ತುಮಕೂರು : ಜಿಲ್ಲೆಯಲ್ಲಿ 1 ರಿಂದ 15 ವರ್ಷದ ಮಕ್ಕಳಿಗೆ JE-Japanese Encephalitis(ಮೆದುಳು ಜ್ವರ) ಲಸಿಕೆ ನೀಡಲು ಡಿಸೆಂಬರ್ ಮಾಹೆಯಲ್ಲಿ 1 ತಿಂಗಳ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದಲ್ಲಿ ಯಾವುದೇ ಮಗುವು ಲಸಿಕೆಯಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಆರೋಗ್ಯ ಹಾಗೂ ಶಿಕ್ಷಣ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿಂದು ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೆದುಳು ಜ್ವರ ಯಾವುದೇ ವಯಸ್ಸಿನವರಿಗೂ ಬರುವ ಸಾಧ್ಯತೆ ಇದ್ದರೂ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೆದುಳುಜ್ವರ ತಗುಲಿದ 100 ಮಂದಿಯಲ್ಲಿ ಶೇ.30ರಷ್ಟು ಮಂದಿಗೆ ಸಾವು ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳಿಗೆ ಉಚಿತವಾಗಿ ಈ ಲಸಿಕೆ ನೀಡಲಾಗುತ್ತಿದ್ದು, ಅಭಿಯಾನದ ಮೊದಲೆರಡು ವಾರದಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಮಕ್ಕಳಿಗೆ ಲಸಿಕೆ ನೀಡಲಾಗುವುದು. ನಂತರ ಅಂಗನವಾಡಿ ಹಾಗೂ ಇನ್ನೂ ಶಾಲೆಗೆ ಸೇರದ ಮಕ್ಕಳಿಗೆ ಲಸಿಕೆ ನೀಡಲು ಕ್ರಮ ವಹಿಸಲಾಗುವುದು. ಲಸಿಕೆಯಿಂದ ಯಾವುದೇ ಮಗು ತಪ್ಪಿ ಹೋಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲಾ ಶಿಕ್ಷಕರು ಲಸಿಕೆ ನೀಡುವ ಹಾಗೂ ಲಸಿಕಾ ದಿನದ ಬಗ್ಗೆ ಮಕ್ಕಳ ಪೋಷಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ, ತಪ್ಪದೇ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಬಗ್ಗೆ ಪೋಷಕರ ಸಭೆ ಕರೆದು ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸರ್ವೆಲೆನ್ಸ್ ಅಧಿಕಾರಿ ಡಾ: ಸುಧೀರ್ ನಾಯಕ್ ಸಭೆಗೆ ಮಾಹಿತಿ ನೀಡುತ್ತಾ, ಮೆದುಳುಜ್ವರ ರೋಗಕ್ಕೆ ತುತ್ತಾದವರು ಚಿಕಿತ್ಸೆಯಿಂದ ಗುಣಹೊಂದಿದರೂ, ಪಾಶ್ರ್ವವಾಯು, ಮಾನಸಿಕ ಅಸ್ವಸ್ಥತೆ, ಅಂಗವೈಕಲ್ಯ, ಮಾತನಾಡಲು ಬಾರದಿರುವುದು ಸೇರಿದಂತೆ ಶೇ. 50ರಷ್ಟು ದೈಹಿಕ ನ್ಯೂನ್ಯತೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಮಕ್ಕಳಿಗೆ ಈ ಲಸಿಕೆಯನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ತಿಳಿಸಿದರು.
