ ಅದೇ ರೀತಿ ಗೆದ್ದಾಗಲೂ ಹಿಗ್ಗಿಲ್ಲ. ಬಹಳ ಸ್ಥಿತ ಪ್ರಜ್ಞನಾಗಿ ಇಲ್ಲಿಯವರೆಗೆ ರಾಜಕೀಯವನ್ನು ಮಾಡಿಕೊಂಡು ಬಂದಿದ್ದೇನೆ. ಕೆಟ್ಟ ರಾಜಕೀಯ ವ್ಯವಸ್ಥೆಗೆ ನಾನು ಮುಂದಾಗಿಲ್ಲ. ನನ್ನ ವ್ಯಕಿತ್ವವನ್ನು ಇಡೀ ರಾಜ್ಯ ಮತ್ತು ರಾಷ್ಟ್ರ ಹಾಗೂ ಕ್ಷೇತ್ರದ ಮತದಾರರು ನೋಡಿದ್ದಾರೆ. ನಾನು ಪಾರದರ್ಶಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನ ನಡೆಸಿಕೊಂಡು ಬಂದಿದ್ದೇನೆ ಎಂದು ಅವರು ನುಡಿದರು.

ತನಿಖೆಯಾಗಲಿ:
ನನ್ನ ತಲೆಗೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಅಂತಾ ಹೇಳೋಕೆ ಆಗಲ್ಲಾ. ಅದು ತುಂಬಾ ದಪ್ಪ ಇತ್ತು.ಆದ್ದರಿಂದಲೇ ರಕ್ತ ಚಿಮ್ಮಿ ಹರಿಯಿತು. ಸಮಯ ನೋಡಿ ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿದ್ರು ಅನ್ನಿಸುತ್ತದೆ. ಬೇಕಂತಲೇ ಎಸೆದಿದ್ರೇ? ಯಾರು? ಮತ್ತು ಯಾಕೆ ಎಸೆದ್ರು ಗೊತ್ತಿಲ್ಲಾ. ಈ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದೇವೆ. ತನಿಖೆಯಾಗಲಿ ಎಂದು ಪರಮೇಶ್ವರ ಆಗ್ರಹಿಸಿದರು.

3ನೇ ಬಾರಿ ಘಟನೆ: ಈ ಹಿಂದೆಯೂ 1999ರಲ್ಲಿ ನನ್ನ ಮೇಲೆ ಇದೇ ರೀತಿ ಹಲ್ಲೆ ನಡೆದಿತ್ತು.ಫಲಿತಾಂಶ ಬಳಿಕ ವಿಜಯೋತ್ಸವ ಆಚರಿಸೋ ವೇಳೆ ಚಾಕು ಇರಿಯೋದಕ್ಕೆ ಪ್ರಯತ್ನ ನಡೆದಿತ್ತು. ಇತ್ತೀಚಿಗೆ ನಾಮಪತ್ರ ಸಲ್ಲಿಸುವ ವೇಳೆ ಕಲ್ಲು ತೂರಲಾಯಿತು. ಈಗ ಮತ್ತೆ ನನ್ನ ಮೇಲೆ ಕಲ್ಲು ಬಿದ್ದಿದೆ.
ಹೀಗಾಗಿ ಪದೇ ಪದೇ ಯಾಕೆ ಹೀಗಾಗ್ತಿದೆ ತಿಳಿಯುತ್ತಿಲ್ಲಾ ಎಂದು ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.

ಭದ್ರತೆ ಅಗತ್ಯವಿಲ್ಲ:
ನಾಯಕನಿಗೆ ದೈಹಿಕವಾಗಿ ಪೆಟ್ಟು ಬಿದ್ದಾಗ ಮತ್ತು ಹಲ್ಲೆಯಾದಾಗ ಕಾರ್ಯಕರ್ತರು ಪ್ರತಿಭಟಿಸುವುದು-ಆರೋಪ ಮಾಡುವುದು ಸಹಜ. ನಾನು ಸದಾ ಜನಸಮುದಾಯದೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಜನಸೇವೆಯಲ್ಲಿ ಇದ್ದವನು. ನನಗೆ ಸಾರ್ವಜನಿಕವಾಗಿ ದಾಳಿ ಮಾಡುತ್ತಾರೆಂಬ ಭಯವಿಲ್ಲ.ಆದ್ದರಿಂದ ನನಗೆ ಪೋಲೀಸ್ ಭದ್ರತೆಯ ಅವಶ್ಯಕತೆ ಇಲ್ಲ ಎಂದು ಅವರು ನುಡಿದರು.

