ತುಮಕೂರು: ಹದಿನೆಂಟನೆಯ ಶತಮಾನದಲ್ಲೇ ಕಲ್ಯಾಣರಾಜ್ಯದ ಪರಿಕಲ್ಪನೆಯನ್ನು ನನಸಾಗಿಸಿದ ದಿಟ್ಟ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಅತ್ಯುತ್ತಮ ಮಾದರಿ ಎಂದು ಲೇಖಕ, ವಿದ್ವಾಂಸ ಆಶುತೋಷ್ ಅದೋನಿ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ‘ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಮತ್ತು ಸಾಧನೆಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಹಲ್ಯಾಬಾಯಿ ಕಾಲದಲ್ಲಿ ಮಾಳ್ವ ಪ್ರದೇಶವು ಭಾರತದ ಅತ್ಯಂತ ಶ್ರೀಮಂತ ರಾಜ್ಯವೆಂದು ಗುರುತಿಸಿಕೊಂಡಿತ್ತು. ತನ್ನ ಪತಿ ಹಾಗೂ ಮಗನನ್ನು ಅಕಾಲದಲ್ಲಿ ಕಳೆದುಕೊಂಡ ಆಕೆ ಅನೇಕ ತೊಂದರೆಗಳನ್ನು ಮೆಟ್ಟಿನಿಂತು ದಕ್ಷ ಆಡಳಿತ ನೀಡಿದಳು. ಏಕಾಂಗಿ ಹೋರಾಟ ಮಾಡಿ ಸುಖೀರಾಜ್ಯವನ್ನು ಸ್ಥಾಪಿಸಿದಳು ಎಂದು ವಿವರಿಸಿದರು.
ಅಹಲ್ಯಾಬಾಯಿಯ ಮಾವ ಮಲ್ಹಾರ ರಾವ್ ಆಕೆಯನ್ನು ಗಂಡುಮಕ್ಕಳಿಗೆ ಸರಿಸಮನಾಗಿ ಬೆಳೆಸಿ ರಾಜಕಾರ್ಯಗಳ ಅನುಭವ ನೀಡಿದರು. ಯುದ್ಧವಿದ್ಯೆ, ವಾಕ್‍ಚಾತುರ್ಯ, ದೂರದೃಷ್ಟಿ ಎಲ್ಲವನ್ನೂ ಕರಗತ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿದರು. ಮಹಿಳಾ ಸಬಲೀಕರಣದ ಬಗ್ಗೆ ನಾವು ಈಗ ಮಾತಾಡುತ್ತಿದ್ದೇವೆ. ಇದನ್ನು ಮುನ್ನೂರು ವರ್ಷಗಳ ಹಿಂದೆಯೇ ಭಾರತದ ಪ್ರಾಂತ್ಯವೊಂದು ಮಾಡಿತೋರಿಸಿತ್ತು ಎಂದು ವಿಶ್ಲೇಷಿಸಿದರು.
ಸಚ್ಚಾರಿತ್ರ್ಯವಿಲ್ಲದೆ ಯಾವುದೇ ರಾಷ್ಟ್ರ ಎದ್ದುನಿಲ್ಲದು. ಯಾರೇ ಆಡಳಿತಗಾರರು ಶ್ರೇಷ್ಠರು ಎನಿಸಿಕೊಳ್ಳಲಾರರು. ಆದರೆ ಅಹಲ್ಯಾಬಾಯಿ ನೈತಿಕವಾಗಿ ಅದ್ಭುತ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಅವರ ವೈಯಕ್ತಿಕ ಬದುಕು ಪಾರದರ್ಶಕವಾಗಿತ್ತು. ಚಾರಿತ್ರ್ಯಕ್ಕೂ ರಾಜಕೀಯಕ್ಕೂ ಸಂಬಂಧವಿದೆ ಎಂಬುದನ್ನು ಆಕೆ ತೋರಿಸಿಕೊಟ್ಟರು ಎಂದರು.
ಅಹಲ್ಯಾಬಾಯಿಗೆ ಸಾಮಾಜಿಕ ಜವಾಬ್ದಾರಿಯ ಸ್ಪಷ್ಟ ಕಲ್ಪನೆಯಿತ್ತು. ನೀರಿನ ರಕ್ಷಣೆ, ಪ್ರಕೃತಿಯ ಪರಿಪಾಲನೆ, ಪರಿಸರ ಸಂರಕ್ಷಣೆ, ಉದ್ಯೋಗ ವೃದ್ಧಿ ಮುಂತಾದ ಆಧುನಿಕ ಅಗತ್ಯಗಳನ್ನು ಆಕೆ ಮನಗಂಡಿದ್ದಳು. ಇಂದಿನ ಯುವ ಜನತೆ ಅವರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಎಂತಹ ಸಮಸ್ಯೆಗಳು ಇದ್ದರೂ ಸಹ ಖಿನ್ನತೆಗೆ ಒಳಪಡದೆ ಧೈರ್ಯವಾಗಿ ಜೀವನವನ್ನು ಸಾಗಿಸಬೇಕು ಎಂಬುದನ್ನು ಅಹಲ್ಯಾಬಾಯಿಯ ಬದುಕನ್ನು ನೋಡಿ ಕಲಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಮಾತನಾಡಿ, ಕಟ್ಟುಪಾಡುಗಳ ಮಧ್ಯೆಯೂ ಮನಸ್ಸು ಮಾಡಿದರೆ ಮಹಿಳೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಹೋಳ್ಕರ್ ಉತ್ತಮ ಮಾದರಿಯಾಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.
ಮುನ್ನೂರು ವರ್ಷಗಳ ಹಿಂದೆ ಭಾರತದ ಪರಿಸ್ಥಿತಿ ಹೇಗಿತ್ತೆಂದು ಊಹಿಸಬಹುದು. ಅಷ್ಟು ಅಡೆತಡೆಗಳ ನಡುವೆ ಆಕೆ ಹೊಂದಿದ್ದ ಕಲ್ಯಾಣರಾಜ್ಯದ ಕಲ್ಪನೆ ಶ್ರೇಷ್ಠವಾದದ್ದು. ಅಹಲ್ಯಾಬಾಯಿ ಬಗ್ಗೆ ಹೆಚ್ಚಿನ ಓದು, ಅಧ್ಯಯನ, ಸಂಶೋಧನೆ ನಡೆಯಬೇಕು ಎಂದರು.
ಸಿಂಡಿಕೇಟ್ ಸದಸ್ಯ ಡಾ. ಕೆ. ರಾಜೀವಲೋಚನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ. ವಿ. ಸ್ವಾಗತಿಸಿದರು. ಡಾ. ಜಿ. ಗಿರಿಜಮ್ಮ ವಂದಿಸಿದರು. ಅಖಿಲಾಂಡೇಶ್ವರಿ ನಿರೂಪಿಸಿದರು. ಬೆಂಗಳೂರಿನ ಕಲಾಸಂಪದ ಸಂಸ್ಥೆಯ ವಿದುಷಿ ವೀಣಾ ಸಿ. ಶೇಷಾದ್ರಿಯವರ ತಂಡವು ‘ಚಿನ್ಮಾತೆ ಅಹಲ್ಯಾ- ತ್ರಿಶತಿ ಅತುಲ್ಯ’ ಎಂಬ ನೃತ್ಯರೂಪಕವನ್ನು ಪ್ರಸ್ತುತಪಡಿಸಿತು.