ಮೆದುಳುಜ್ವರ ಕಂಡು ಬಂದಿರುವ ದೇಶದ 336 ಜಿಲ್ಲೆಗಳಲ್ಲಿ ಈಗಾಗಲೇ ಮಕ್ಕಳಿಗೆ ಜೆಇ ಲಸಿಕೆ ನೀಡಲಾಗುತ್ತಿದ್ದು, 2006ರಿಂದಲೇ ರಾಜ್ಯದ 10 ಜಿಲ್ಲೆಗಳಲ್ಲಿ ಲಸಿಕಾ ಕಾರ್ಯಕ್ರಮ ಅನುಷ್ಠಾನದಲ್ಲಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಮೆದುಳುಜ್ವರ ಪ್ರಕರಣಗಳು ವರದಿಯಾಗಿರುವುದರಿಂದ ಈ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸೊಳ್ಳೆ ಕಚ್ಚುವುದರಿಂದ ಮೆದುಳುಜ್ವರ ಹರಡುತ್ತದೆ. ಜೆಇ ವೈರಸ್ ಇರುವ ಹಂದಿ ಹಾಗೂ ವಲಸೆ ಬಂದ ಪಕ್ಷಿಗಳನ್ನು ಕಚ್ಚಿದ ಸೊಳ್ಳೆ ಮನುಷ್ಯರಿಗೆ ಕಚ್ಚಿದಾಗ ರೋಗ ಹರಡುವುದರಿಂದ ಸಾರ್ವಜನಿಕರು ಸೊಳ್ಳೆ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಲಸಿಕೆ ಪಡೆಯುವುದರಿಂದ ಮೆದುಳು ಜ್ವರವನ್ನು ನಿಯಂತ್ರಿಸಬಹುದಾದ್ದರಿಂದ ತಪ್ಪದೇ ಮಕ್ಕಳಿಗೆ ಜೆಇ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವರಾಜ್ ಮಾತನಾಡಿ, ಜಿಲ್ಲೆಯಲ್ಲಿ 1 ರಿಂದ 15 ವರ್ಷದ 523544 ಮಕ್ಕಳಿಗೆ ಜೆಇ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಜೆಇ ಲಸಿಕಾ ಅಭಿಯಾನದಲ್ಲಿ 3879 ಶಾಲೆ, 2825 ಸಮುದಾಯ ಮಟ್ಟದ ಪ್ರದೇಶ ಹಾಗೂ 270 ಊigh ಡಿisಞ(ಹೆಚ್ಚು ಅಪಾಯವಿರುವ) ಪ್ರದೇಶ ಸೇರಿದಂತೆ 6974 ಪ್ರದೇಶಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 826 ಲಸಿಕಾದಾರರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ನಂತರ ನಡೆದ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆಗೆ ಮಾಹಿತಿ ನೀಡಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಮೋಹನ್‍ದಾಸ್ ಅವರು ಜಿಲ್ಲೆಯಲ್ಲಿ 2022ರ ಜನವರಿಯಿಂದ ಅಕ್ಟೋಬರ್‍ವರೆಗೆ 150 ಡೆಂಗ್ಯೂ, 84 ಚಿಕುನ್‍ಗುನ್ಯಾ, 12 ಮೆದುಳುಜ್ವರ, 44 ಆನೆಕಾಲು ರೋಗ, 3279 ಕರುಳುಬೇನೆ, 44 ಕುಷ್ಠರೋಗ, 49088 ಕಫ ಪರೀಕ್ಷೆಯಿಂದ 1872 ಕ್ಷಯರೋಗ, 1 ಹೆಚ್‍ಒನ್‍ಎನ್‍ಒನ್, 17434 ನಾಯಿ ಕಡಿತ, 426 ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಯಾವುದೇ ಕಾಲರಾ ಪ್ರಕರಣಗಳು ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.
ಯಾವುದೇ ನಾಯಿ ಕಚ್ಚಿದಾಗ ಕಚ್ಚಿದ ಜಾಗವನ್ನು ಕನಿಷ್ಠ 15 ನಿಮಿಷ ಸೋಪಿನ ನೀರಿನಿಂದ ತೊಳೆಯುವುದರಿಂದ ಶೇ.50ರಷ್ಟು ರೇಬಿಸ್ ರೋಗವನ್ನು ನಿಯಂತ್ರಿಸಬಹುದು. ಕಚ್ಚಿದ ಜಾಗಕ್ಕೆ ಯಾವುದೇ ರೀತಿಯ ಪುಡಿ, ಅಂಟು ಹಾಕದೆ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ: ವೀಣಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಪಾಲಿಕೆ ಆರೋಗ್ಯಾಧಿಕಾರಿ ಡಾ: ರಕ್ಷಿತ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಂಜಿನಪ್ಪ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.