ಅಂಬೇಡ್ಕರ್‌ರವರ ಜ್ಞಾನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು

ತುಮಕೂರು : ಇಂದಿನ ಯುವ ಪೀಳಿಗೆಗೆ ಡಾ: ಬಿ.ಆರ್.ಅಂಬೇಡ್ಕರ್ ರವರ ಜ್ಞಾನ ಆದರ್ಶವಾಗಬೇಕು. ಅವರ ಸಮಗ್ರ ಕೃತಿಗಳನ್ನು ಓದುವುದರ ಮೂಲಕ ಜ್ಞಾನವನ್ನು, ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾದ ನಹೀದಾ ಜಮ್ ಜಮ್ ತಿಳಿಸಿದರು.

 ಅವರಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯ, ಡಾ:ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ “ಭಾರತ ರತ್ನ ಡಾ: ಬಿ.ಆರ್.ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

  ನಿರಂತರ ಅಧ್ಯಯನ, ಏಕಾಗ್ರತೆ, ಸ್ವಅರಿವು, ಶಿಸ್ತು, ದೃಢಸಂಕಲ್ಪ ಇವೆಲ್ಲವನ್ನು ಮೈಗೂಡಿಸಿಕೊಂಡ ಕಾರಣದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಗತ್ ಪ್ರಸಿದ್ಧಿಯನ್ನು ಪಡೆದು ಈ ದೇಶದ ಶೋಷಿತರ

ಮತ್ತು ಮಹಿಳೆಯರ ಬೆಳಕಾಗಿ ಇಂದಿಗೂ ಸಾಧನೆಯ ಶಿಖರವಾಗಿದ್ದಾರೆ. ಇಂದಿನ ವಿದ್ಯಾರ್ಥಿಗಳು ಮೌಢ್ಯತೆಗಳಿಗೆ ಮಾರು ಹೋಗದೆ ವೈಚಾರಿಕ ಮನೋಭಾವದಿಂದ ದೇಶವನ್ನು ಕಟ್ಟಲು ಅನೇಕ ರೀತಿಯ ಬರಹ ಭಾಷಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

 ತುಮಕೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ ನಿರ್ದೇಶಕ ಪ್ರೊ. ಬಿ. ರಮೇಶ್ ಅವರು ಮಾತನಾಡುತ್ತಾ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳು ಇಂದಿಗೆ ಅತ್ಯಗತ್ಯವಾಗಿ ಬೇಕಾಗಿದೆ. ಇಂದಿನ ಸಮಾಜವು ಆಧುನಿಕತೆಯ ಮಾರ್ಗದಲ್ಲಿ ಸಾಗುತ್ತಿದ್ದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಕೋಮುವಾದ, ಅಸಮಾನತೆ, ಬಂಡವಾಳ ಶಾಹಿ ವ್ಯವಸ್ಥೆ ಇವೆಲ್ಲವು ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಿವೆ. ಡಾ. ಬಿ.ಆರ್.ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಾಗ ಸಂವಿಧಾನದ ನೈಜ ಆಶಯಗಳು ಅರ್ಥವಾಗುತ್ತವೆ. ಸಮಾಜವು ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.  

ಡಾ. ಬಿ.ಆರ್.ಅಂಬೇಡ್ಕರ್ ರವರ ವಿಚಾರ ಧಾರೆಗಳು ಜೀವಪರ ಮಾನವೀಯತೆಯ ನೆಲೆಗಟ್ಟಿನಿಂದ ಕೂಡಿದ್ದು, ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಜಾತ್ಯಾತೀತತೆ ಮುಂತಾದ ಅಂಶಗಳು ಈ ದೇಶಕ್ಕೆ ಅನಿವಾರ್ಯವಾಗಿದ್ದು ಇವುಗಳನ್ನು ಕಾಯ್ದುಕೊಳ್ಳಲು ಇಂದಿನ ಯುವಕರು ಸದಾ ಸನ್ನದ್ಧರಾಗಬೇಕು ಎಂದು ತಿಳಿಸಿದರು.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಸುರೇಶ್ ಕುಮಾರ್ ಅವರು ಮಾತನಾಡುತ್ತಾ, ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖೇನ ಪ್ರತಿವರ್ಷವು ವಿಶೇಷ ಘಟಕ ಯೋಜನೆಯಡಿ “ ಡಾ: ಬಿ.ಆರ್. ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುತ್ತಿದೆ. ಈ ಕಾರ್ಯಕ್ರಮವನ್ನು ಪ್ರತಿ ವರ್ಷವು ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಇಂದಿನ ಕಾರ್ಯಕ್ರಮವು ಈ ವರ್ಷದ ಪ್ರಥಮ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಡಿ ಕಾಲೇಜು ಮಕ್ಕಳಿಗೆ ಡಾ: ಬಿ. ಆರ್. ಅಂಬೇಡ್ಕರ್ ಜೀವನ, ಸಾಧನೆ, ಬರಹ, ಭಾಷಣಗಳನ್ನು ಕುರಿತಂತೆ ಪ್ರಬಂಧ, ಆಶುಭಾಷಣ, ಚರ್ಚಾ ಸ್ಪರ್ಧೆ, ಕವನ ವಾಚನ ಮೊದಲಾದ ವಿಷಯಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಅದರಲ್ಲಿ ವಿಜೇತ ಮಕ್ಕಳಿಗೆ ಪುಸ್ತಕ ರೂಪದಲ್ಲಿ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ತರನಮ್ ನಿಖತ್.ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

Leave a Reply

Your email address will not be published. Required fields are marked *