ಒಂದೂವರೆ ಇಂಚು ಗಾಯ:
ಕಲ್ಲು ಬಿದ್ದಿದ್ದರಿಂದ ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ. ಸರ್ಜಿಕಲ್ ಗಮ್ ಹಾಕಿದ್ದಾರೆ.
ನೋವಿದೆ. ಸದ್ಯಕ್ಕೆ ವೈದ್ಯರು ವಿಶ್ರಾಂತಿ ಮಾಡಲು ಹೆಳಿದ್ದಾರೆ. ಅವರ ಸಲಹೆ ಪಡೆಯುತ್ತೇನೆ. ಅವಕಾಶ ನೀಡಿದರೆ ನಾಳೆಯೇ ಪ್ರಚಾರಕ್ಕೆ ಹೋಗ್ತೀನಿ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಡ್ರಾಮ ಬರೋಲ್ಲ:

ಪರಮೇಶ್ವರ್ ತಲೆಗೆ ಬಿದ್ದ ಕಲ್ಲೆಸೆತ ಘಟನೆಯನ್ನು ಡ್ರಾಮ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಹುಷಃ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು. ನನಗೆ ಅತ್ತು ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಏಕೆಂದರೇ ಏಟು ತಿಂದವನು ನಾನು ಅಲ್ವಾ, ಅವರಲ್ಲಾ. ಅತ್ತು-ಕರೆದು ಹೇಳುವ ಅವಶ್ಯಕತೆ ನನಗೆ ಇಲ್ಲಾ. ಆ ರೀತಿಯಲ್ಲಿ ರಾಜೀಕೀಯ ಜೀವನ ನಡೆಸಿಲ್ಲ. ನಾನೇ ಜನರ ಮುಂದೆ ಹೋಗ್ತೀನಿ. 5 ಸಲ ಗೆದ್ದಿದ್ದೇನೆ. ಎರಡು ಬಾರಿ ಸೋತಿದ್ದೇನೆ. ನಾನು ಸ್ಪೋಟ್ರ್ಸ್ ಪರ್ಸನ್. ಸೋಲು-ಗೆಲುವು ಒಂದೇ ನನಗೆ.ಎಲ್ಲವನ್ನು ಸಮಾನಾಗಿ ಸ್ವೀಕರಿಸಿದ್ದೇನೆ.ಯಾವುದೇ ಕಪ್ಪಚುಕ್ಕೆ ಇಲ್ಲದ ರಾಜಕೀಯ ಜೀವನ ಮಾಡಿದ್ದೇನೆ ಎಂದು ವಿರೋಧಿಗಳಿಗೆ ಖಡಕ್ಕ ಸಂದೇಶ ರವಾನಿಸಿದರು.

ಶಾಂತಿಯಿಂದ ವರ್ತಿಸಲು ಕಾರ್ಯಕರ್ತರಿಗೆ ಕರೆ:

ಇತ್ತೀಚಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಾ ಬರುತ್ತಿದ್ದು, ಮಾರ್ಚ-05 ರಂದು ನಡೆದ ರಾಜೀವ ಭವನ ಉದ್ಘಾಟನಾ ಸಮಾರಂಭದಲ್ಲಿನ ಲೋಪ, ನಾಮಪತ್ರ ಸಲ್ಲಿಸುವ ವೇಳೆ ನಡೆದ ಕಲ್ಲೆಸೆತ, ನಿನ್ನೆ ಪ್ರಚಾರದಲ್ಲಿ ನಡೆದ ಘಟನೆಗಳು ಕ್ಷೇತ್ರದಲ್ಲಿ ಅಶಾಂತಿಯ ವಾತಾವರಣವನ್ನು ಹರಡುತ್ತಿವೆ ಮತ್ತು ಕ್ಷೇತ್ರದ ಜನರನ್ನು ಹಾಗೂ ಅಭಿಮಾನಿಗಳು/ಕಾರ್ಯಕರ್ತರನ್ನು ಆತಂಕಕ್ಕೆ ದೂಡುತ್ತಿವೆ.ಆದರೆ ಇದಕ್ಕೆ ದೃತಿಗೆಡೆದೆ ಶಾಂತಿಯಿಂದ ವರ್ತಿಸಲು ಕಾರ್ಯಕರ್ತರಿಗೆ ಪರಮೇಶ್ವರ ಕರೆ ನೀಡಿದರು.

ಯಾರೂ ಸಹ ಆತಂಕಕ್ಕೆ ಒಳಗಾಗಬಾರದು, ನಾನು ನಿಮ್ಮೆಲ್ಲರ ಆಶೀರ್ವಾದ ಹಾಗೂ ನೀವು ತೋರಿದ ಪ್ರೀತಿಯಿಂದಾಗಿ ಮತ್ತಷ್ಟು ಬಲಿಷ್ಠನಾಗಿದ್ದೇನೆ. ಕ್ರಿಯೆಗೆ, ಪ್ರತಿಕ್ರಿಯೆ ನನ್ನ ಉದ್ದೇಶವಲ್ಲ. ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಇದು ಚುನಾವಣಾ ಸಮಯ ಶಾಂತಿಯಿಂದ ವರ್ತಿಸಿ, ಯಾವುದೇ ಅಹಿತಕರ ಘಟನೆಗಲಿಗೆ ಅವಕಾಶ ನೀಡಬೇಡಿ. ಕ್ಷೇತ್ರದ ಜನತೆಗಾಗಿ ಇದ್ದೇನೆ. ವೈದ್ಯರು ಅವಕಾಶ ನೀಡಿದರೆ ನಾಳೆಯಿಂದಲೇ ಪ್ರಚಾರಕ್ಕೆ ಧುಮುಕುತ್ತೇನೆ ಎಂದು ಅವರು ಹೇಳಿದರು.

ಆರೋಗ್ಯ ವಿಚಾರಿಸಿದ ಗಣ್ಯರಿಗೆ ಅಬಾರಿ:
ಘಟನೆ ನಡದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಬೇಡಿ ಎಂದು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೆಂದ್ರ ಮಹಾಸ್ವಾಮೀಜಿ ಸೇರಿದಂತೆ ಅನೇಕರು ಮಠಾಧೀಶರು, ಸಾಹಿತಿಗಳು ಮತ್ತು ಹೋರಾಟಗಾರರು ದೂರವಾಣಿ ಕರೆ ಮಾಡಿ,ಆರೋಗ್ಯ ವಿಚಾರಿಸಿದರು. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಪ್ರಮುಖರ ಭೇಟಿ:
ಕಲ್ಲೆಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪರಮೇಶ್ವರ ಅವರು ನಿವಾಸಕ್ಕೆ ರಾಮಕೃಷ್ಣ ಮಠದ ಶ್ರೀ ವಿರೇಶಾನಂದ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಮಹಾಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು, ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ರಾಜಣ್ಣ, ಷಡಕ್ಷರಿ, ಇಕ್ಬಾಲ್ ಅಹಮ್ಮದ್, ಗ್ರಾಮಾಂತರ ಅಭ್ಯರ್ಥಿ ಷಣ್ಮಖಪ್ಪ ಮುಂತಾದವರು ಡಾ.ಪರಮೇಶ್ವರ ಪ್ರೊ.ರವಿವರ್ಮಕುಮಾರ್ ಮುಂತಾದವರು ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.

Leave a Reply

Your email address will not be published. Required fields are marked *