
ತುಮಕೂರು:ಪಕ್ಷದ ಟಿಕೇಟ್ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ನನ್ನನ್ನು ಕನಿಷ್ಠ ಸೌಜನ್ಯಕ್ಕೂ ಯಾವೊಬ್ಬ ನಾಯಕರು ಭೇಟಿ ನೀಡಿ ಮಾತನಾಡಿಸುವ ಕೆಲಸ ಮಾಡದ ಕಾಂಗ್ರೆಸ್ ಮುಖಂಡರ ಮನಸ್ಥಿತಿಯನ್ನು ಖಂಡಿಸಿ,ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನ ಎರಡಕ್ಕೂ ರಾಜೀನಾಮೆ ಸಲ್ಲಿಸಿರುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹ್ಮದ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಮಾಜಿ ಶಾಸಕರೊಬ್ಬರು ರಾಜೀನಾಮೆ ಕೊಟ್ಟ ತಕ್ಷಣ,ಜಿಲ್ಲಾ ಉಸ್ತುವಾರಿ ಮೈಯೂರ ಜಯರಾಮ್ ಸೇರಿದಂತೆ ಆನೇಕ ನಾಯಕರು ಅವರನ್ನು ಭೇಟಿ ಮಾಡಿ, ಮನವೊಲಿಸುವ ಕೆಲಸ ಮಾಡಿದಿರಿ, ಆದರೆ ಕಳೆದ ಹತ್ತಾರು ವರ್ಷಗಳಿಂದ ಪಕ್ಷ ಕಟ್ಟಿದ ನನ್ನಗೆ ಮೋಸವಾಗಿರುವುದು ಗೊತ್ತಿದ್ದು, ಸೌಜನ್ಯಕ್ಕೂ ಭೇಟಿಯಾಗದಿರುವುದು ಟಿಕೇಟ್ ಸಿಗದಿರುವುದಕ್ಕಿಂತಲೂ ಹೆಚ್ಚು ಬೇಸರ ತರಿಸಿದೆ.ಪಕ್ಷಕ್ಕೆ ದುಡಿದವರ ಸ್ಥಿತಿಯೇ ಹೀಗಾದರೆ ಉಳಿದವರ ಪಾಡೇನು ಎಂಬ ಅಂಶ ನಮ್ಮ ಮನದಲ್ಲಿ ಕೊರೆಯುತ್ತಿದೆ.ಆ ನೋವನ್ನು ತುಂಬಾ ದಿನ ಹಿಡಿದಿಟ್ಟುಕೊಳ್ಳಲಾಗದೆ ಇಂದು ಪಕ್ಷದ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಆತೀಕ್ ಅಹಮದ್ ತಿಳಿಸಿದರು.
ತುಮಕೂರು ನಗರ ಕ್ಷೇತ್ರದಿಂದ ಟಿಕೇಟ್ ನೀಡಿರುವ ವ್ಯಕ್ತಿ ಅಲ್ಪಸಂಖ್ಯಾತರೇ ಅಗಿದ್ದರೂ,ಪಕ್ಷ ಗೆಲ್ಲಬೇಕೆಂಬ ಉದ್ದೇಶದಿಂದ ಟಿಕೇಟ್ ನೀಡಿಲ್ಲ. ಬದಲಾಗಿದೆ ಒಳಒಪ್ಪಂದ ಮಾಡಿಕೊಂಡು, ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಅಲ್ಪಸಂಖ್ಯಾತರೊಬ್ಬರಿಗೆ ಟಿಕೇಟ್ ನೀಡಲಾಗಿದೆ.ಈ ಒಳ ಒಪ್ಪಂದ ಜಾರಿಯಾಗಲು ಎಂದಿಗೂ ಅವಕಾಶ ನೀಡುವುದಿಲ್ಲ.ಈಗಾಗಲೇ ಬಿಜೆಪಿ ಟಿಕೇಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಇತರರೊಂದಿಗೆ ಚರ್ಚಿಸಿ,ತುಮಕೂರು ನಗರ ಕ್ಷೇತ್ರದಲ್ಲಿ ಒಳಒಪ್ಪಂದ ಉರ್ಜಿತವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಹಿಂದೆ, ಮುಂದೆ, ಎಂದೆಂದಿಗೂ ನಮ್ಮ ನಾಯಕರು, ನಾನು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿ ಆಯ್ಕೆಯಾಗಲು ಅವರೇ ಕಾರಣ.ಟಿಕೇಟ್ ಸಿಗದೆ ನೊಂದಿದ್ದ ನನನ್ನು ಸೌಜನ್ಯಕ್ಕೂ ಮಾತನಾಡಿಸದಿರುವುದು ಬಹಳ ನೋವುಂಟು ಮಾಡಿದೆ.ಅವರ ಒಳ ಒಪ್ಪಂದಗಳು ಏನೇ ಇರಲಿ, ನನಗೂ ಮಾತು ಹೇಳಬಹುದಿತ್ತಲ್ಲವೇ? ಅವರು ನಾಯಕರಾಗಿ ಎತ್ತರಕ್ಕೆ ಬೆಳೆಯಲಿ, ನನ್ನಂತೆ ಇತರರಿಗೆ ನೋವುಂಟಾಗದಂತೆ ನೋಡಿಕೊಳ್ಳಲಿ ಎಂದು ನೋವು ತೋಡಿಕೊಂಡರು.
ಈ ವೇಳೆ ಬ್ಲಾಕ್ ಅಧ್ಯಕ್ಷ ಮಹಮದ್ ಷಫೀಕ್, ಉಪಾಧ್ಯಕ್ಷೆ ಸೈಯದ್ ಸಮೀಮ್, ಸುಹೇಲ್, ಬಷೀರ್ ಮತ್ತಿತರರಿದ್ದರು.