ಬಿಜೆಪಿ ಬೆಂಬಲಿಸಲು ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಬೇಕು: ಡಾ.ಎಂ.ಆರ್.ಹುಲಿನಾಯ್ಕರ್

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಲಿಂಗಾಯಿತ, ಒಕ್ಕಲಿಗ ಸಮುದಾಯದ ಬಳಿಕ ಹಿಂದುಳಿದ ವರ್ಗದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಜಿಲ್ಲೆಯ 11 ಕ್ಷೇತ್ರದಲ್ಲಿ ಒಬ್ಬ ಹಿಂದುಳಿದ ವರ್ಗದವರಿಗೂ ಟಿಕೆಟ್ ಅವಕಾಶ ದೊರೆತಿಲ್ಲ. ಹಿಂದುಳಿದ ವರ್ಗದವರು ಬಿಜೆಪಿ ಬೆಂಬಲಿಸಲು ಸಮುದಾಯದ ನಾಯಕರುಗಳಿಗೆ ಪ್ರಾತಿನಿಧ್ಯ ಕೊಡುವ ಕಾರ್ಯ ಆಗಬೇಕಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ತಿಳಿಸಿದ್ದಾರೆ.

ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮೂರು ಹಂತದ ಪಟ್ಟಿಯನ್ನು ಬಿಡುಗಡೆಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಬ್‍ಕಾ ಸಾಥ್ ಸಬ್‍ಕಾ ವಿಶ್ವಾಸ್ ತತ್ವಕ್ಕೆ ಪೂರಕವಾಗಿ ಟಿಕೆಟ್ ಹಂಚಿಕೆಯಾಗಿಲ್ಲ ಎನಿಸುತ್ತಿದೆ ಎಂದಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಸಬ್‍ಕಾ ಸಾಥ್ ಸಬ್‍ಕಾ ವಿಶ್ವಾಸ್ ತತ್ವದಡಿ ಹಿಂದುಳಿದವರು ಸೇರಿ ಎಲ್ಲಾ ವರ್ಗದವರಿಗೂ ಕಾರ್ಯಕ್ರಮ ರೂಪಿಸಿ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಮೋದಿ ಅವರ ಕಾರ್ಯಕ್ರಮ ಮೆಚ್ಚಿ ಹಿಂದುಳಿದ ಸಮುದಾಯಗಳು ಅವರನ್ನು ಬೆಂಬಲಿಸಲು ಸಿದ್ದರಿದ್ದಾರೆ. ಆದರೆ ರಾಜ್ಯ, ಜಿಲ್ಲಾಮಟ್ಟದಲ್ಲಿ ಹಿಂದುಳಿದ ವರ್ಗಗಳ ಟಿಕೆಟ್ ಆಕಾಂಕ್ಷಿತರಿಗೆ ಚುನಾವಣಾ ಸಂದರ್ಭದಲ್ಲಿ ಸಮಾನ ಪ್ರಾತಿನಿಧ್ಯ ಕಲ್ಪಿಸದೆ ದೂರವಿಟ್ಟಿರುವುದು ಸಮಂಜಸವಲ್ಲ ಎಂದಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಸಾಮಾನ್ಯ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆಯಾಗಿಲ್ಲ ತುಮಕೂರು ನಗರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು, ಗುಬ್ಬಿ ಕ್ಷೇತ್ರಕ್ಕೆ ಬೆಟ್ಟಸ್ವಾಮಿ ಅವರ ಹೆಸರು ದಿಲ್ಲಿಮಟ್ಟದವರೆಗೆ ಶಿಫಾರಸ್ಸಾಗಿತ್ತು. ಒಳ್ಳೆಯವರು, ಟಿಕೆಟ್ ಪಡೆಯಲು ನೀವು ಹೆಚ್ಚು ಅರ್ಹರು ಎಂದೆಲ್ಲ ಪಕ್ಷದ ಪ್ರಮುಖರು ಹೇಳುತ್ತಾರೆ. ಆದರೆ ಟಿಕೆಟ್ ಹಂಚಿಕೆ ಮಾಡುವಾಗ ಮಾತ್ರ ಹಿಂದುಳಿದವರನ್ನು ಕೈ ಬಿಡಲಾಗಿದೆ. ಹಿಂದುಳಿದ ವರ್ಗದವರನ್ನು ಬರೀ ಪಕ್ಷದ ಸಂಘಟನೆ, ಪ್ರಚಾರ ಕಾರ್ಯಕ್ಕೆ ಸೀಮಿತಗೊಳಿಸಿದರೆ ಹೇಗೆ? ಚುನಾವಣಾ ರಾಜಕೀಯಕ್ಕೆ ಅವಕಾಶ ಕಲ್ಪಿಸಿ ನಾಯಕತ್ವ ನೀಡಿದಾಗ ಮಾತ್ರ ಅಧಿಕಾರಸ್ಥಾನ ಹಿಡಿಯಲು ಸಾಧ್ಯವಾಗುತ್ತದೆ. ಪಕ್ಷ ಈ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದಂತೆ ಪಕ್ಷದ ಟಿಕೆಟ್ ಆಯ್ಕೆಯ ಪ್ರಮುಖ ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪರ ಟಿಕೆಟ್ ಇವರಿಗೆ ಕೊಡಲೆಬೇಕು ಕೊಡದೇ ಇದ್ದರೆ ನಾನು ಸ್ಪರ್ಧಿಸುವುದಿಲ್ಲ ಎಂದು ಗಟ್ಟಿಯಾಗಿ ಹೇಳುವ ನಾಯಕರ ಕೊರತೆ ಇದೆ. ಹಾಗಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಟಿಕೆಟ್ ವಂಚಿತರಾಗುತ್ತಿದ್ದು, ಹೀಗೆ ಮುಂದುವರಿದರೆ ಸಾಮಾಜಿಕ ನ್ಯಾಯ ಪರಿಕಲ್ಪನೆ ಬರೀ ಬಾಯಿಮಾತಿಗೆ ಸೀಮಿತವಾಗುತ್ತದೆ. ಹಿಂದುಳಿದ ವರ್ಗದವರು ದೂರ ಸರಿಯುವ ಆತಂಕವಿದೆ. ಹಿಂದುಳಿದ ಸಮುದಾಯದ ಬಳಿ ಹೋಗಿ ಮತ ಕೇಳುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನನ್ನ ಈ ಹೇಳಿಕೆ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಂತೆ ವರಿಷ್ಠರ ಗಮನಕ್ಕೆ ತರುವ ಉದ್ದೇಶವೇ ಹೊರತು. ಪಕ್ಷ ತೊರೆಯುತ್ತೇನೆ ಎಂದೂ ಅಲ್ಲ. ಪಕ್ಷ ಮುಂದಿನ ದಿನಗಳಲ್ಲಿ ಹಿಂದುಳಿದವರ ಕುರಿತಾಗಿ ತಮ್ಮ ನಿಲುವನ್ನು ಸರಿಪಡಿಸಿಕೊಳ್ಳುವ ವಿಶ್ವಾಸದೊಂದಿಗೆ ಮುಂದುವರಿದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಗತಿಯೋಜನೆಗಳನ್ನು ಮುಂದಿಟ್ಟು ಚುನಾವಣಾ ಪ್ರಚಾರದಲ್ಲೂ ತೊಡಗುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *