ಎಸ್‍ಸಿ-ಎಸ್‍ಟಿ ಸಮುದಾಯ ನಿಂದಿಸುವವರ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ

ತುಮಕೂರು: ಜಿಲ್ಲೆಯಲ್ಲಿ ಎಸ್‍ಸಿ-ಎಸ್‍ಟಿ ಸಮುದಾಯದ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಮನ್ವಯ ನೌಕರರ ಸಂಘದ ಅಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಅವರು, ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನೇರವಾಗಿ ಅಥವಾ ಪರೋಕ್ಷವಾಗಿ ಎಸ್ಸಿ-ಎಸ್ಟಿ ನೌಕರರ/ಅಧಿಕಾರಿಗಳ ಮೇಲೆ ಮಾನಸಿಕ ಒತ್ತಡಗಳ ಸೃಷ್ಟಿ ಮಾಡಿ ಮಾನಸಿಕ ಹಿಂಸೆ ಕೊಡುವುದರ ಮೂಲಕ ಕಾನೂನು ರೀತಿ ಕೆಲಸ ನಿರ್ವಹಿಸಲು ಕೆಲವು ವ್ಯಕ್ತಿಗಳು ಅಡಚಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಸಿರಾ ತಾಲ್ಲೂಕು ತಹಶೀಲ್ದಾರ್ ಮತ್ತು ದಂಡಾಧಿಕಾರಿಗಳಾದ ಮಮತಾರವರ ಕುರಿತು ಅವರ ಕಚೇರಿಯನ್ನು ಬೆಡ್ ರೂಂಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುತ್ತಾರೆ, ಪರಿಶಿಷ್ಟ ಜಾತಿಯ ಅಧಿಕಾರಿಗಳ ಮೇಲೆ ಈ ತರದ ಅವಹೇಳನ, ಒತ್ತಡ ಇಡೀ ನಾಗರಿಕ ಸಮಾಜದ ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದರು.

ಕಳೆದ ಕೆಲವು ದಿನಗಳ ಹಿಂದೆ ಶಿಕ್ಷಕರಿಬ್ಬರು ಫೆÇೀನ್ ಸಂಭಾಷಣೆಯಲ್ಲಿ ಮಾದಿಗ ಸಮುದಾಯ ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನ ಮಾಡಿರುವುದರ ಬಗ್ಗೆ ವಿಶೇಷವಾಗಿ ಮಾದಿಗ ಸಮುದಾಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾದಿಗ ಸಮುದಾಯದ ಅಧಿಕಾರಿಗಳು ತಾಲ್ಲೂಕಿನಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಎಂಬ ಆಘಾತಕಾರಿ, ಅಮಾನವೀಯ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇಂತಹ ಜಾತಿ ದ್ವೇಷದ ಮಾತುಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳಿಗೆ ಆತಂಕವನ್ನುಂಟು ಮಾಡಿದೆ. ಜನಾಂಗೀಯ ನಿಂದನೆ ಮಾಡಿರುವ ಕುರಿತು ತನಿಖೆ ಮಾಡಿ ಸಂಬಂಧಪಟ್ಟವರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜು, ಗಂಗಾಧರ್, ಲಕ್ಷ್ಮೀರಂಗಯ್ಯ, ಡಾ.ಸಿ.ಸುರೇಶ್, ಹನುಮಂತರಾಯಪ್ಪ, ಮಂಜುನಾಥ್, ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *